ಬುಧವಾರ, ನವೆಂಬರ್ 13, 2019
18 °C
ಜನದಟ್ಟಣೆ ಹೆಚ್ಚಾಗಿ ನೂಕುನುಗ್ಗಲು, ನಗರಸಭೆ ವರೆಗೂ ಸರದಿ ಸಾಲು

ಹಾಸನಾಂಬೆ ದರುಶನಕ್ಕೆ ಭಕ್ತರ ಮಹಾಪೂರ

Published:
Updated:

ಹಾಸನ: ಶಕ್ತಿದೇವತೆ ದರ್ಶನಕ್ಕೆ ಭಾನುವಾರ ಭಕ್ತರು, ಜನಪ್ರತಿನಿಧಿಗಳು, ಗಣ್ಯರ ದಂಡೇ ಹರಿದು ಬಂತು.

ರಜಾ ದಿನವಾದ್ದರಿಂದ ನಸುಕಿನ 4 ರಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಅಧಿದೇವತೆ ದರ್ಶನ ಪಡೆದರು. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ನಾನಾ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

‌ಜನ ದಟ್ಟಣೆ ಹೆಚ್ಚಾಗಿದ್ದರಿಂದ ನೂಕುನುಗ್ಗಲು ಉಂಟಾಯಿತು. ಸರದಿ ಸಾಲು ನಗರಸಭೆವರೆಗೂ ಕಂಡು ಬಂತು.

ಅನರ್ಹ ಶಾಸಕರಾದ ಎಚ್‌.ವಿಶ್ವನಾಥ್‌, ಬಿ.ಸಿ.ಪಾಟೀಲ್‌, ಸಚಿವ ಕೆ.ಎಸ್‌.ಈಶ್ವರಪ್ಪ, ಶಾಸಕ ಎಚ್‌.ಡಿ.ರೇವಣ್ಣ, ಚಲನಚಿತ್ರ ನಟಿ ಮಾನ್ವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಹೈ ಕೋರ್ಟ್‌ ನ್ಯಾಯಮೂರ್ತಿಗಳು, ಕುಟುಂಬದವರು ದೇವಿಯ ದರ್ಶನ ಪಡೆದರು.

ಸರದಿ ಸಾಲಿಗೆ ವಾಟರ್‌ ಪ್ರೋಫ್‌ ಚಾವಣಿ, ಸ್ಟೀಲ್‌ ಬ್ಯಾರಿಕೇಡ್‌ ಅಳವಡಿಸಲಾಗಿದೆ. ನಾಲ್ಕು ವರ್ಷಗಳಿಂದ ದೇವಾಲಯದ ಆಡಳಿತಾಧಿಕಾರಿಯಾಗಿರುವ ಎಚ್‌.ಎಲ್.ನಾಗರಾಜ್‌ ಅವರು ಈ ಬಾರಿ ವೃದ್ಧರು, ಅಂಗವಿಕಲರಿಗೆ ಪ‍್ರತ್ಯೇಕ ವ್ಯವಸ್ಥೆ ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ದೇವಿಗೆ ನೈವೇದ್ಯ ಅರ್ಪಿಸುವ 2 ಗಂಟೆ ಹೊರತು ಪಡಿಸಿ ಅಹೋರಾತ್ರಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಕೌಟ್ಸ್‌, ಗೈಡ್ಸ್‌ ನ 60 ಸ್ವಯಂ ಸೇವಕರು ಹಗಲು–ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಲಾ 20 ಸದಸ್ಯರ ಮೂರು ಗುಂಪು ಪಾಳಿ ಪ್ರಕಾರ 8 ತಾಸು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)