ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ರಜನಿಕಾಂತ್‌ ’ಕಾಲಾ’ ಚಿತ್ರ ಪ್ರದರ್ಶನಕ್ಕೆ ಪೊಲೀಸ್‌ ಭದ್ರತೆ: ಹೈಕೋರ್ಟ್‌

‘ಚಿತ್ರ ನಿರ್ಬಂಧ ವಿಚಾರದಲ್ಲಿ ಹಸ್ತಕ್ಷೇಪವಿಲ್ಲ’
Last Updated 5 ಜೂನ್ 2018, 19:04 IST
ಅಕ್ಷರ ಗಾತ್ರ

ಬೆಂಗಳೂರು: ರಜನಿಕಾಂತ್‌ ಅಭಿನಯದ ತಮಿಳಿನ 'ಕಾಲಾ' ಚಿತ್ರಪ್ರದರ್ಶನದ ವೇಳೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಚಿತ್ರದ ಬಿಡುಗಡೆಗೆ ನಿರ್ಬಂಧ ಹೇರಿ ಕನ್ನಡಪರ ಸಂಘಟನೆಗಳು ಬೆದರಿಕೆಯೊಡ್ಡಿರುವ ಕಾರಣ ಚಿತ್ರ ನಿರ್ಮಾಣ ಸಂಸ್ಥೆ ವೆಂಡರ್‌ಬಾರ್ ಫಿಲ್ಮಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿ ಹಾಗೂ ನಿರ್ಮಾಪಕರಾದ ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ಅಳಿಯ ಧನುಷ್ ಹೈಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಮಂಗಳವಾರ ವಿಚಾರಣೆ ನಡೆಸಿದ ಹೈಕೋರ್ಟ್‌, ಚಿತ್ರ ನಿರ್ಬಂಧ ವಿಚಾರದಲ್ಲಿ ಕೋರ್ಟ್‌ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಭದ್ರತೆ ಕುರಿತು ರಾಜ್ಯ ಸರ್ಕಾರ, ಡಿಜಿಪಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಚಿತ್ರ ಪ್ರದರ್ಶನಗೊಳ್ಳುವ ಸ್ಥಳಗಳು ಹಾಗೂ ಯಾವ ಸಂಘಟನೆಗಳಿಂದ ಬೆದರಿಕೆ ಇದೆ ಎಂಬ ಮಾಹಿತಿಯನ್ನು ಚಿತ್ರದ ನಿರ್ಮಾಪಕರು ಪೊಲೀಸರಿಗೆ ಸಲ್ಲಿಸಬೇಕು. ಅದರ ಆಧಾರದ ಮೇಲೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.

ರಾಜ್ಯದಲ್ಲಿ ₹15–₹20 ಕೋಟಿ ಆದಾಯ

‘ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಕರ್ನಾಟಕ ಸರ್ಕಾರ ಪಾಲಿಸಬೇಕು ಎಂದು ಚಿತ್ರದ ನಾಯಕ ರಜನಿಕಾಂತ್ ತಿಳಿಸಿದ್ದಾರೆ. ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಚಿತ್ರ ಬಿಡುಗಡೆಗೆ ಅಥವಾ ವಿತರಣೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದಿದ್ದಾರೆ. ಇದು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

‘ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಇದೇ 7ರಂದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಇದರ ನಿರ್ಮಾಣಕ್ಕೆ ಒಟ್ಟು ₹ 140 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕರ್ನಾಟಕದಲ್ಲಿ 15 ರಿಂದ 20 ಕೋಟಿ ರೂಪಾಯಿ ಆದಾಯ ಗಳಿಕೆ ನಿರೀಕ್ಷಿಸಲಾಗಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

‘ಚಿತ್ರದ ವಿತರಕರು, ರಜನಿಕಾಂತ್ ಅಭಿಮಾನಿ ಸಂಘದ ಸದಸ್ಯರು ಹಾಗೂ ಚಿತ್ರ ಬಿಡುಗಡೆಗೆ ಸಹಕರಿಸುವರಿಗೆ ಜೀವ ಭಯವಿದೆ. ಆದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಚಿತ್ರ ಬಿಡುಗಡೆಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT