ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಹಾ ಸಮಿತಿ ರಚನೆ: ಚರ್ಚೆ, ಗದ್ದಲ

ಅರಸೀಕೆರೆ ನಗರಸಭೆ ಸಾಮಾನ್ಯ ಸಭೆ: ಬೋಗಸ್‌ ಬಿಲ್ ಸೃಷ್ಟಿ– ಜೆಡಿಎಸ್‌ ಸದಸ್ಯರ ಆರೋಪ
Last Updated 20 ಜುಲೈ 2021, 4:14 IST
ಅಕ್ಷರ ಗಾತ್ರ

ಅರಸೀಕೆರೆ: ‘ನಗರಸಭೆಯಲ್ಲಿ ನಡೆದಿದೆ ಎನ್ನಲಾದ ₹ 12 ಲಕ್ಷ ವ್ಯವಹಾರ, ಬೋಗಸ್ ಬಿಲ್‌ಗೆ ಸಂಬಂಧಿಸಿದಂತೆ ತನಿಖೆಗೆ ಸಲಹಾ ಸಮಿತಿ ರಚಿಸಬೇಕು’ ಎಂಬ ಜೆಡಿಎಸ್ ಸದಸ್ಯರ ಆಗ್ರಹದಿಂದ ಸಭೆಯಲ್ಲಿ ಚರ್ಚೆ ಮತ್ತು ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು

ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್‌ ಸದಸ್ಯರು ಬಿಲ್‌ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಅಧ್ಯಕ್ಷ ಗಿರೀಶ್, ಬಿಜೆಪಿ ಸದಸ್ಯರು ಹಾಗೂ ಇತ್ತೀಚೆಗೆ ಜೆಡಿಎಸ್‌ನಿಂದ ಹೊರ ಹೋಗಿ ಬಿಜೆಪಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಸದಸ್ಯರ ನಡುವೆ ಮಾತಿನ ಮಾತು ಬೆಳೆದಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು.

ಇದಕ್ಕೂ ಮೊದಲು ಸಭೆಗೆ ಆಗಮಿಸಿದ ಜೆಡಿಎಸ್ ಸದಸ್ಯರು, ಜೆಡಿಎಸ್, ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹೊರ ಹೋಗಿರುವ ಸದಸ್ಯರಿಗೆ ಒಟ್ಟಿಗೇ ಆಸನದ ವ್ಯವಸ್ಥೆ ಮಾಡಿರುವುದನ್ನು ಖಂಡಿಸಿ ಆಯಾ ಪಕ್ಷದ ಸದಸ್ಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ವಿರೋಧಿಸಿದ ಅಧ್ಯಕ್ಷ ಗಿರೀಶ್ ಅವರು, ‘ನಾವು ವಾರ್ಡ್ ಪ್ರಕಾರ ಆಸನದ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಪ್ರಕಾರ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ’ ಎಂದರು.

ಇದಕ್ಕೆ ಶಾಸಕ ಕೆ. ಎಂ. ಶಿವಲಿಂಗೇಗೌಡ ಸೇರಿದಂತೆ ಜೆಡಿಎಸ್ ಸದಸ್ಯರೆಲ್ಲರೂ ವಿರೋಧ ವ್ಯಕ್ತಪಡಿಸಿ ತಾವೇ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಿಕೊಂಡು ಸಭೆಯಲ್ಲಿ ಭಾಗವಹಿಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿ ಸ್ವ್ಪ ಹೊತ್ತು ಸಭೆಯಲ್ಲಿ ಗದ್ದಲ ಏರ್ಪಟ್ಟಿತ್ತು.

ಸದಸ್ಯ ಸಮೀವುಲ್ಲಾ ಮಾತನಾಡಿ, ‘ಸಭೆ ಆರಂಭಕ್ಕೂ ಮುನ್ನವೇ ಗೊಂದಲವನ್ನು ಸೃಷ್ಟಿಸಲಾಗುತ್ತಿದೆ, ನಗರದ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಯಾಗಬೇಕು’ ಎಂದು ಪಟ್ಟು ಹಿಡಿದರು.

ಸಭೆಯಲ್ಲಿ ಪೌರಾಯುಕ್ತ ಚಲಪತಿ, ‘ಯಾರಿಗೋ ಒಬ್ಬರಿಗೆ ರಾಸ್ಕಲ್ ಒದ್ದು ಆಚೆ ಓಡಿಸುತ್ತೇನೆ ಎಂಬ ಪದ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ‘ನೀವೊಬ್ಬ ಸರ್ಕಾರಿ ಅಧಿಕಾರಿಯಾಗಿ ಸಾಮಾನ್ಯ ಸಭೆಯಲ್ಲಿ ಈ ರೀತಿ ಅವಾಚ್ಯ ಶಬ್ದಗಳನ್ನು ಬಳಸುವುದು ಸೂಕ್ತ ಅಲ್ಲ, ನಗರಸಭೆಯಲ್ಲಿ ಸಾರ್ವಜನಿಕರ ಹಾಗೂ ನಗರದ ಅಭಿವೃದ್ಧಿ ಕೆಲಸಗಳು ನಡೆಯಬೇಕು ಎಂಬ ಸದುದ್ದೇಶದಿಂದ ಬೋಗಸ್ ಬಿಲ್‌ಗೆ ಸಂಬಂಧಿಸಿದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿ ತನಿಖೆ ನಡೆಸಿ, ಅದು ಈ ಸಭೆಯಲ್ಲೇ ನಿರ್ಣಯ ಆಗಬೇಕು. ಇಲ್ಲದಿದ್ದರೆ ಬಹುಮತ ಸಾಬೀತುಪಡಿಸುವಂತೆ ಒತ್ತಡ ಹೇರಿದರು. ಇದಕ್ಕೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಒಪ್ಪದಿದ್ದರೆ ನಾವು ಜಿಲ್ಲಾಧಿಕಾರಿ ಬಳಿ ನ್ಯಾಯ ಕೇಳುತ್ತೇವೆ’ ಎಂದರು.

ಅಧ್ಯಕ್ಷ ಗಿರೀಶ್ ಮಾತನಾಡಿ, ‘ಸಲಹಾ ಸಮಿತಿ ರಚನೆಗೆ ನಮ್ಮ ವಿರೋಧ ಇದೆ, ಕಾನೂನಿನಲ್ಲಿ ಅವಕಾಶವಿದ್ದರೆ ರಚಿಸೋಣ ಎಂಬ ಉತ್ತರಕ್ಕೆ, ಪ್ರತಿಕ್ರಿಯಿಸಿಶಾಸಕ ಶಿವಲಿಂಗೇಗೌಡ, ‘ಹಾಗಾದರೆ ಜೆಡಿಎಸ್ ಸದಸ್ಯರು ಕಾನೂನು ರೀತಿ ಮುಂದುವರಿಯುತ್ತಾರೆ, ಈ ಬಾರಿಯ ನಗರಸಭೆಯ ರಾಜಕಾರಣದ ಚಿತ್ರಣವೇ ಬೇರೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾನ್ಯ ಸಭೆಯಲ್ಲಿ ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ 6 ಸದಸ್ಯರು ಬಿಜೆಪಿ ಪರ ಮಾತನಾಡಿದರು.

ನಗರಸಭೆ ಉಪಾಧ್ಯಕ್ಷ ಕಾಂತೇಶ್, ನಗರಸಭೆ ಸದಸ್ಯರು, ಆಡಳಿತ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT