ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಹಾನಿ: 24 ಗಂಟೆಯಲ್ಲಿ ಪರಿಹಾರ

ಮಳೆ ಹಾನಿ ಪರಿಶೀಲಿಸಿ, ಪರಿಹಾರ ಧನ ವಿತರಿಸಿದ ಸಚಿವ ಗೋಪಾಲಯ್ಯ
Last Updated 14 ಜುಲೈ 2022, 5:59 IST
ಅಕ್ಷರ ಗಾತ್ರ

ಹೊಳೆನರಸೀಪುರ: ಮಳೆಹಾನಿ ಪರಿಶೀಲನೆಗೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ತಾಲ್ಲೂಕಿಗೆ ಭೇಟಿ ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈಗಾಗಲೇ ಮುಖ್ಯಮಂತ್ರಿ ಸೂಚನೆ ನೀಡಿದ್ದು, ಮನೆ ಕಳೆದುಕೊಂಡವರಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲಾಗುತ್ತಿದೆ. ಸಂಪೂರ್ಣ ಮನೆಗೆ ಹಾನಿ ಆಗಿದ್ದರೆ ₹5 ಲಕ್ಷ, ಶೇ 25 ಕ್ಕಿಂತ ಹೆಚ್ಚು ಹಾನಿ ಆಗಿದ್ದರೆ ₹3 ಲಕ್ಷ, ಸ್ವಲ್ಪಹಾನಿ ಆಗಿದ್ದರೆ ₹50 ಸಾವಿರ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.

‘2019–20 ನೇ ಸಾಲಿನಲ್ಲಿ ಬಿದ್ದಿರುವ ಯಾಸಿನ್ ನಗರದ ಮನೆಗಳಿಗೆ ಯಾವುದೇ ದಾಖಲೆ ಇಲ್ಲ. ದಾಖಲೆ ಇಲ್ಲದ ಮನೆಗಳಿಗೆ ₹1 ಲಕ್ಷಕ್ಕಿಂತ ಹೆಚ್ಚು ಪರಿಹಾರ ನೀಡಲು ಅವಕಾಶ ಇಲ್ಲ. ಮನೆಗಳ ದಾಖಲೆ ಒದಗಿಸಿದರೆ ಮನೆ ಕಳೆದುಕೊಂಡವರಿಗೆ ಉಳಿದ ₹4 ಲಕ್ಷ ನೀಡುತ್ತೇವೆ’ ಎಂದರು.

ಪಟ್ಟಣದ ಯಾಸಿನ್ ನಗರಕ್ಕೆ ತೆರಳಿ ಮಳೆಯಿಂದ ಮನೆ ಕಳೆದುಕೊಂಡಿದ್ದ ಸಫಿಯಾ ಅವರಿಗೆ ₹85,100 ಮೊತ್ತ ಪರಿಹಾರದ ಚೆಕ್ ವಿತರಿಸಿದರು. ‘ಇದೇ ಬಡಾವಣೆಯಲ್ಲಿ 2019–20 ರಲ್ಲಿ 22 ಮನೆಗಳು ಬಿದ್ದಿದ್ದು ₹5 ಲಕ್ಷ ಪರಿಹಾರ ನೀಡುವುದಾಗಿ ಹೇಳಿ, ₹1 ಲಕ್ಷ ಮಾತ್ರ ಪರಿಹಾರ ನೀಡಿದ್ದಾರೆ. ಮತ್ತೆ ಪರಿಹಾರ ಬಂದಿಲ್ಲ’ ಎಂದು ಬಡಾವಣೆಯ ಜನರು ದೂರಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಆರ್. ಗಿರೀಶ್, ‘ಈ ಮನೆಗಳಿಗೆ ಯಾವುದೇ ದಾಖಲೆ ಇಲ್ಲ. ಇದು ವಕ್ಫ್‌ ಬೋರ್ಡ್ ಆಸ್ತಿ. ಇವುಗಳಿಗೆ ₹1 ಲಕ್ಷ ಮಾತ್ರ ಪರಿಹಾರ ನೀಡಲು ಅವಕಾಶವಿದ್ದು, ಅದನ್ನು ಈಗಾಗಲೇ ನೀಡಲಾಗಿದೆ’ ಎಂದರು.

ಶಾಸಕ ರೇವಣ್ಣ ಮಾತನಾಡಿ, ಇಲ್ಲಿರುವವರೆಲ್ಲಾ ಬಡವರು. ಸರ್ಕಾರ ಭರವಸೆ ನೀಡಿದಂತೆ ಉಳಿದ ₹4 ಲಕ್ಷ ದೊರಕಿಸಿ ಕೊಡಿ ಎಂದು ಸಚಿವರಿಗೆ ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜ್, ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಶಾಂತಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT