ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನದಿಂದ ಆರೋಗ್ಯ, ಚೈತನ್ಯ ವೃದ್ಧಿ

ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆಯಲ್ಲಿ ನ್ಯಾಯಾಧೀಶ ಕೆಂಗಬಾಲಯ್ಯ
Last Updated 15 ಜೂನ್ 2018, 11:36 IST
ಅಕ್ಷರ ಗಾತ್ರ

ದಾವಣಗೆರೆ: ರಕ್ತದಾನ ಮಾಡುವುದರಿಂದ ಹೊಸ ಜೀವಕೋಶಗಳು ಹುಟ್ಟಿಕೊಂಡು ಆರೋಗ್ಯ ವೃದ್ಧಿಯಾಗಿ ನವಚೈತನ್ಯ ಬರಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಅನ್ನದಾನ ಶ್ರೇಷ್ಠ; ವಿದ್ಯಾದಾನ ಅದಕ್ಕಿಂತಲೂ ಶ್ರೇಷ್ಠ ಎನ್ನಲಾಗುತ್ತಿತ್ತು. ಆದರೆ, ಇಂದು ಇವೆರಡಕ್ಕಿಂತಲೂ ರಕ್ತದಾನ ಶ್ರೇಷ್ಠ ಎನಿಸಿಕೊಂಡಿದೆ. ಅಪಘಾತದಲ್ಲಿ ಗಾಯಗೊಂಡಾಗ, ಶಸ್ತ್ರಚಿಕಿತ್ಸೆ ವೇಳೆ ರಕ್ತ ಸಿಗದೇ ಅನೇಕ ರೋಗಿಗಳು ಪರದಾಡುವಂತಾಗಿದೆ ಎಂದು ಹೇಳಿದರು.

ರಕ್ತದಾನ ಮಾಡುವುದರಿಂದ ಆರೋಗ್ಯದ ಜೊತೆಗೆ ಸಕಾರಾತ್ಮಕ ಮನೋಭಾವವೂ ಬರಲಿದೆ. ನಮ್ಮ ಜೀವನದ ಬೆಲೆ ಅರ್ಥ ಮಾಡಿಕೊಂಡು ಉಳಿದವರ ಜೀವ ಉಳಿಸಲು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು. ರಕ್ತ ಕೊಟ್ಟರೆ ತಮಗೆ ಕಡಿಮೆಯಾಗಲಿದೆ ಎಂಬ ಅಳುಕು ಮೊದಲು ಇರುತ್ತದೆ. ಆದರೆ, ಒಮ್ಮೆ ರಕ್ತದಾನ ಮಾಡಿದ ಬಳಿಕ ಆತ್ಮವಿಶ್ವಾಸ ಮೂಡುತ್ತದೆ. ರಕ್ತದಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಹಿಮೋಫಿಲಿಯಾ ರೋಗಿಗಳ ಪ್ರಾಣ ಉಳಿಸಲು ಪಣ ತೊಟ್ಟು ಕೆಲಸ ಮಾಡುತ್ತಿರುವ ಡಾ. ಸುರೇಶ್‌ ಹನಗವಾಡಿ ದಂಪತಿಯ ಸೇವೆ ಶ್ಲಾಘನೀಯ ಎಂದರು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ, ‘ರಕ್ತದಾನ ಜೀವದಾನವಾಗಿದೆ. ರಕ್ತ ಪೂರಣದ ಬಗ್ಗೆ ಹಿಂದೆ ಸಂಶೋಧನೆಗಳಾಗದೇ ಇರುವುದರಿಂದ ಹಲವರು ಮೃತಪಟ್ಟಿದ್ದಾರೆ. 1902ರಲ್ಲಿ
ವಿಜ್ಞಾನಿ ಕಾರ್ಲ್‌ ಲ್ಯಾಂಡ್‌ಸ್ಟೈನರ್‌ ರಕ್ತದ ಗುಂಪುಗಳನ್ನು ಕಂಡುಹಿಡಿದು ರಕ್ತಪೂರಣ ಯಶಸ್ವಿಗೊಳಿಸಿದ ಸ್ಮರಣಾರ್ಥ ಅವರ ಜನ್ಮದಿನವಾದ ಜೂನ್‌ 14ರಂದು ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ’
ಎಂದು ತಿಳಿಸಿದರು.

‘ಸಂಶೋಧನೆಗಳ ಫಲವಾಗಿ ಇಂದು ಒಂದು ರಕ್ತದ ಯುನಿಟ್‌ನಿಂದ 4ರಿಂದ 5 ರೋಗಿಗಳ ಜೀವ ಉಳಿಸಬಹುದು. 18ರಿಂದ 65 ವಯಸ್ಸಿನವರೆಗೆ ಪುರುಷರು ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತು ಮಹಿಳೆಯರು ಪ್ರತಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನದಿಂದ ರಕ್ತದೊತ್ತಡ, ಮಧುಮೇಹ, ಹೃದಯಾಘಾತ ಸೇರಿ ಅನೇಕ ರೋಗಗಳು ಕಡಿಮೆ ಆಗುತ್ತವೆ. ದೇಹದ ಕೊಬ್ಬಿನಂಶ ಕಡಿಮೆಯಾಗುತ್ತದೆ’ ಎಂದು ಹೇಳಿದರು.

ಬಾಪೂಜಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಕಿರುವಾಡಿ ಗಿರಜಮ್ಮ ಮಾತನಾಡಿದರು. ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ತ್ರಿಪುಲಾಂಬ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ರಾಘವನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಕ್ತದಾನಿಗಳಾದ ನಟರಾಜ್, ಡಾ. ಆಶಾ, ಗಿರೀಶ್, ಲಕ್ಮಾಜಿ, ಡಾ. ಮಂಜುನಾಥ ಪಾಟಿಲ್, ಮಹಡಿ ಶಿವಕುಮಾರ್, ಹೆಲ್ಪ್‌ಲೈನ್‌ ಸುಬಾನ್‌, ಡಾ. ಬಿ.ಕೆ.ವೆಂಕಟೇಶ್, ಡಾ. ಸುರೇಶ್ ಹನಗವಾಡಿ, ಡಾ.ಮೀರಾ ಹನಗವಾಡಿ ಅವರನ್ನು ಸನ್ಮಾನಿಸಲಾಯಿತು.

ಚಿಗಟೇರಿ ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಲೈಫ್‌ಲೈನ್‌ ರಕ್ತನಿಧಿಯ ಮುಖ್ಯ ವೈದ್ಯಾಧಿಕಾರಿ ಡಾ. ಎಂ.ಎಂ. ದೊಡ್ಡಿಕೊಪ್ಪ, ಡಾ. ನಂಜೇಗೌಡ ಹಾಜರಿದ್ದರು. ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಕಾರ್ಯಕಾರಿ ನಿರ್ದೇಶಕ ಸದಾಶಿವಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT