ಮಂಗಳವಾರ, ಮೇ 18, 2021
24 °C

ಸಕಲೇಶಪುರ ತಾಲ್ಲೂಕಿನಲ್ಲಿ ಭೂಕುಸಿತ: ಮತ್ತೆ ಚರ್ಚೆಗೆ ಬಂತು ಎತ್ತಿನಹೊಳೆ ಯೋಜನೆ

ಕೆ.ಎಸ್.ಸುನಿಲ್‌ Updated:

ಅಕ್ಷರ ಗಾತ್ರ : | |

Deccan Herald

ಸಕಲೇಶಪುರ: ಸತತ ಮಳೆಯಿಂದ ತಾಲ್ಲೂಕಿನ ಹಲವೆಡೆ ಭೂಕುಸಿತ ಸಂಭವಿಸುತ್ತಿದ್ದು, ಕಾಫಿತೋಟಗಳು ನಾಮಾವಶೇಷವಾಗುತ್ತಿವೆ. ‘ಮಲೆನಾಡಿಗೆ ಮಳೆ ಹೊಸದಲ್ಲ. ಆದರೆ ಈ ಪ್ರಮಾಣದ ಭೂಕುಸಿತ ಹಿಂದೆಂದೂ ಸಂಭವಿಸಿರಲಿಲ್ಲ’ ಎನ್ನುತ್ತಾರೆ ಸ್ಥಳೀಯರು. ಭೂಕುಸಿತಕ್ಕೆ ಎತ್ತಿನಹೊಳೆ ಕಾರಣವೇ ಎನ್ನುವ ಪ್ರಶ್ನೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಪ್ರಶ್ನೆಗೆ ಪುಷ್ಟಿ ನೀಡುವಂತೆ ಎತ್ತಿನಹೊಳೆ ಯೋಜನೆ ವ್ಯಾಪ್ತಿಯಲ್ಲಿರುವ ಕಡ್ರಳ್ಳಿ, ಹೊಸಹಳ್ಳಿ, ಮೊಗನಹಳ್ಳಿ, ಜೇಡಿಗದ್ದೆ, ಮೂಕನಮನೆ, ಹೊಂಗಡಹಳ್ಳ, ಎಡಕುಮರಿ, ಬಟ್ಟೆಕುಮರಿ, ಕರಡಿಗಾಲ, ಕುರ್ಕಮನೆ, ಬಾಜಿಮನೆ, ಕಾಡುಮನೆ, ನೂದರಹಳ್ಳಿ, ನಡನಹಳ್ಳಿ ಗ್ರಾಮಗಳ ಸುತ್ತಮುತ್ತ ಕಾಫಿ, ಏಲಕ್ಕಿ, ಮೆಣಸಿನತೋಟ ಮತ್ತು ಭತ್ತದ ಗದ್ದೆಗಳು ಕುಸಿದಿವೆ.

ಹೆತ್ತೂರು ಮತ್ತು ಯಸಳೂರು ಹೋಬಳಿಯ ವನಗೂರು, ಮಾಗೇರಿ, ಹಿಜ್ಜನಹಳ್ಳಿ, ಚೌಹಳ್ಳಿ, ಓಡಳ್ಳಿ, ಮಾವಿನೂರು, ಬಿಸಿಲೆ, ಐಗೂರಿನಲ್ಲೂ ಎಕರೆಗಟ್ಟಲೆ ಕಾಫಿ, ಮೆಣಸಿನ ತೋಟಗಳು ಕೊಚ್ಚಿಕೊಂಡು ಹೋಗಿವೆ. ಹಲವು ಕಡೆ ಜಮೀನುಗಳಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಸಾಗುವಳಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಗಳು ಒಡೆದು ಭತ್ತದ ನಾಟಿ ಪ್ರದೇಶ ಹಾಳಾಗಿದೆ.

‘ಈ ಅನಾಹುತಕ್ಕೆ ಪ್ರಕೃತಿ ವಿಕೋಪದ ಜತೆಗೆ ಮಾನವ ನಿರ್ಮಿತ ಲೋಪಗಳು ಕಾರಣ’ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಎತ್ತಿನಹೊಳೆ ಯೋಜನೆ ಕಾರಣವೇ?

ಪಶ್ಚಿಮವಾಹಿನಿಯಾಗಿ ಹರಿದು ನೇತ್ರಾವತಿ ಮತ್ತು ಇತರ ನದಿಗಳ ಮೂಲಕ ಅರಬ್ಬಿ ಸಮುದ್ರ ಸೇರುವ ಜಲಧಾರೆಗಳನ್ನು ಪೂರ್ವಕ್ಕೆ ತಿರುಗಿಸಿ ಬಯಲುಸೀಮೆಗೆ ನೀರು ಕೊಡುವುದು ಎತ್ತಿನಹೊಳೆ ಯೋಜನೆಯ ಮುಖ್ಯ ಆಶಯ. ಯೋಜನೆ ಆರಂಭವಾದಗಿನಿಂದಲೂ ಸ್ಥಳೀಯರಲ್ಲೂ ಪರ, ವಿರೋಧದ ಚರ್ಚೆ ನಡೆಯುತ್ತಲೇ ಇತ್ತು. ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಉಂಟಾಗಿರುವ ಅವಘಡಗಳಿಗೆ ಎತ್ತಿನಹೊಳೆ ಯೋಜನೆ ಕಾರಣವಾಯಿತೇ ಎನ್ನುವ ಪ್ರಶ್ನೆಯೂ ಈಗ ಸ್ಥಳೀಯರನ್ನು ಕಾಡಲು ಆರಂಭಿಸಿದೆ.

‘ಈ ಯೋಜನೆಯಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ವೈಜ್ಞಾನಿಕವಾದ ಅಧ್ಯಯನ ನಡೆಸದೆ ಅನುಷ್ಠಾನಗೊಳಿಸಲು ಹೊರಟಿದ್ದು ಇಂಥ ವಿಕೋಪಗಳಿಗೆ ಮೂಲ ಕಾರಣ’ ಎಂದು ಪರಿಸರಪರ ಸಂಘಟನೆಗಳು ಆರೋಪಿಸುತ್ತಿವೆ.

‘ಪಶ್ಚಿಮಘಟ್ಟದ ದಟ್ಟ ಕಾನನದ ನಡುವೆ ಬೃಹತ್‌ ಪೈಪ್‌ಗಳನ್ನು ಹೂಳಲು ಬೆಟ್ಟ, ಗುಡ್ಡಗಳನ್ನು ಯದ್ವತದ್ವಾ ಅಗೆಯಲಾಗಿದೆ. ಮಾರ್ಗದ ನಡುವೆ ಸಿಕ್ಕ ಬಂಡೆಗಳನ್ನು ಒಡೆದು ತೆಗೆಯಲು ಸ್ಫೋಟಕ ಬಳಸಲಾಗಿದೆ. ಇದರಿಂದ ಈ ಪ್ರದೇಶದ ಗಟ್ಟಿತನಕ್ಕೆ ಧಕ್ಕೆ ಉಂಟಾಗಿದೆ’ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

‘ಮತ್ತೊಂದೆಡೆ ಕಾಲುವೆ, ಚೆಕ್ ಡ್ಯಾಂ ನಿರ್ಮಾಣ, ವಾಹನಗಳ ಓಡಾಟಕ್ಕೆಂದು ಸಾವಿರಾರು ಮರಗಳನ್ನು ಬುಡಮೇಲು ಮಾಡಲಾಗಿದೆ. ಪಶ್ಚಿಮಘಟ್ಟ ಸಾವಿರಾರು ವರ್ಷಗಳಿಂದ ಅಪರೂಪದ ಸಸ್ಯಸಂಪತ್ತು, ವನ್ಯಸಂಕುಲಕ್ಕೆ ಆಶ್ರಯತಾಣವಾಗಿತ್ತು. ಗಟ್ಟಿಯಾದ ಬೆಟ್ಟ, ಗುಡ್ಡಗಳು, ಭಾರಿ ಗಾತ್ರದ ಮರಗಳು ಮಳೆ ನೀರಿನ ಹರಿವನ್ನು ನಿಯಂತ್ರಿಸುತ್ತಿದ್ದವು. ಈಗ ಅಲ್ಲಲ್ಲಿ ಭೂಮಿ ಸಡಿಲ ಆಗಿರುವುದು ಹಾಗೂ ಎಲ್ಲೆಂದರಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ಭೂ ಕುಸಿತ ಉಂಟಾಗುತ್ತಿದೆ’ ಎಂಬುದು ಪರಿಸರ ಚಿಂತಕರ ದೂರು.


ಸಕಲೇಶಪುರದಲ್ಲಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ

ಎತ್ತಿನಹೊಳೆಯೇ ಕಾರಣ

‘ಮೂವತ್ತು ವರ್ಷದ ಹಿಂದೆ ಈ ಭಾಗದಲ್ಲಿ 750 ಸೆಂ.ಮೀ. ಮಳೆಯಾಗುತ್ತಿತ್ತು. ಆಗ ಈ ಪ್ರಮಾಣದ ಹಾನಿಯಾಗುತ್ತಿರಲಿಲ್ಲ. ಗಣಿಗಾರಿಕೆ, ರಸ್ತೆ ವಿಸ್ತರಣೆ, ಕಟ್ಟಡಗಳ ನಿರ್ಮಾಣ, ಅರಣ್ಯನಾಶವೇ ಭಾರಿ ಭೂಕುಸಿತಕ್ಕೆ ಕಾರಣ. ಅದರಲ್ಲೂ ಎತ್ತಿನಹೊಳೆ ಯೋಜನೆ ಪ್ರದೇಶದಲ್ಲಿ ಹೆಚ್ಚು ಭೂಕುಸಿತವಾಗಿ ಅಪಾರ ಪ್ರಮಾಣದ ಹಾನಿಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪಶ್ಚಿಮಘಟ್ಟದಲ್ಲಿ ಕೈಗೊಂಡಿರುವ ಕಿರುಜಲ ವಿದ್ಯುತ್‌ ಯೋಜನೆ ಹಾಗೂ ರೈಲ್ವೆ ಮಾರ್ಗದಲ್ಲಿ ಸುರಂಗ ನಿರ್ಮಾಣಕ್ಕೆ ಸ್ಫೋಟಕ ಬಳಸಲಾಗಿದೆ. ಕಸ್ತೂರಿರಂಗನ್ ವರದಿಯು ಪಶ್ಚಿಮಘಟ್ಟದ ಶೇ 37ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವಂತೆ ಶಿಫಾರಸು ಮಾಡಿದೆ. ಇದನ್ನು ಅನುಷ್ಠಾನ ಮಾಡಿದರೆ ಮಾತ್ರ ಪರಿಸರ ಉಳಿಯುತ್ತದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಇಂತಹ ಅವಘಡಗಳಿಗೆ ತಲೆ ಕೊಡುತ್ತಲೇ ಇರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಮೊಗಹಳ್ಳಿ ರೈತ ಗಣೇಶ್‌ ಮಾತನಾಡಿ, ‘ಮಳೆಗೆ ಮೂರು ಎಕರೆ ಏಲಕ್ಕಿ, ಕಾಫಿ ತೋಟ ಕುಸಿದು ಹೋಗಿದೆ. ಮನೆಗಳು ಯಾವಾಗ ಕುಸಿಯುತ್ತವೆಯೋ ಎಂಬ ಭಯ ಕಾಡುತ್ತಿದೆ. ಬದುಕು ನಡೆಸುವುದೇ ಕಷ್ಟವಾಗಿದೆ. ಎತ್ತಿನಹೊಳೆ ಯೋಜನೆಗಾಗಿ ಕಡಿದ ಮರಗಳ ಲೆಕ್ಕ ಇಲ್ಲ. ಭಾರಿ ಗಾತ್ರದ ಮರಗಳು, ಗುಡ್ಡಗಳು, ಬಂಡೆಗಳು ಇದ್ದಿದ್ದರೆ ಇಷ್ಟು ಹಾನಿಯಾಗುತ್ತಿರಲಿಲ್ಲ’ ಎಂದರು.

‘ನಮ್ಮ ತೋಟದ ಪಕ್ಕದಲ್ಲಿಯೇ ಎತ್ತಿನಹೊಳೆ ಯೋಜನೆಯ ಮಾರ್ಗ ಹಾದು ಹೋಗಿದೆ. ಜೆಸಿಬಿ, ಸ್ಫೋಟಕ ಬಳಸುವುದರಿಂದ ಮಣ್ಣು ಸಡಿಲಗೊಂಡಿದೆ. ಆರು ಎಕರೆ ವಿಸ್ತೀರ್ಣದಲ್ಲಿದ್ದ ಕಾಫಿ, ಏಲಕ್ಕಿ ತೋಟ ಹಾಳಾಗಿದೆ’ ಎಂದು ರೈತ ರಂಜಿತ್‌ ಅಲವತ್ತುಕೊಂಡರು.

ರಂಜಿತ್ ಅವರ ಮಾತನ್ನು ರಕ್ಷಿದಿ ಗ್ರಾಮದ ಕಾಫಿ ಬೆಳೆಗಾರ ಪ್ರಸಾದ್‌ ರಕ್ಷಿದಿ ಪುಷ್ಟೀಕರಿಸಿದರು.

‘ಜೂನ್‌ 3 ರಂದು ಆರಂಭವಾದ ಮಳೆ ಇನ್ನೂ ನಿಂತಿಲ್ಲ. ಕಾಮಗಾರಿಗಾಗಿ ಜೆಸಿಬಿ, ಸ್ಫೋಟಕ ಬಳಸುವುದರಿಂದ ಮಣ್ಣು ಸಡಿಲಗೊಂಡಿದೆ. ಹೀಗಾಗಿಯೇ ಮಳೆಯ ಹೊಡೆತಕ್ಕೆ ಗುಡ್ಡ ಕುಸಿಯುತ್ತಿದೆ. ಶಿರಾಡಿ ಘಾಟ್‌ ರಸ್ತೆ ವಿಸ್ತರಣೆ ವೇಳೆ ತಡೆಗೋಡೆ ನಿರ್ಮಿಸಲಿಲ್ಲ. ಇದೂ ಸಹ ಗುಡ್ಡ ಕುಸಿಯಲು ಕಾರಣವಾಯಿತು. ಮಲೆನಾಡಿನಲ್ಲಿ ಕಂಡುಬರುತ್ತಿರುವ ಅನಾಹುತಗಳಿಗೆ ಮಳೆಯ ಜೊತೆಗೆ ಮಾನವ ನಿರ್ಮಿತ ಲೋಪದೋಷಗಳೂ ಕಾರಣ’ ಎಂದು ಆರೋಪಿಸಿದರು.

ತೋಟ ಹಾಳಾಗಲು ಯೋಜನೆ ಕಾರಣವಲ್ಲ

ಹೆತ್ತೆಹಳ್ಳಿ ಗ್ರಾಮದ ಏಲಕ್ಕಿ ಬೆಳೆಗಾರ ಜಯರಾಜ್ ಅವರ ತೋಟವೂ ಹಾಳಾಗುತ್ತಿದೆ. ಹಾಗೆಂದು ಅವರು ತಮ್ಮ ತೋಟ ಹಾಳಾಗಲು ಎತ್ತಿನಹೊಳೆ ಯೋಜನೆ ಕಾರಣ ಎಂದು ಒಪ್ಪುವುದಿಲ್ಲ.

‘ಮಳೆಯಿಂದ ಏಲಕ್ಕಿ ಗಿಡ ಕೊಳೆಯುತ್ತಿದ್ದು, ಹಣ್ಣುಗಳು ಕರಗುತ್ತಿವೆ. ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿಯೇ ನಮ್ಮ ತೋಟ ಇದೆ. ಆದರೆ ಯೋಜನೆಯಿಂದ ಯಾವುದೇ ತೊಂದರೆ ಆಗಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಅವರು.

ಕಾಫಿ ಬೆಳೆಗಾರ ದೇವರಾಜ್ ಅವರ ಮಾತು ಸಹ ಜಯರಾಜ್ ಅವರ ಅಭಿಪ್ರಾಯಕ್ಕೆ ಪುಷ್ಟಿ ನೀಡಿತು. ‘ಹೆತ್ತೂರು ಹೋಬಳಿಯಲ್ಲಿ ಕಾಫಿ, ಮೆಣಸು, ಭತ್ತ ನಾಶವಾಗಿದೆ. ಬಿರುಗಾಳಿ ಮತ್ತು ಜೋರು ಮಳೆಯಿಂದ ಈ ರೀತಿ ಅನಾಹುತ ಆಗಿದೆ. ಎತ್ತಿನಹೊಳೆ ಯೋಜನೆಗೂ ನಮ್ಮ ತೋಠದಲ್ಲಿ ಬೆಳೆಹಾನಿಯಾಗಿರುವುದಕ್ಕೂ ಸಂಬಂಧ ಇಲ್ಲ’ ಎಂದು ದೇವರಾಜ್ ತಿಳಿಸಿದರು.

‘ರೈತರು ಆರೋಪಿಸಿದಂತೆ ದೊಡ್ಡ ಸ್ಫೋಟಕಗಳನ್ನು ಬಳಸಿಲ್ಲ. ಕಾಮಗಾರಿಯಿಂದ ಭೂ ಕುಸಿತ, ಬೆಳೆ ಹಾನಿಯಾಗಿದೆ ಎಂಬುದು ತಪ್ಪು ಮಾಹಿತಿ’ ಎನ್ನುತ್ತಾರೆ ಎತ್ತಿನಹೊಳೆ ಯೋಜನೆ ಸಕಲೇಶಪುರ ಉಪವಿಭಾಗದ ಸಹಾಯಕ ಎಂಜಿನಿಯರ್‌ ಸಚಿತ್‌.


ಮಳೆಯಿಂದಾಗಿ ಹಿರದನಹಳ್ಳಿ ಬಳಿ ಕಾಫಿ ತೋಟ ಕೊಚ್ಚಿಕೊಂಡು ಹೋಗಿರುವುದು 

ಹೀಗಿದೆ ಪರಿಸ್ಥಿತಿ

ಪಶ್ಚಿಮಘಟ್ಟವನ್ನು ಅಕ್ಷರಶಃ ನಡುಗಿಸಿರುವ ಜಲಪ್ರಳಯಕ್ಕೆ ಜನರ ಬದುಕು ಮೂರಾಬಟ್ಟೆಯಾಗಿದೆ. ಎರಡು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಸಕಲೇಶಪುರ ತಾಲ್ಲೂಕಿನಲ್ಲಿ ಹಿಂದೆಂದೂ ಕಂಡರಿಯದ ಭೂ ಕುಸಿತ ಸಂಭವಿಸುತ್ತಲೇ ಇದೆ.

ರೈಲು ಮಾರ್ಗದಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿರುವುದು, ರಸ್ತೆಗಳು ಬಿರುಕು ಬಿಟ್ಟು ಸಂಪರ್ಕಗಳೇ ಕಡಿದುಕೊಂಡು, ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಶಿರಾಡಿ ಘಾಟಿ ಮಾರ್ಗ, ಸಕಲೇಶಪುರ–ಕುಕ್ಕೆಸುಬ್ರಹ್ಮಣ್ಯ ರೈಲು ಮಾರ್ಗ ಸೇರಿ ಹಲವು ರಸ್ತೆಗಳು ಕುಸಿದು ವಾಹನ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿದೆ.

‘ಕೆಲವು ಕಡೆ ನೀರಿನ ಹರಿವಿನ ದಿಕ್ಕೇ ಬದಲಾಗಿದೆ. ಕಾಫಿ, ಏಲಕ್ಕಿ, ಕಾಳುಮೆಣಸು ತೋಟಗಳು, ಭತ್ತದ ಗದ್ದೆಗಳು ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಗದ್ದೆ, ತೋಟಗಳಿಗೆ ಹೋಗುವ ರಸ್ತೆಗಳು ಬಂದ್‌ ಆಗಿವೆ. ಆಗಿರುವ ಹಾನಿ ಸರಿಪಡಿಸಿ ಮೂಲ ಸ್ಥಿತಿಗೆ ತರಬೇಕೆಂದರೆ ದಶಕಗಳೇ ಬೇಕಾಗಬಹುದು’ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಈ ಅನಾಹುತಕ್ಕೆ ಪ್ರಕೃತಿ ವಿಕೋಪದ ಜತೆಗೆ ಮಾನವ ನಿರ್ಮಿತ ಲೋಪಗಳು ಕಾರಣ ಎಂಬ ಮಾತು ಸ್ಥಳೀಯರಿಂದಲೇ ಕೇಳಿ ಬಂದಿದೆ.
**
ಇದನ್ನೂ ಓದಿರಿ...
ಎತ್ತಿನಹೊಳೆ: ಮೂಡಿದ ಆಶಾವಾದ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು