ಶನಿವಾರ, ಅಕ್ಟೋಬರ್ 16, 2021
22 °C
ಎಲ್ಲೆಡೆ ಖರೀದಿ ಭರಾಟೆ, ಆಯುಧಪೂಜೆಗೆ ಬೆಲೆ ಏರಿಕೆ ಬಿಸಿ

ಹೂವು, ಹಣ್ಣು ದುಬಾರಿ: ಬೂದುಗುಂಬಳ ಅಗ್ಗ

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಆಯುಧಪೂಜೆ ಅಂಗವಾಗಿ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದ್ದು, ಹೂವು, ಹಣ್ಣು ಹಾಗೂ ಇತರೆ ಸಾಮಗ್ರಿಗಳ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿತು. 

ಕಟ್ಟಿನಕೆರೆ ಮಾರುಕಟ್ಟೆ, ಮಹಾವೀರ ವೃತ್ತ, ನಗರ ಸಾರಿಗೆ ಬಸ್‌ ನಿಲ್ದಾಣ ರಸ್ತೆ ಸೇರಿದಂತೆ ವಿವಿಧೆಡೆ ಗ್ರಾಮಾಂತರ  ಪ್ರದೇಶ, ಬೇರೆ ಬೇರೆ ಊರುಗಳಿಂದ ಬಂದಿರುವ ವ್ಯಾಪಾರಿಗಳು ಹೂವು, ಬಾಳೆಕಂದು, ಬೂದುಗುಂಬಳ, ನಿಂಬೆಹಣ್ಣು ವ್ಯಾಪಾರದಲ್ಲಿ ನಿರತರಾಗಿದ್ದರು. ಎಲ್ಲೆಡೆ ಖರೀದಿ ಭರಾಟೆ ಕಂಡು ಬಂತು.

ನಗರದ ಮಾರುಕಟ್ಟೆಗಳಲ್ಲಿ, ಪ್ರಮುಖ ರಸ್ತೆಗಳ ಬದಿಗಳಲ್ಲಿ ಬೂದುಗುಂಬಳದ ರಾಶಿ ಕಂಡು ಬಂತು. ಹಾಸನ ಸುತ್ತಮುತ್ತ, ಹಳೇಬೀಡು ಹಾಗೂ ಬೆಂಗಳೂರಿನಿಂದ ಬಂದ ಕಾಯಿಯನ್ನೂ ಮಾರಾಟ ಮಾಡಲಾಗುತ್ತಿದೆ. ಸರಕು ಸಾಗಣೆ ಆಟೊಗಳು, ಟೆಂಪೊಗಳಲ್ಲಿ ವ್ಯಾಪಾರಸ್ಥರು, ರೈತರು ರಾಶಿಗಟ್ಟಲೆ ಬೂದುಗುಂಬಳವನ್ನು ನಗರಕ್ಕೆ ತಂದಿದ್ದಾರೆ. ಕಟ್ಟಿನಕೆರೆ ಮಾರುಕಟ್ಟೆ, ಕಸ್ತೂರಬಾ ರಸ್ತೆ, ವಿದ್ಯಾನಗರ ಸರ್ಕಲ್‌ ಸೇರಿದಂತೆ ಹಲವೆಡೆ ಸಗಟು ಖರೀದಿ ನಡೆಯಿತು. 

ಬೇಡಿಕೆಗಿಂತ ಹೆಚ್ಚು ಮಾಲು ಬಂದಿರುವ ಕಾರಣ ಬೂದುಗುಂಬಳದ ದರ ಕುಸಿದಿದೆ. ಮಂಗಳವಾರ ಕೆ.ಜಿ. ₹ 40ಕ್ಕೆ ಮಾರಾಟವಾಗುತ್ತಿದ್ದ ಬೂದುಗುಂಬಳ ಬುಧವಾರ ₹ 15 ರಿಂದ ₹ 20ಕ್ಕೆ ಇಳಿಕೆ ಕಂಡಿತ್ತು. ಹಲವೆಡೆ ಗಾತ್ರದ ಆಧಾರದಲ್ಲಿ ಉಂಡೆ ವ್ಯಾಪಾರ ಮಾಡುತ್ತಿದ್ದರೆ ಮತ್ತೆ ಕೆಲವರು ತೂಕ ಹಾಕಿ ವ್ಯಾಪಾರ ಮಾಡುತ್ತಿದ್ದರು. ತಮಗೆ ಬೇಕಾದ ಗಾತ್ರದ ಬೂದು ಗುಂಬಳಕಾಯಿಯನ್ನು ಗ್ರಾಹಕರು ಖರೀದಿ ಮಾಡಿದರು. ಕೆಲವೆಡೆ ಬಿಡಿ ಲೆಕ್ಕದಲ್ಲಿ ಮಾರಾಟ ನಡೆದರೆ, ಮತ್ತೆ ಕೆಲವೆಡೆ ಕೆ.ಜಿ ಲೆಕ್ಕದಲ್ಲಿ ಮಾರಾಟ ನಡೆಯುತ್ತಿತ್ತು.

‘ಬೂದುಗುಂಬಳವು ಈ ಬಾರಿ ಮಾರುಕಟ್ಟೆಗೆ ಬೇಡಿಕೆಗಿಂತ ಹೆಚ್ಚು ಬಂದಿದೆ. ಹಾಗಾಗಿ ದರ ಕುಸಿತವಾಗಿದೆ. ಮಂಗಳವಾರ ಮಳೆಯಿಂದಾಗಿ ಜನರು ಮಾರುಕಟ್ಟೆಯತ್ತ ಸುಳಿಯಲಿಲ್ಲ. ಬುಧವಾರ, ಗುರುವಾರ ಮಳೆ ಬಿಡುವು ನೀಡಿದರೆ ಮಾತ್ರ ಒಂದಿಷ್ಟು ಲಾಭವಾಗುತ್ತದೆ. ಇಲ್ಲದಿದ್ದರೆ, ತಂದಿರುವ ಬೂದುಗುಂಬಳದ ಖರ್ಚು ಸಿಗುವುದಿಲ್ಲ’ ಎಂದು ವರ್ತಕ ಚಂದ್ರು ತಿಳಿಸಿದರು.

ಮಾವಿನಸೊಪ್ಪು, ಬಾಳೆಕಂದು, ತೆಂಗಿನಕಾಯಿ, ಕಡಲೆಪುರಿ, ಸಿಹಿತಿಂಡಿಗಳ ವ್ಯಾಪಾರವೂ ಜೋರಾಗಿತ್ತು. ತರಕಾರಿ ಮಾರುಕಟ್ಟೆ ಸೇರಿ ನಗರದ ವಿವಿಧೆಡೆ ಹೂವಿನ ರಾಶಿ ರಾರಾಜಿಸುತ್ತಿತ್ತು. ಮಾರು ಸೇವಂತಿಗೆ ಹೂವು ₹ 80 ಗಡಿ ಮುಟ್ಟಿದೆ. ಮಳೆ, ಬೆಲೆ ಇಳಿಕೆಯಿಂದ ಕಂಗೆಟ್ಟಿದ್ದ ಹೂ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.

ಮಾರು ಮಲ್ಲಿಗೆ ₹ 80–100, ಕಾಕಡ ₹ 100, ಕನಕಾಂಬರ ₹ 200, ಚೆಂಡು ಹೂ ₹80 ರಂತೆ  ಮಾರಾಟವಾಗುತ್ತಿತ್ತು. ವಾಹನಗಳಿಗೆ ಕಟ್ಟಲು, ಅಂಗಡಿಗಳಿಗೆ ಬೇಕಾದ ಬಾಳೆಕಂದು ₹ 15–50ಕ್ಕೆ ಹಾಗೂ  ನಿಂಬೆಹಣ್ಣು ₹ 10ಕ್ಕೆ 4ರಂತೆ ಮಾರಾಟ ಮಾಡಲಾಗುತ್ತಿತ್ತು.

ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಬೇಡಿಕೆ ತಕ್ಕಂತೆ ಮಾರುಕಟ್ಟೆಗೆ ಟೊಮೆಟೊ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿಗೆ ₹60ಕ್ಕೆ ತಲುಪಿದೆ. ಈರುಳಿ ಬೆಲೆ ಕೆ.ಜಿಗೆ ₹ 50ಕ್ಕೆ ಏರಿಕೆಯಾಗಿದೆ. ಕೆ.ಜಿ ನುಗ್ಗೆಕಾಯಿ ಬೆಲೆ ₹120ಕ್ಕೆ ತಲುಪಿದೆ. ಜೊತೆಗೆ ಬೀನ್ಸ್‌, ಕ್ಯಾರೆಟ್‌, ಬೀಟರೂಟ್‌, ದೊಣ್ಣೆ ಮೆಣಸಿನಕಾಯಿ ಕೆ.ಜಿಗೆ ₹60ರಂತೆ ಮಾರಾಟ ಮಾಡಲಾಗುತ್ತಿದೆ.

ಏಲಕ್ಕಿ ಬಾಳೆಹಣ್ಣು ₹ 70ಕ್ಕೆ ಏರಿದೆ. ಸೇಬು ₹120, ದಾಳಿಂಬೆ ₹120,ಮೂಸಂಬಿ, ಕಿತ್ತಳೆ ₹70,
ದ್ರಾಕ್ಷಿ ₹ 100 ರಂತೆ ಮಾರಲಾಗುತ್ತಿತ್ತು. ಸೊಪ್ಪಿನ ಬೆಲೆಯೂ ಕೊಂಚ ಏರಿಕೆಯಾಗಿದೆ. ನಾಟಿ ಕೊತ್ತಂಬರಿ ಕಟ್ಟಿಗೆ ₹‌ 20, ಪಾಲಕ್‌, ಸಬ್ಬಸಿಗೆ ₹10, ಮೆಂತೆ ₹20, ಕೀರೆ, ದಂಟು, ₹10ರಂತೆ ಮಾರಾಟ ಮಾಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.