ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಪ್ರಕರಣ ದಾಖಲಿಸಿದರೂ ಹೆದರಲ್ಲ: ಕರವೇ ಅಧ್ಯಕ್ಷ ನಾರಾಯಣಗೌಡ

Published 8 ಫೆಬ್ರುವರಿ 2024, 14:40 IST
Last Updated 8 ಫೆಬ್ರುವರಿ 2024, 14:40 IST
ಅಕ್ಷರ ಗಾತ್ರ

ಹಾಸನ: ಕರ್ನಾಟಕ, ಕನ್ನಡ ಭಾಷೆಯ ರಕ್ಷಣೆಗೆ ಹೊರಾಟ ಹತ್ತಿಕ್ಕಲು 16 ಅಲ್ಲ 100 ಪ್ರಕರಣ ದಾಖಲಿಸಿದರೂ ಹೆದರುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಇರಬೇಕು. ಈ ನಿಟ್ಟಿನಲ್ಲಿ ಡಿಸೆಂಬರ್ 27ರ ಹೋರಾಟ ದಾಖಲೆಯಾಗಿದೆ. ಇಡೀ ಕನ್ನಡ ನಾಡಿನ ಶೇ 99 ರಷ್ಟು ಜನ ಬೆಂಬಲಿಸಿ ಒಪ್ಪಿಕೊಂಡಿದ್ದಾರೆ. ಈ ಹೋರಾಟದ ಹಿನ್ನೆಲೆಯಲ್ಲಿ 14 ದಿನ ಜೈಲು ಸೇರಬೇಕಾಯಿತು. ನನ್ನ ವಿರುದ್ಧ 16 ಪ್ರಕರಣಗಳನ್ನು ದಾಖಲಿಸಿ ಸರ್ಕಾರ ಜೈಲಿಗೆಟ್ಟಿದೆ. ಇನ್ನೂ 100 ಪ್ರಕರಣ ದಾಖಲು ಮಾಡಿದರೂ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡಬೇಕು 60:40 ಅನುಪಾತದಲ್ಲಿ ನಾಮಫಲಕ ಇರಬೇಕು ಎಂಬ ಒತ್ತಾಯದೊಂದಿಗೆ ಹೋರಾಟ ಮಾಡಲಾಯಿತು. ಮಾಲ್‌ ಆಫ್ ಏಷ್ಯಾ ನ್ಯಾಯಾಲಯದ ಮೊರೆ ಹೋಯಿತು. ಉತ್ತರ ಭಾರತದ ಉದ್ಯಮಿಗಳು ಸರ್ಕಾರದ ಮೇಲೆ ಪ್ರಭಾವ ಬೀರುವ ಮೂಲಕ ಒತ್ತಡ ಹಾಕಿ ನನ್ನನ್ನು ಜೈಲಿಗೆ ಅಟ್ಟಲಾಗಿದೆ. ಇದರಲ್ಲಿ ಉದ್ಯಮಿಗಳ ಹುನ್ನಾರ ಇರಬಹುದು ಎಂದು ದೂರಿದರು.

ಸಿದ್ದರಾಮಯ್ಯ ಆಗಲಿ, ಡಿ.ಕೆ. ಶಿವಕುಮಾರ್ ಆಗಲಿ, ನನ್ನ ಕನ್ನಡ ಪರ ಹೋರಾಟದ ಧ್ವನಿ ಅಡಗಿಸಲು ಆಗುವುದಿಲ್ಲ. ಅದು ಮೂರ್ಖತನದ ಪರಮಾವಧಿ. ನಾನು ಕೊನೆಯ ಉಸಿರಿರುವರೆಗೂ ಕನ್ನಡ ಪರವಾಗಿ ಹೋರಾಟ ಮಾಡುತ್ತೇನೆ. ಹೆದರುವ ಪ್ರಶ್ನೆಯೇ ಇಲ್ಲ ಎಂದರು.

ಫೆ.28ರ ಒಳಗೆ ಬೆಂಗಳೂರು ಕನ್ನಡೀಕರಣ ಆಗಬೇಕು ಎಂದು ಗಡುವನ್ನು ನೀಡಲಾಗಿದೆ. ಬೇಡಿಕೆ ಈಡೇರದಿದ್ದರೆ ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಹೋರಾಟ ನಡೆಸಲಾಗುವುದು. ನಮ್ಮ ಧ್ವನಿ ಅಡಗಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಸವಾಲು ಹಾಕಿದರು .

ನಮ್ಮ ನಾಡಿನ ಜನರ ತೆರಿಗೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. ನಾವು ಹಲವು ವರ್ಷಗಳ ಹಿಂದೆಯೇ ನಾಡಿನ ತೆರಿಗೆಯನ್ನು ಸಮನಾಗಿ ಹಂಚುವಂತೆ ವೇದಿಕೆಯಿಂದ ಹೋರಾಟ ಮಾಡಿದ್ದೆವು. ಇದೀಗ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲು ಹೊರಟಿರುವುದು ರಾಜಕೀಯಕ್ಕಾಗಿ. ಅವರಿಗೆ ಯಾವುದೇ ಸಂಘಟನೆ ಬೆಂಬಲ ನೀಡಿಲ್ಲ. ನಾಡು ನುಡಿ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಕಾಂಗ್ರೆಸ್ ಇಂದು ಅದನ್ನು ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಏಕಾಂಗಿ ಹೋರಾಟ ಮಾಡಲು ಹೊರಟಿದೆ ಎಂದು ಹೇಳಿದರು.

ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವೇ ಹೆಚ್ಚು ತೆರಿಗೆ ಪಾವತಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಹಣ ವಾಪಸ್‌ ಬರಬೇಕಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ ಎಂದು ನಾರಾಯಣಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT