ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಓದಿನ ಹಸಿವು ನೀಗಿಸುವ ಸಂಜಯ್‌ಕುಮಾರ್‌:ಮನೆಯ ಗ್ರಂಥಾಲಯದಲ್ಲಿ 15 ಸಾವಿರ ಪುಸ್ತಕಗಳು

ಮನೆಯ ಗ್ರಂಥಾಲಯದಲ್ಲಿ 15 ಸಾವಿರ ಪುಸ್ತಕಗಳ ಸಂಗ್ರಹ
–ಸಿದ್ದರಾಜು
Published : 11 ಆಗಸ್ಟ್ 2024, 5:44 IST
Last Updated : 11 ಆಗಸ್ಟ್ 2024, 5:44 IST
ಫಾಲೋ ಮಾಡಿ
Comments

ಚನ್ನರಾಯಪಟ್ಟಣ: ‘ಜ್ಞಾನಭಂಡಾರದ ಕೇಂದ್ರಬಿಂದು ಗ್ರಂಥಾಲಯಗಳು. ಜ್ಞಾನಾರ್ಜನೆಗೆ ಅಗತ್ಯ ಪುಸ್ತಕಗಳು ಲಭ್ಯವಾಗಿವೆ’.

ಚನ್ನರಾಯಪಟ್ಟಣದ ನವೋದಯ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲರೂ ಆದ ಇಂಗ್ಲಿಷ್ ಉಪನ್ಯಾಸಕ ಎ.ಟಿ. ಸಂಜಯಕುಮಾರ್ ಅವರು ಹೇಳುವ ಮಾತಿದು. ಅದಕ್ಕೆ ತಕ್ಕಂತೆ ಅಡಗೂರು ಗ್ರಾಮದ ತೋಟದ ಮನೆಯಲ್ಲಿ ವಾತಾವರಣವನ್ನು ಅವರು ನಿರ್ಮಿಸಿದ್ದು, ಅಂದಾಜು 15 ಸಾವಿರ ಪುಸ್ತಕಗಳಿರುವ ಗ್ರಂಥಾಲಯಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಮನೆಯ ಒಂದು ಕೊಠಡಿಯಲ್ಲಿ ವ್ಯವಸ್ಥಿತವಾಗಿ ಪುಸ್ತಕಗಳನ್ನು ಜೋಡಿಸಿದ್ದಾರೆ. ಕನ್ನಡ ಮತ್ತು ಆಂಗ್ಲಭಾಷೆಯ ಪುಸ್ತಕಗಳು ಕಾಣಸಿಗುತ್ತವೆ. ಕನ್ನಡದಲ್ಲಿ ಕುವೆಂಪು, ದ.ರಾ. ಬೇಂದ್ರೆ, ಕೆ.ಪಿ. ಪೂರ್ಣಚಂದ್ರತೇಜಸ್ವಿ, ಡಿ.ವಿ. ಗುಂಡಪ್ಪ, ಗಿರೀಶ್ ಕಾರ್ನಾಡ್, ಕೆ. ಶಿವರಾಮಕಾರಂತ, ಮಾಸ್ತಿವೆಂಕಟೇಶ್ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಕೆ.ಎಸ್. ನರಸಿಂಹಸ್ವಾಮಿ, ಬಿ.ಜಿ.ಎಲ್. ಸ್ವಾಮಿ ಸೇರಿ ಅನೇಕ ಸಾಹಿತಿಗಳು ರಚಿಸಿರುವ ಕೃತಿಗಳಿವೆ. ಆಂಗ್ಲಭಾಷೆಯ ಸಾಹಿತಿಗಳಾದ ವಿಲಿಯಂ ಷೇಕ್ಸ್‌ಪಿಯರ್, ಮಿಲ್ಟನ್, ಕೀಟ್ಸ್, ವಿಲಿಯಂ ವರ್ಡ್ಸ್‌ವರ್ತ್, ಟಿ.ಎಸ್. ಈಲಿಯೆಟ್, ಡಬ್ಲು.ಬಿ. ಈಟ್ಸ್, ವಿಲಿಯಂ ಬ್ಲೇಕ್ ಬರೆದ ಅಪರೂಪದ ಪುಸ್ತಕಗಳು ಇವೆ.

ಕಲೆ, ಸಂಗೀತ, ಸಾಹಿತ್ಯ, ವಿಶ್ವಕೋಶ, ತತ್ವಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ವ್ಯಕ್ತಿತ್ವ ವಿಕಸನ, ಕೃಷಿ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ವಿಶ್ವ ಇತಿಹಾಸ, ನಾಟಕ, ಕಾದಂಬರಿ, ಕವನಗಳ ಸಂಗ್ರಹ, ಮಕ್ಕಳ ಕಥೆಗಳು, ಸಾಮಾಜಿಕ, ಶಿಕ್ಷಣ ಮತ್ತು ದೇಶದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗೆ ಸಂಬಂಧಿಸಿದ ಪುಸ್ತಕಗಳಿವೆ. ಇಷ್ಟು ಮಾತ್ರವಲ್ಲದೇ ಕನ್ನಡ ಮತ್ತು ಆಂಗ್ಲ ನಿಯತಕಾಲಿಕಗಳು, ದಿನಪತ್ರಿಕೆಗಳ ಆಯ್ದ ಲೇಖನಗಳನ್ನು ಸಂಗ್ರಹಿಸಿ ಬಂಡಲ್ ಮಾಡಿ ವ್ಯವಸ್ಥಿತವಾಗಿ ಸಂಗ್ರಹಿಸಿಡಲಾಗಿದೆ.

‘ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ, ಅಲ್ಲಿನ ಪ್ರಾಚೀನ ಗ್ರಂಥಾಲಯ ಮತ್ತು ಪಾಂಡವಪುರದಲ್ಲಿ ನೌಕರ ಅಂಕೇಗೌಡ ಆರಂಭಿಸಿರುವ ಗ್ರಂಥಾಲಯ ನನ್ನ ಮೇಲೆ ಪ್ರಭಾವ ಬೀರಿದ್ದರಿಂದ ಮನೆಯ ಒಂದು ಕೊಠಡಿಯನ್ನು ಗ್ರಂಥಾಲಯಕ್ಕೆ ಮೀಸಲಿಡಬೇಕಾಯಿತು’ ಎನ್ನುತ್ತಾರೆ ಸಂಜಯ್‌ಕುಮಾರ್‌.

ಆಸಕ್ತಿ ಇರುವವರು ಪುಸ್ತಕಗಳನ್ನು ಇವರಿಂದ ಎರವಲು ಪಡೆದು, ಓದಿದ ಬಳಿಕ ಹಿಂದಿರುಗಿಸುತ್ತಾರೆ. ಪುಸ್ತಕಗಳು ಕೆಡದಂತೆ ಪ್ರತಿವರ್ಷ ಸ್ವಚ್ಛಗೊಳಿಸಲಾಗುತ್ತದೆ. ಜೋಪಾನವಾಗಿ ಕಾಪಾಡಿಕೊಂಡು ಬರಲಾಗಿದೆ.

ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಓದುವ ಸಂಸ್ಕೃತಿ ಕಾಪಾಡಿಕೊಂಡು ಬರುವುದು ಮುಖ್ಯ. ಅಪರೂಪದ ಪುಸ್ತಕಗಳನ್ನು ಹುಡುಕಿಕೊಂಡು ತಾಲ್ಲೂಕಿನ ಜನತೆ ಬೇರೆಡೆ ಹೋಗುವುದನ್ನು ತಪ್ಪಿಸುವ ದೃಷ್ಟಿಯಿಂದ ಮನೆಯಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಭವಿಷ್ಯದ ಪೀಳಿಗೆಗೆ ಉಪಯೋಗ ಆಗಬೇಕು ಎಂಬ ಆಶಯ ಅವರದ್ದು.

ಹಳೆಯಕಾಲದ ರೇಡಿಯೋ ಟೇಪ್ ರೆಕಾರ್ಡರ್ ಕ್ಯಾಸೆಟ್‍ಗಳು.
ಹಳೆಯಕಾಲದ ರೇಡಿಯೋ ಟೇಪ್ ರೆಕಾರ್ಡರ್ ಕ್ಯಾಸೆಟ್‍ಗಳು.
ಎ.ಟಿ. ಸಂಜಯಕುಮಾರ್
ಎ.ಟಿ. ಸಂಜಯಕುಮಾರ್
ಮೈಸೂರು ಬೆಂಗಳೂರು ನವದೆಹಲಿಯಲ್ಲಿ ಪ್ರತಿವರ್ಷ ನಡೆಯುವ ಜಾಗತಿಕ ಪುಸ್ತಕ ಮೇಳ ಹಾಗೂ ಕೊಲ್ಕತ್ತಕ್ಕೆ ತೆರಳಿ ಪುಸ್ತಕಗಳನ್ನು ಖರೀದಿಸಲಾಗಿದೆ.
– ಸಂಜಯ್‌ಕುಮಾರ್‌ ನವೋದಯ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ

ಅರಣ್ಯ ಕೃಷಿಯ ಸೊಬಗು

ವೇತನ ಮತ್ತು ಕೃಷಿ ಆದಾಯದ ಇಂತಿಷ್ಟು ಭಾಗವನ್ನು ಪುಸ್ತಕ ಖರೀದಿಗೆ ಮೀಸಲಿರಿಸಲಾಗಿದೆ. ಮನೆಯ ಹಿಂಭಾಗದಲ್ಲಿ 5 ಎಕರೆ ಜಮೀನಿನಲ್ಲಿ ಅರಣ್ಯ ಕೃಷಿ ಕೈಗೊಂಡಿದ್ದಾರೆ. ತೆಂಗು ಅಡಿಕೆ ಮಾವು ಸಪೋಟ ಕಾಫಿ ಹಲಸು ವೆನಿಲಾ ಹೊಂಗೆ ಬೇವು ತೇಗ ಆಲದಮರ ಗೋಣಿಮರ ಹುಣಸೆ ಚೆರಿ ಪಪ್ಪಾಯಿ ಸೀಬೆಗಿಡ ಸಿರಿಧಾನ್ಯ ಕೈತೋಟದಲ್ಲಿ ತರಕಾರಿ ಬೆಳೆಯಲಾಗಿದೆ. ಆರೋಗ್ಯಕ್ಕೆ ಪೂರಕವಾದ ನೈಸರ್ಗಿಕ ಕೃಷಿ ಕೈಗೊಂಡಿದ್ದಾರೆ. ಅವರ ತೋಟ ಪ್ರವೇಶಿಸುತ್ತಿದ್ದಂತೆ ಮಲೆನಾಡಿಗೆ ಹೋದಂತೆ ಭಾಸವಾಗುತ್ತದೆ. ನಾಟಿ ತಳಿಯ ಹಸುಗಳು ಎಮ್ಮೆಗಳನ್ನು ಸಾಕುವ ಪ್ರವೃತ್ತಿ ಅವರದ್ದು. ಪ್ರಕೃತಿಗೆ ಒತ್ತು ನೀಡಲು ನನ್ನ ಮೇಲೆ ಪೂರ್ಣಚಂದ್ರ ತೇಜಸ್ವಿ ಪ್ರಭಾವ ಬೀರಿದ್ದಾರೆ. ಪರಿಸರಸ್ನೇಹಿ ಬದುಕು ಎಂದಿಗೂ ಸಂತಸ ನೀಡುತ್ತದೆ ಎನ್ನುತ್ತಾರೆ ಸಂಜಯಕುಮಾರ್.

ಹಳೆಯ ವಸ್ತುಗಳ ಸಂಗ್ರಹ

ಹಳೆ ಕಾಲದ ಟೇಪ್ ರೆಕಾರ್ಡರ್ ಕ್ಯಾಸೆಟ್‍ಗಳು ರೇಡಿಯೋಗಳು ಗ್ರಾಮಾಫೋನ್ ಹಳೆಯ ಕುರ್ಚಿಗಳು ಸಿ.ಡಿ ಮತ್ತು ಡಿ.ವಿ.ಡಿ. ಇವೆ. ಮನೆಯಲ್ಲಿ ಹಿತ್ತಾಳೆ ತಾಮ್ರದ ಪಾತ್ರೆಗಳಿವೆ. ಎತ್ತಿನ ಗಾಡಿ ಇದೆ. ಹಳೆಯ ಕಾಲದ ವಸ್ತುಗಳನ್ನು ಸಂಗ್ರಹಿಸುವುದು ಇವರ ಹವ್ಯಾಸ. ಪುಸ್ತಕಗಳನ್ನು ಜೋಡಿಸಲು ಹಳೆಕಾಲದ ಮರದ ಕಪಾಟು ಬಳಸಿದ್ದಾರೆ. ಅಷ್ಟು ಮಾತ್ರವಲ್ಲ ಮರದಿಂದ ತಯಾರಿಸಿದ ಕುರ್ಚಿಗಳು ಟೇಬಲ್‍ಗಳನ್ನು ಮನೆಗಳಲ್ಲಿ ಬಳಸಲಾಗುತ್ತದೆ. ಆಧುನಿಕ ಕಾಲದಲ್ಲಿ ಪ್ರಾಚೀನ ವಸ್ತುಗಳು ಕಣ್ಮರೆ ಆಗಬಾರದು ಎಂಬ ಆಶಯ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT