ಸೋಮವಾರ, ಆಗಸ್ಟ್ 15, 2022
22 °C

ಗೊಲ್ಲರಹಟ್ಟಿ ಗ್ರಾಮಗಳಿಗೂ ಪ್ರವೇಶ ಸಿಗಲಿ: ಮುಖಂಡ ಎ.ಪಿ.ಚಂದ್ರಯ್ಯ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಸೀಕೆರೆ: ‘ಅಸ್ಪೃಶ್ಯರು ಎಂಬ ಕಾರಣಕ್ಕೆ ಒಂದೆರಡು ಜಾತಿಯವರನ್ನು ತಾಲ್ಲೂಕಿನ ಕೆಲವು ಗೊಲ್ಲರಹಟ್ಟಿ ಗ್ರಾಮಗಳೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಇಂಥ ಸಂಪ್ರದಾಯ ನಿಲ್ಲಬೇಕು’ ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎ.ಪಿ.ಚಂದ್ರಯ್ಯ ಒತ್ತಾಯಿಸಿದರು.

ನಗರದ ತಾಲ್ಲೂಕು ಪೊಲೀಸ್ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಅರಸೀಕೆರೆ ಮತ್ತು ಬೇಲೂರು ತಾಲ್ಲೂಕುಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ತುಳಿತಕ್ಕೊಳಗಾಗಿ, ಸಾಮಾಜಿಕವಾಗಿ ಹಿಂದುಳಿದವರೇ ಪರಿಶಿಷ್ಟ ಜಾತಿಯವರನ್ನು ತುಳಿಯುವ ಹುನ್ನಾರ  ನಡೆಯುತ್ತಿದೆ. ಇದರ ಬಗ್ಗೆ ತನಿಖೆಯಾಗಬೇಕು. ಸಮಾಜದಲ್ಲಿ ಯಾರು ನಿಜವಾಗಿ ತುಳಿತಕ್ಕೊಳಗಾಗಿದ್ದಾರೋ ಅವರಿಗೆ ಸೂಕ್ತ ನ್ಯಾಯ ದೊರಕಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಅಣ್ಣಾದೊರೆ ಮಾತನಾಡಿ, ನಗರದಲ್ಲಿ ಮಟ್ಕಾ ಮತ್ತು ಗಾಂಜಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಪರಿಶಿಷ್ಟ ಜಾತಿ, ಪಂಗಡದವರೇ ಬಲಿಯಾಗುತ್ತಿದ್ದಾರೆ. ಕೂಲಿ ಮಾಡಿ ಸಂಪಾದಿಸಿದ ಹಣವನ್ನು ಇಂಥ ಕಾನೂನು ಬಾಹಿರ ಚಟುವಟಿಕೆಗಳಿಗೆ ವಿನಿಯೋಗಿಸುವುದರಿಂದ ಕುಟುಂಬ ಸಂಕಷ್ಟಕ್ಕೀಡಾಗುತ್ತಿದೆ. ಈ ದಂಧೆ ನಡೆಸುವವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಕೊಂಡೆನಾಳು ಪ್ರಸನ್ನ ಮಾತನಾಡಿ, ತಾಲ್ಲೂಕಿನ ಮುಜರಾಯಿ ಇಲಾಖೆ ದೇವಾಲಯಗಳ ಮುಂಭಾಗದಲ್ಲಿ ಸರ್ವ ಜನಾಂಗದವರಿಗೆ ಪ್ರವೇಶವಿದೆ ಎಂಬ ನಾಮಪಲಕವನ್ನು ಹಾಕಿಸಬೇಕು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ದೇವಾಲಯಗಳೊಳಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇದು ಜಾತಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದರು.

ಡಿವೈಎಸ್ಪಿ ಎಲ್ ನಾಗೇಶ್ ಮಾತನಾಡಿ, ಪ್ರವೇಶ ನಿರ್ಬಂಧಿಸಿರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಮುಜರಾಯಿ ಇಲಾಖೆ ಗಮನಕ್ಕೆ ತರಲಾಗುವುದು. ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವುದರಿಂದ ಗ್ರಾಮಗಳಲ್ಲಿ ಯಾರಾದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರೆ ಅದರ ಬಗ್ಗೆ ಮಾಹಿತಿ ನೀಡಬೇಕು. ಸಮಸ್ಯೆ ಇದ್ದರೆ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು ಎಂದರು.

ಮುಖಂಡರಾದ ಮಂಜುನಾಥ್ ಸಂಕೋಡನಹಳ್ಳಿ, ವೆಂಕಟೇಶ್ ಚಿಕ್ಕ ಬಾಣಾವರ, ಈರಯ್ಯ, ಕಿರಣ್ ಅರಕೆರೆ, ಅರಸೀಕೆರೆ ಮತ್ತು ಬೇಲೂರು ತಾಲ್ಲೂಕುಗಳ ಪರಿಶಿಷ್ಟ ಜಾತಿ, ಪಂಗಡದ ಸಂಘಟನೆಗಳ ಮುಖಂಡರುರು, ನಗರ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಯ್ಯ, ಗ್ರಾಮಾಂತರ ಠಾಣೆ ಪಿಎಸ್ಐ ಬಸವರಾಜ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.