ಗುಡ್ಡ, ಕಲ್ಲು ಬಂಡೆ ಕುಸಿತ

7
ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗ

ಗುಡ್ಡ, ಕಲ್ಲು ಬಂಡೆ ಕುಸಿತ

Published:
Updated:
Deccan Herald

ಹಾಸನ: ಹಾಸನ ಜಿಲ್ಲೆಯಲ್ಲಿ ವರುಣ ಆರ್ಭಟ ಕೊಂಚ ತಗ್ಗಿದ್ದರೂ, ಅನೇಕ ರೀತಿಯ ನಷ್ಟ ಮಾತ್ರ ನಿಂತಿಲ್ಲ.

ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ರೈಲ್ವೆ ಹಳಿ ಮೇಲೆ ಸುಮಾರು 50 ಕಡೆ ಗುಡ್ಡ ಮತ್ತು ಭಾರೀ ಗಾತ್ರದ ಕಲ್ಲು ಬಂಡೆ ಕುಸಿದಿದೆ. ಒಂದೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆ ಅಡ್ಡಿಯಾದರೆ, ಮತ್ತೊಂದೆಡೆ ಸಿಬ್ಬಂದಿ ಕೊರತೆಯಿಂದಾಗಿ ತೆರವು ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ.

ಹಾಗಾಗಿ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಪುನಾರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.

ಸಕಲೇಶಪುರದ ಹಲವು ಕಡೆ ಗುಡ್ಡ ಕುಸಿದು, ನೂರಾರು ಎಕರೆ ಕಾಫಿ ತೋಟ ನಾಶವಾಗಿದ್ದರೆ, ಅನೇಕ ಗ್ರಾಮಗಳ ಸಂಪರ್ಕ ರಸ್ತೆ ಬಂದ್ ಆಗಿವೆ.

‘ಮನುಷ್ಯರನ್ನು ಬಳಸಿ ಮಣ್ಣು ಹಾಗೂ ಬಂಡೆ ತೆರವುಗೊಳಿಸುವುದು ಕಷ್ಟಸಾಧ್ಯವಾಗಿದ್ದು, ಜೆಸಿಬಿಗಳ ಮೂಲಕವೇ ತೆರವು ಕಾಮಗಾರಿ ನಡೆಸಬೇಕಿದೆ. ಮಳೆ ಬಿಡುವು ನೀಡಿದರೆ ವಾರದ ಅಂತರದಲ್ಲಿ ತೆರವು ಕಾರ್ಯದ ಜೊತೆಗೆ ಹಾನಿಯಾಗಿರುವ ಹಳಿ ದುರಸ್ತಿ ಕೆಲಸ ಮುಗಿದು ರೈಲು ಓಡಾಟ ಶುರುವಾಗಲಿದೆ. ಇಲ್ಲವಾದರೆ ಈ ಮಾರ್ಗದಲ್ಲಿ ರೈಲು ಸಂಚಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ’ ಎಂದು ರೈಲ್ವೆ ಇಲಾಖೆ ಅಧಿಕಾರಿ ತಿಳಿಸಿದರು.

ಹೆತ್ತೂರು ಮತ್ತು ಯಸಳೂರು ಹೋಬಳಿಗಳ ಅನೇಕ ಕಡೆ ಭೂಮಿ ಕುಸಿದು, ನೂರಾರು ಎಕರೆ ಕಾಫಿ ಗಿಡ ನಾಶವಾಗಿದೆ. ಹಲವು ಗ್ರಾಮಗಳ ಸಂಪರ್ಕ ರಸ್ತೆ ಕಡಿತವಾಗಿದ್ದು, ಜನರು ಪರದಾಡುತ್ತಿದ್ದಾರೆ. ನೂರಾರು ಎಕರೆ ಪ್ರದೇಶದ ವಿವಿಧ ಬೆಳೆ ನೀರು ಪಾಲಾಗಿದೆ.

ಹಿಜ್ಜಗನಹಳ್ಳಿಯಲ್ಲಿ ಭೂಕುಸಿತ ನೋಡಲು ನೋಡಿ, ಸಂಕಷ್ಟಕ್ಕೆ ಸಿಲುಕಿದ್ದ 80 ವರ್ಷದ ಕೆಂಚಮ್ಮ ಎಂಬ ಅಜ್ಜಿಯನ್ನು ಯುವಕರ ಗುಂಪೊಂದು ರಕ್ಷಣೆ ಮಾಡಿದೆ.

ಅರಕಲಗೂಡು ತಾಲ್ಲೂಕು ರಾಮನಾಥಪುರದಲ್ಲಿ ಪ್ರವಾಹ ಭೀತಿ ಕೊಂಚ ಕಡಿಮೆಯಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಕಾವೇರಿ ತುಸು ಶಾಂತವಾಗಿದ್ದಾಳೆ. ಆದರೆ , ಜಲಾವೃತವಾಗಿದ್ದ ನೂರಕ್ಕೂ ಅಧಿಕ ಮನೆಗಳ ಪೈಕಿ 20 ಮನೆಗಳು ಕುಸಿದಿವೆ. ಮತ್ತಷ್ಟು ಮನೆಗಳಿಗೆ ಕಂಟಕ ಎದುರಾಗಿದೆ. ಜಲಾವೃತವಾಗಿದ್ದ ರಸ್ತೆಗಳಲ್ಲಿ ಲಘು ವಾಹನ ಸಂಚಾರ ಶುರುವಾಗಿದೆ.

‘ಮುಂದೆಯೂ ಪ್ರವಾಹ ಭೀತಿ ಇರುವುದರಿಂದ ತಗ್ಗು ಪ್ರದೇಶದಲ್ಲಿರುವ ಎಲ್ಲಾ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಬರಿಗೈ ಆಗಿರುವ ನಮಗೆಲ್ಲಾ ಮನೆ ಕಟ್ಟಲು ಸಹಾಯಧನ ನೀಡಬೇಕು’ ಎಂದು ಸಂತ್ರಸ್ತರಾದ ಶಾಂತಮ್ಮ, ಕಾಳಬೋವಿ ಮನವಿ ಮಾಡಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !