ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಸಮಸ್ಯೆ; ಶಾಶ್ವತ ಪರಿಹಾರಕ್ಕೆ ಕ್ರಮ

16ಕ್ಕೆ ಸಕಲೇಶಪುರದಲ್ಲಿ ಅರಣ್ಯ ಸಚಿವರ ಸಮ್ಮುಖದಲ್ಲಿ ಸಭೆ: ಸಚಿವ ಗೋಪಾಲಯ್ಯ
Last Updated 13 ಫೆಬ್ರುವರಿ 2021, 13:22 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಫೆ. 16ರಂದು
ಅರಣ್ಯ ಸಚಿವರ ಸಮ್ಮುಖದಲ್ಲಿ ಸಕಲೇಶಪುರದಲ್ಲಿ ಸಭೆ ಕರೆದಿದ್ದು, ಸ್ಥಳೀಯರೊಂದಿಗೆ ಚರ್ಚಿಸಿ ನಿರ್ಧಾರ
ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಕಾಡಾನೆ ಸಮಸ್ಯೆ ಕೇವಲ ಸಕಲೇಶಪುರ, ಆಲೂರು, ಅರಕಲಗೂಡು ತಾಲ್ಲೂಕಿನ ಸಮಸ್ಯೆಯಲ್ಲ. ಇದು
ಜಿಲ್ಲೆಯ ಪ್ರಮುಖ ಸಮಸ್ಯೆ. ಕಾಡಾನೆಗಳಿಂದ ಈ ಭಾಗದಲ್ಲಿ ಇತ್ತೀಚೆಗೆ ಸಾವು–ನೋವುಗಳು ಹೆಚ್ಚಾಗಿವೆ.
ಕೆಲ ದಿನಗಳ ಹಿಂದೆ ಹಲಸುಲಿಗೆ ಗ್ರಾಮದ ಕಾರ್ಮಿಕ ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ ಎಂದು
ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಬಜೆಟ್‌ ಮಂಡನೆಗೆ ಪೂರ್ವ ತಯಾರಿ ನಡೆಯುತ್ತಿದೆ. ಕಾಡಾನೆ ಸಮಸ್ಯೆಗೆ ಪರಿಹಾರ ನೀಡಲು
ಅನುದಾನ ಮೀಸಲಿಡುವಂತೆ ಸರ್ಕಾರ ಒತ್ತಾಯಿಸಲಾಗುವುದು. ಈ ಸಮಸ್ಯೆಯನ್ನು ತಕ್ಷಣವೇ
ಬಗೆಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಏನೇನು ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಲಾಗುವುದು. ಸಕಲೇಶಪುರದಲ್ಲಿ ನಡೆಯುವ ಸಭೆಗೆ ಶಾಸಕರನ್ನು ಆಹ್ವಾನಿಸಲಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಭಾಗವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಹಾಸನ–ಹೆಗ್ಗದ್ದೆವರೆಗಿನ
45 ಕಿ.ಮೀ. ರಸ್ತೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು, ಜೂನ್‌ ಅಂತ್ಯಕ್ಕೆ13 ಕಿ.ಮೀ
ಪೂರ್ಣಗೊಳಿಸುವಂತೆ ಗುತ್ತಿಗೆದಾರ ಹಾಗೂ ಎಂಜಿನಿಯರ್‌ಗೆ ಸೂಚಿಸಲಾಗಿದೆ ಎಂದರು.

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಅಡ್ಡ ಹೊಳೆಯಿಂದ
ಸಕಲೇಶಪುರದ ಹೆಗ್ಗದ್ದೆವರೆಗಿನ 23.63 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ
ಬಜೆಟ್‌ನಲ್ಲಿ ₹10 ಸಾವಿರ ಕೋಟಿ ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ₹11
ಸಾವಿರ ಕೋಟಿ ಹಾಗೂ ರೈಲ್ವೆ ವಿಭಾಗಕ್ಕೆ ₹ 4,874 ಕೋಟಿ ಅನುದಾನ ನೀಡಲಾಗಿದೆ ಎಂದು
ವಿವರಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‌, ಮುಖಂಡರಾದ ನಿಜಗುಣರಾಜು,
ಬಿ.ಆರ್‌. ಗುರುದೇವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT