ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು | ಶುಂಠಿ ಬಿತ್ತನೆ: ಬೆಡ್‌ಗಳಿಗೆ ಭತ್ತದ ಹುಲ್ಲು

ಹೆಚ್ಚಿದ ಬೇಡಿಕೆ, ಹೊರ ಜಿಲ್ಲೆಯಿಂದ ಪೂರೈಕೆ
Published 25 ಫೆಬ್ರುವರಿ 2024, 5:47 IST
Last Updated 25 ಫೆಬ್ರುವರಿ 2024, 5:47 IST
ಅಕ್ಷರ ಗಾತ್ರ

ಹಳೇಬೀಡು: ಶುಂಠಿ ಬಿತ್ತನೆ ಮಾಡಿದ ಬೆಡ್‌ಗಳಿಗೆ ಹರಡಲು ಶಿವಮೊಗ್ಗ, ಉತ್ತರ ಕರ್ನಾಟಕದ ವಿವಿಧ ಊರುಗಳಿಂದ ಹಳೇಬೀಡಿಗೆ ಭಾರೀ ಪ್ರಮಾಣದಲ್ಲಿ ಪ್ರತಿದಿನ ಭತ್ತದ ಹುಲ್ಲು ಬರುತ್ತಿದೆ. ಶುಂಠಿ ಬೆಳೆಗಾರರು ಪೈಪೋಟಿಯಲ್ಲಿ ಹುಲ್ಲು ಖರೀದಿಸುತ್ತಿದ್ದಾರೆ.

ಸ್ಥಳೀಯವಾಗಿ ಭತ್ತದ ಬೆಳೆ ಸ್ಥಗಿತವಾಗಿದ್ದು, ಹೊರ ಜಿಲ್ಲೆಯ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ಶುಂಠಿ ಬೆಳೆಯುವವರ ಸಂಖ್ಯೆ ಪ್ರತಿ ವರ್ಷಕ್ಕಿಂತ ಹೆಚ್ಚಾಗಿದೆ. ಪ್ರತಿದಿನ 5-6 ಲಾರಿಗಳಲ್ಲಿ ಹುಲ್ಲು ತುಂಬಿಸಿಕೊಂಡು ಬಂದು, ಶುಂಠಿ ಬೆಳೆಗಾರರಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಹೊರೆ ಹುಲ್ಲು ಡಿಸೆಂಬರ್‌ನಿಂದ ಜನವರಿ ಆರಂಭದವರೆಗೂ ₹ 320ರಿಂದ ರಿಂದ ₹ 350 ರವರೆಗೂ ಮಾರಾಟವಾಯಿತು. ಈಗ ಬೆಲೆ ಕಡಿಮೆಯಾಗಿದ್ದು, ₹ 250 ರಿಂದ ₹ 270ರವರೆಗೆ ಮಾರಾಟವಾಗುತ್ತಿದೆ.

ದೂರದ ಹಾವೇರಿ ಜಿಲ್ಲೆಯಿಂದಲೂ ಭತ್ತದ ಹುಲ್ಲು ಬಂದಿತ್ತು. ಆದರೆ ಶಿವಮೊಗ್ಗ ಜಿಲ್ಲೆಯಿಂದ ಅತಿ ಹೆಚ್ಚು ಹುಲ್ಲು ಹಳೇಬೀಡು ಭಾಗಕ್ಕೆ ಬರುತ್ತಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಸಾಗರ, ತರೀಕೆರೆಯ ವರ್ತಕರು, ಹಳೇಬೀಡು ಭಾಗದ ರೈತರ ಬೇಡಿಕೆಗೆ ತಕ್ಕಂತೆ ಹುಲ್ಲು ಪೂರೈಕೆ ಮಾಡುತ್ತಿದ್ದಾರೆ.

ಸಣ್ಣ ರೈತರು ಕನಿಷ್ಠ 10 ರಿಂದ 50 ಹೊರೆಯವರೆಗೆ ಹುಲ್ಲು ಖರೀದಿ ಮಾಡುತ್ತಿದ್ದಾರೆ. ಗುತ್ತಿಗೆ ಜಮೀನಿನಲ್ಲಿ ಶುಂಠಿ ಬೆಳೆಯುವವರು 100 ಹೊರೆಯಿಂದ 1,500 ಹೊರೆಯವರೆಗೂ ಭತ್ತದ ಹುಲ್ಲು ಖರೀದಿ ಮಾಡಿದ್ದಾರೆ.

ಒಂದು ಎಕರೆ ಶುಂಠಿ ಬೆಳೆಯಲು 45ರಿಂದ 50 ಹೊರೆ ಹುಲ್ಲು ಬೇಕು. ಹೀಗಾಗಿ ಒಂದು ಎಕರೆ ಶುಂಠಿ ಬೆಳೆಯಲು ಹುಲ್ಲಿಗೆ ₹ 15ಸಾವಿರ ಬಂಡವಾಳ ತೊಡಗಿಸಲೇಬೇಕಾಗಿದೆ. ಈ ವರ್ಷ ಹೆಚ್ಚಿನ ರೈತರು ಶುಂಠಿ ಬೆಳೆಯಲು ಮುಂದಾಗಿರುವುದರಿಂದ 250 ರಿಂದ 300 ಹೊರೆ ಹುಲ್ಲು ತುಂಬಿಸಿದ 5ರಿಂದ 6 ಲಾರಿಗಳು ಹಳೇಬೀಡು ಕಡೆಗೆ ಬರುತ್ತಿವೆ. 40ರಿಂದ 50 ಹೊರೆ ತುಂಬಿಸಿದ ಸರಕು ಆಟೊ ರಿಕ್ಷಾಗಳಲ್ಲಿಯೂ ಭತ್ತದ ಹುಲ್ಲು ಹಳೇಬೀಡು ಭಾಗಕ್ಕೆ ಬರುತ್ತಿದೆ.

ಶಿವಮೊಗ್ಗ ಜಿಲ್ಲೆಯ ಭತ್ತದ ಹುಲ್ಲು ಆವಕಗೊಂಡ ಪರಿಣಾಮ, ಈ ಹಿಂದೆ ಸಕಲೇಶಪುರ, ಅರೇಹಳ್ಳಿ, ಮೂಡಿಗೆರೆಯಿಂದ ಬರುತ್ತಿದ್ದ ಭತ್ತದ ಹುಲ್ಲಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಶುಂಠಿ ಬೆಳೆಗಾರ ಗೌರಿಕೊಪ್ಪಲು ಸೋಮಶೇಖರ್ ತಿಳಿಸಿದರು.

ಶುಂಠಿ ಬಿತ್ತನೆಯ ಬೆಡ್‌ಗಳಿಗೆ ಹರಡಲು ಶಿವಮೊಗ್ಗ ಉತ್ತರ ಕರ್ನಾಟಕದಿಂದ ತರಿಸಿರುವ ಹುಲ್ಲು
ಶುಂಠಿ ಬಿತ್ತನೆಯ ಬೆಡ್‌ಗಳಿಗೆ ಹರಡಲು ಶಿವಮೊಗ್ಗ ಉತ್ತರ ಕರ್ನಾಟಕದಿಂದ ತರಿಸಿರುವ ಹುಲ್ಲು

300 ಹೊರೆ ಭತ್ತದ ಹುಲ್ಲು ತುಂಬಿಸಿದ ಲಾರಿ ನಿತ್ಯ ಹಳೇಬೀಡಿಗೆ ಭತ್ತದ ಹುಲ್ಲು ಹರಡದಿದ್ದರೆ, ಉಷ್ಣಾಂಶದಿಂದ ಶುಂಠಿಗೆ ಹಾನಿ ಒಂದು ಹೊರೆ ಹುಲ್ಲಿನ ಬೆಲೆ ₹ 250ರಿಂದ ₹ 270ಕ್ಕೆ ಇಳಿಕೆ

ಹೊರ ಜಿಲ್ಲೆಯಿಂದ ಹುಲ್ಲು ತರಿಸಬಹುದು ಎಂಬ ಪಾಠ ಬೆಳೆಗಾರರಿಂದ ಕಲಿತಂತಾಯಿತು. ತುಂಗಾ-ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಬಹುಭಾಗದಲ್ಲಿ ಹರಿಯುವುದರಿಂದ ಮೇವಿಗೂ ಹುಲ್ಲು ತರಿಸಬಹುದು

-ಗಂಗಾಧರ ರೈತ

ಕಾರ್ಮಿಕರ ಕೊರತೆ: ಭತ್ತಕ್ಕೆ ಹಿನ್ನಡೆ

ಹಳೇಬೀಡು ಭಾಗದಲ್ಲಿ ಭತ್ತದ ಬೆಳೆ ಸಂಪೂರ್ಣವಾಗಿ ಕುಸಿದಿದೆ. ಭತ್ತ ಬೆಳೆಯುವ ಗದ್ದೆಗಳು ಚಿಕ್ಕ ಹಿಡುವಳಿಗಳಾಗಿವೆ. ಯಂತ್ರ ಬಳಕೆಯಿಂದ ಭತ್ತದ ನಾಟಿ ಕಟಾವು ಮಾಡಿಸಲು ದೊಡ್ಡ ಗದ್ದೆಗಳಿಲ್ಲ. ಚಿಕ್ಕ ಹಿಡುವಳಿಯಲ್ಲಿ ಕೆಸರು ಗದ್ದೆಯ ಭತ್ತದ ನಾಟಿ ಕಟಾವಿನ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ. ಹೀಗಾಗಿ ಹಳೇಬೀಡು ಭಾಗದಲ್ಲಿ ಭತ್ತದ ಹುಲ್ಲಿನ ಕೊರತೆಯಾಗಿದೆ. ಶುಂಠಿ ಬೆಳೆಗಾರರು ಹೊರ ಜಿಲ್ಲೆಯ ಹುಲ್ಲು ಖರೀದಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ರೈತ ಸಿದ್ದಾಪುರದ ಪ್ರೇಮ್ ಕುಮಾರ್.

ತೇವಾಂಶ ಹಿಡಿದಿಡಲು ಹುಲ್ಲು ಬಳಕೆ

ಶುಂಠಿ ಬಿತ್ತನೆಯ ಬೆಡ್‌ಗಳಿಗೆ ಹುಲ್ಲು ಹರಡದಿದ್ದರೆ ಬೆಳೆ ಮೊಳಕೆ ಹಂತದಲ್ಲಿಯೇ ಉಷ್ಣಾಂಶಕ್ಕೆ ಮುರುಟಿ ಹೋಗುತ್ತದೆ. ಉಷ್ಣಾಂಶಕ್ಕೆ ಮೊಳಕೆಯಲ್ಲಿಯೇ ಸೊರಗಿದರೆ ಬೆಳೆಯ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಶುಂಠಿ ಬೆಳೆಗಾರ ಗೌರಿಕೊಪ್ಪಲು ಸೋಮಶೇಖರ್ ಹೇಳಿದರು. ಇದರಿಂದ ಇಳುವರಿ ಸಹ ಕುಸಿತವಾಗುವ ಸಾಧ್ಯತೆ ಇದೆ. ಹುಲ್ಲಿನ ಹೊದಿಕೆಯಿಂದ ಶುಂಠಿ ಬೆಡ್‌ಗಳಲ್ಲಿ ಹೆಚ್ಚು ದಿನ ತೇವಾಂಶ ಇರುತ್ತದೆ. ಬೆಡ್‌ಗಳಿಗೆ ಕಬ್ಬಿನ ತರಗನ್ನು ಹರಡುತ್ತಾರೆ. ಭತ್ತದ ಹುಲ್ಲು ನುಣಾಪಾಗಿರುವುದರಿಂದ ಬೆಡ್‌ನಲ್ಲಿ ಒತ್ತಟ್ಟಾಗಿ ಹರಡಿಕೊಳ್ಳುತ್ತದೆ. ಬೇರೆ ತರಗಿನಿಂದ ಸಮರ್ಪಕವಾಗಿ ಬೆಡ್‌ ಮುಚ್ಚಲು ಸಾಧ್ಯವಿಲ್ಲ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT