ಕಾಂಗ್ರೆಸ್‌ನಿಂದ ಮಹೇಶ್‌ ಉಚ್ಚಾಟಿಸಿ: ದೇವರಾಜೇಗೌಡ ಒತ್ತಾಯ

7

ಕಾಂಗ್ರೆಸ್‌ನಿಂದ ಮಹೇಶ್‌ ಉಚ್ಚಾಟಿಸಿ: ದೇವರಾಜೇಗೌಡ ಒತ್ತಾಯ

Published:
Updated:
Deccan Herald

ಹಾಸನ : ‘ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದೇನೆ ಎಂಬ ಆರೋಪ ಮಾಡುತ್ತಿರುವ ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಬೇಕು’ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಆಗ್ರಹಿಸಿದರು.

‘ಕಾಂಗ್ರೆಸ್ ಪಕ್ಷದಲ್ಲಿ ನನ್ನ ಸ್ಥಾನದ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೇ ಪಕ್ಷ ವಿರೋಧ ಚಟುವಟಿಕೆ ಆರೋಪದ ಮೇರೆಗೆ ಮುಖಂಡರಾದ ಎಂ.ಕೆ.ರಾಜೇಶ್, ಸಿ.ಟಿ.ಕುಮಾರ್ ಅವರ ಉಚ್ಚಾಟನೆಗೆ ಶಿಫಾರಸ್ಸು ಮಾಡಿದ್ದಾರೆ. ಮಹೇಶ್‌ಗೆ ಪಕ್ಷದಲ್ಲಿ ಉಳಿಯುವ ನೈತಿಕತೆ ಇದೆಯೇ’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘30 ವರ್ಷಗಳಿಂದ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಯಾವುದೇ ಹುದ್ದೆಗೆ ಆಸೆ ಪಟ್ಟಿಲ್ಲ. ಕಾರ್ಯಕರ್ತರು ಮತ್ತು ಬಡವರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಪಕ್ಷದಿಂದ ಸ್ಥಾನಮಾನ ಪಡೆದಿರುವ ಮಹೇಶ್, ಪಕ್ಷಕ್ಕೆ ಯಾವ ಕೊಡುಗೆ ನೀಡಿದ್ದಾರೆ. ಸಂಘಟನೆ ಮಾಡದೆ, ಕಾರ್ಯಕರ್ತರ ನೋವಿಗೆ ಸ್ಪಂದಿಸದೇ ಜಿಲ್ಲೆಯಲ್ಲಿ ಪಕ್ಷವನ್ನು ಹೀನಾಯ ಸ್ಥಿತಿಗೆ ತಂದಿದ್ದಾರೆ’ ಎಂದು ಆರೋಪಿಸಿದರು.

‘ಪಕ್ಷದ ಕಾರ್ಯಕರ್ತರು ಮತ್ತು ಬಡವರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಹಲವು ವೇಳೆ ಇತರೆ ಪಕ್ಷದವರು ಕಾರ್ಯಕರ್ತರ ಹಲ್ಲೆ ಮಾಡಿದಾಗ ನ್ಯಾಯಾಲಯದಲ್ಲಿ ಉಚಿತವಾಗಿ ಮೊಕದ್ದಮೆಗಳನ್ನು ನಡೆಸಿಕೊಟ್ಟಿದ್ದೇನೆ’ ಎಂದು ಹೇಳಿದರು.

‘ಹಾಸನ ವಿಧಾನಸಭಾ ಕ್ಷೇತ್ರದಿಂದ ಕೆ.ಎಂ.ರಾಜೇಗೌಡ ಮತ್ತು ಬಿ.ಶಿವರಾಂ ಸ್ಪರ್ಧಿಸಿದ್ದಾಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು ಮಹೇಶ್. 2017ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿದ್ದ ಗುಂಡೇಗೌಡ ಕೊಪ್ಪಲು ಮಹೇಂದ್ರ ಮತ್ತು ದೇವರಾಯಪಟ್ಟಣ ಪ್ರಕಾಶ್ ಪರ ಪ್ರಚಾರ ಮಾಡಲಿಲ್ಲ. ಪಕ್ಷದ ಸೋಲಿಗೆ ಕಾರಣರಾದ ಅವರನ್ನೇ ಉಚ್ಚಾಟನೆ ಮಾಡಬೇಕು’ ಎಂದು ವರಿಷ್ಠರನ್ನು ಆಗ್ರಹಿಸಿದರು.

‘ಪಕ್ಷಕ್ಕಾಗಿ ದುಡಿಯುತ್ತಿರುವ ರಾಜೇಶ್, ಸಿ.ಟಿ.ಕುಮಾರ್‌ ಉಚ್ಚಾಟನೆ ಮಾಡಲು ಸರಿಯಾದ ಕಾರಣಗಳಿಲ್ಲ. ಸಿದ್ದರಾಮಯ್ಯ ಅವರು ವಿದೇಶದಿಂದ ಬಂದ ಬಳಿಕ ಭೇಟಿ ಮಾಡಿ ಬೆಳವಣಿಗೆ ಬಗ್ಗೆ ಗಮನಕ್ಕೆ ತರಲಾಗುವುದು’ ಎಂದು ವಿವರಿಸಿದರು.

ಮುಖಂಡ ಸಿ.ಟಿ. ಕುಮಾರ್ ಮಾತನಾಡಿ, ‘ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್ ಅವರು ರಬ್ಬರ್ ಸ್ಟಾಂಪ್ ಮಾದರಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧ್ಯಕ್ಷರ ಕೆಲಸಗಳನ್ನು ಎಚ್.ಕೆ.ಮಹೇಶ್ ಮಾಡುತ್ತಿದ್ದಾರೆ. ಜಿಲ್ಲಾಧ್ಯಕ್ಷರ ವಿರುದ್ಧದ ಆರೋಪಕ್ಕೆ ಮಹೇಶ್ ಪ್ರತಿಕ್ರಿಯೆ ನೀಡುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಮಹೇಶ್ ಅವರು ಚುನಾವಣೆ ಸಂದರ್ಭದಲ್ಲಿ ವ್ಯಾಪಾರಕ್ಕೆ ಇಳಿಯುತ್ತಾರೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ನಗರಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ, ಮಹೇಶ್ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರ ಸೋಲಿಗೆ ಕಾರಣವಾಗಿದೆ’ ಎಂದು ದೂರಿದರು.

ಮುಖಂಡರಾದ ಎಂ.ಕೆ.ರಾಜೇಶ್, ಪರ್ವೀಜ್ ಪಾಷ, ರಿಜ್ವಾನ್, ಮಲ್ಲಿಗೆವಾಳು ದೇವಪ್ಪ, ನಾಯಕರಹಳ್ಳಿ ಅಶೋಕ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !