ಕನ್ನಡ ಕರುಳ ಭಾಷೆಯಾಗಲಿ

7
ಹಳಗನ್ನಡ ಸಮ್ಮೇಳನದಲ್ಲಿ ವಿದ್ವಾಂಸ ಹಂಪ ನಾಗರಾಜಯ್ಯ ಅಭಿಮತ

ಕನ್ನಡ ಕರುಳ ಭಾಷೆಯಾಗಲಿ

Published:
Updated:
ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

ಚಾವುಂಡರಾಯ ಮಂಟಪ (ಶ್ರವಣಬೆಳಗೊಳ): ‘ಕನ್ನಡ ಕೇವಲ ಕೊರಳ ಭಾಷೆಯಾದರೆ ಸಾಲದು, ಕರುಳ ಭಾಷೆಯೂ ಆಗಬೇಕು’ ಎಂದು ಹಿರಿಯ ವಿದ್ವಾಂಸ ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.

ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಸೋಮವಾರ ಆಶಯ ನುಡಿಗಳನ್ನಾಡಿದ ಹಿರಿಯ ವಿದ್ವಾಂಸ ಹಂಪ ನಾಗರಾಜಯ್ಯ, ‘ಹಳಗನ್ನಡಕ್ಕೆ ಇದು ಕಾಲವಲ್ಲ ಎನ್ನುವವರು ಬಿಡುವು ಮಾಡಿಕೊಂಡು ಹಳೆಯ ಕವಿಗಳ ಪದ್ಯಗಳನ್ನು ಮೆಲುಕು ಹಾಕಬೇಕು’ ಎಂದರು.

‘ಪದ್ಯಗಳನ್ನು ಚಪ್ಪರಿಸುತ್ತ ಆ ಕಾವ್ಯಗಳಿಗೆ ಒರಗಿ ನಿಂತರೆ, ಅವು ನಮ್ಮನ್ನು ತನ್ನ ತೆಕ್ಕೆಗೆ ಆತುಕೊಂಡು ರಸಪರವಶಗೊಳಿಸುತ್ತವೆ. ಹಳಗನ್ನಡ ಸಾಹಿತ್ಯ ಏಕೆ ಬೇಕು ಎಂದು ಕೇಳುವವರು ಇದ್ದಾರೆ. ಹಾಗಾದರೆ ಹೊಸಗನ್ನಡ ಯಾಕೆ ಬೇಕು. ಜಾನಪದವಾಗಲಿ, ವಚನ ಸಾಹಿತ್ಯವಾಗಲಿ ಏಕೆ ಬೇಕು’ ಎಂದು ಪ್ರಶ್ನಿಸಿದರು. ‘ಬೇಡ ಎಂದರೆ ಯಾವುದೂ ಬೇಡವೆನಿಸುತ್ತದೆ. ಬೇಕು ಎಂದರೆ ಕಷ್ಟವೆನಿಸಿದ್ದು ಕೂಡ ಇಷ್ಟವಾಗುತ್ತವೆ. ಹಳಗನ್ನಡ ಕಲಿಸಲು ಬೋಧಕರಿಲ್ಲ ಎಂಬುದು ಕುಂಟು ನೆಪ ಅಷ್ಟೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಜ್ಜಿ ಕಾಲದ ಚಿನ್ನದ ಒಡವೆಗಳನ್ನು ಬಿಸಾಡುವುದಿಲ್ಲ. ಅವುಗಳನ್ನು ಕರಗಿಸಿ ಹೊಸ ಕಾಲಕ್ಕೆ ಸಲ್ಲುವಂತೆ ಮಾಡಿಕೊಳ್ಳುತ್ತೇವೆ. ಹಳಗನ್ನಡ ಸಾಹಿತ್ಯದ ಪ್ರಯೋಜನ ಪಡೆಯಲು ಹೊಚ್ಚ ಹೊಸ ದಾರಿ ವಿಧಾನ ಕಂಡುಕೊಳ್ಳಬೇಕು. ಹಳೆಯದೆಲ್ಲ ಹೊನ್ನು, ಅದಕ್ಕೇ ತೆಕ್ಕೆ ಬೀಳಬೇಕು ಎನ್ನುತ್ತಿಲ್ಲ. ಕನ್ನಡಿಗರು ಕಳೆದುಕೊಳ್ಳುವುದರಲ್ಲಿ ಮುಂದೆ, ಪಡೆದುಕೊಳ್ಳುವುದರಲ್ಲಿ ಹಿಂದಿದ್ದಾರೆ. ಮುತ್ತಿನಂತಹ ದೇಸಿ ಮಾತುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ಮನವಿ ಮಾಡಿದರು.

ಭಾಷೆ ಕ್ಲಿಷ್ಟ ಎಂಬುದು ಅರ್ಧ ಸತ್ಯ. ಆಗಿನ ಕಾಲದ ಅಗತ್ಯಕ್ಕೆ ಭಾಷೆ ಬಾಗುತ್ತದೆ. ಮಹತ್ವದ ಕವಿಗಳು ಭಾಷೆಯ ಸಾಮರ್ಥ್ಯ ಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಾರೆ. ಹೊಸ ಮಾಧ್ಯಮಗಳನ್ನು ಹುಡುಕಿ ಪ್ರಯೋಗ ನಡೆಸುವರು, ಚಂಪೂರೂಪ ತೊರೆದು ಹರಿಹರ ರಗಳೆಯನ್ನು ಆಯ್ಕೆ ಮಾಡಿದರೆ, ಆತನ ಆಳಿಯ ರಾಘವಾಂಕನು ಷಟ್ಪದಿಯಲ್ಲಿ ತನ್ನ ಪ್ರತಿಭೆಯನ್ನು ಎರಕಹೊಯ್ದನು. ರತ್ನಾಕರವರ್ಣಿ ಸಾಂಗತ್ಯದ ಸೀಮಾಪುರಷನಾದನು ಎಂದು ನುಡಿದರು.

ಕನ್ನಡ ಕಾವ್ಯರಚನೆಯ ಪ್ರಯೋಗಶಾಲೆ ಶ್ರವಣಬೆಳಗೊಳ. ಕನ್ನಡಕ್ಕೆ ಸಂಸ್ಕೃತ, ಪ್ರಾಕೃತಗಳ ಕಸಿ ಮಾಡಿದ್ದು ಇಲ್ಲಿಯೇ. ಕನ್ನಡದೊಂದಿಗೆ ಸಕ್ಕದ ಪಾಗದಗಳ ಹದವರಿತ ಬೆಸುಗೆಗೆ ಕಸರತ್ತು ನಡೆದ ಗರಡಿಮನೆ ಚಿಕ್ಕಬೆಟ್ಟ, ಕನ್ನಡ, ಪಾಗದ, ಸಕ್ಕದ ಭಾಷೆಗಳ ಕೂಡಲಸಂಗಮ ಚಂದ್ರಗಿರಿ ಎಂದು ಬಣ್ಣಿಸಿದರು.

ಮನುಷ್ಯರೆಂದರೆ ಯಾರು, ಮನುಷ್ಯತ್ವದ ಲಕ್ಷಣಗಳೇನು ಎಂಬುದನ್ನು ಆದಿಕವಿ ಪಂಪ ತಿಳಿಗನ್ನಡದಲ್ಲಿ ಸರಳವಾಗಿ ತಿಳಿಸಿದ್ದಾನೆ. ತ್ಯಾಗ, ಭೋಗ,ವಿದ್ಯೆ, ಸಂಗೀತ ಮತ್ತು ಗೋಷ್ಠಿ ಇವುಗಳ ಸಂತೋಷಕ್ಕೆ ಯಾರು ಆಗರವಾಗಿರುವವರೋ ಅವರೇ ಸರಿಯಾದ ಮನುಷ್ಯರು. ಅಂತಹ ಮನುಷ್ಯರಾಗಿ ಹುಟ್ಟಲು ಆಗದಿದ್ದರೆ ಬನವಾಸಿ ದೇಶದ ಸುಂದರ ನಂದನವನದಲ್ಲಿ ಕಡೆ ಪಕ್ಷ ಮರಿದುಂಬಿಯಾಗಿಯೋ, ಕೊಗಿಲೆಯಾಗಿಯೋ ಹುಟ್ಟಬೇಕು ಎಂದಿದ್ದಾನೆ ಎಂದು ವಿವರಿಸಿದರು.

ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್‌ ಮಾತನಾಡಿ, ಕನ್ನಡದ ವಿಸ್ತಾರ ದೊಡ್ಡದು. ಅದನ್ನು ತಿಳಿಯಲು ಕಣ್ಣುಗಳ ಬೇಕು. ಗಾದೆ, ಯಕ್ಷಗಾನ, ಗಮಕ ರೂಪದಲ್ಲಿ ಹಳಗನ್ನಡ ಇನ್ನು ಉಳಿದಿದೆ ಎಂದರು.

ಸೌಮ್ಯಾ ಮತ್ತು ಸರ್ವೇಶ್‌ ಜೈನ್‌ ಅವರು ಹಳಗನ್ನಡ ಪದ್ಯ (ಪರಮ ಜಿನೇಂದ್ರ ವಾಣಿ) ಹಾಡಿದರು. ಸಮ್ಮೇಳನ ಸಂಚಾಲಕ ಪದ್ಮರಾಜ ದಂಡಾವತಿ ಸ್ವಾಗತಿಸಿದರು. ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೂಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜದವರು ನಾಡಗೀತೆ ಹಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಳ್ಳಿ ಮಂಜೇಗೌಡ, ಶಾಸಕ ಸಿ.ಎನ್‌.ಬಾಲಕೃಷ್ಣ  ಇದ್ದರು. ನವಿತಾ ಜೈನ್‌, ಎಸ್‌.ಎನ್‌.ಅಶೋಕ್‌ ಕುಮಾರ್ ನಿರೂಪಿಸಿದರು.

 3–5 ವರ್ಷಕ್ಕೊಮ್ಮೆ ಹಳಗನ್ನಡ ಸಮ್ಮೇಳನ

ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು 3 ಅಥವಾ 5 ವರ್ಷಕ್ಕೊಮ್ಮೆ ನಡೆಸುವ ಬಗ್ಗೆ ಪರಿಷತ್‌ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್‌ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಪ್ರತಿ ವರ್ಷ ಅಥವಾ 3–5 ವರ್ಷಕ್ಕೊಮ್ಮೆಯಾದರೂ ನಡೆಸುವಂತೆ ಹಲವರು ಸಲಹೆ ನೀಡಿದ್ದಾರೆ. ಹಿಂದಿನ ಎಲ್ಲಾ ಸಮ್ಮೇಳನಗಳಿಗಿಂತ ಇದು ಮಾದರಿಯಾಗಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಕರೆ ನೀಡಿದರು.

ನಡುಗನ್ನಡ ಸಾಹಿತ್ಯ ಸಮ್ಮೇಳನ ನಡೆಸಿ

ಹಳಗನ್ನಡದಂತೆಯೇ ನಡುಗನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಸಲಹೆ ನೀಡಿದರು. ರಾಘವಾಂಕ, ಜನಪದರು, ವಚನ ಮತ್ತು ದಾಸ ಸಾಹಿತ್ಯ ಮೇಲೂ ಬೆಳಕು ಚೆಲ್ಲುವ ಸಲುವಾಗಿ ನಡುಗನ್ನಡ ಸಮ್ಮೇಳನ ನಡೆಸಲು ಪರಿಷತ್‌ ಮುಂದಾಗಬೇಕು ಎಂದರು.

18 ಪುಸ್ತಕ ಲೋಕಾರ್ಪಣೆ

ಕನ್ನಡ ಸಾಹಿತ್ಯ ಪರಿಷತ್‌ ಪ್ರಕಟಿಸಿರುವ 18 ಪುಸ್ತಕಗಳನ್ನು ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ಲೋಕಾರ್ಪಣೆ ಮಾಡಿದರು. ಪಂಪ ಭಾರತ, ಕನ್ನಡ ಮಾತು ಬರಹ, ಆದಿಪುರಾಣ, ಪ್ರಾಚೀನ ಕಾವ್ಯ ಸಂಪುಟ, ಕನ್ನಡ ಸಾಹಿತ್ಯ ಮಂಥನ, ತಿಳಿಗನ್ನಡ ಸಂಪುಟ 1, 2, ಭಾಷೆ ರಚನೆ ಬಳಕೆ, ಹೊಸಗನ್ನಡ ಕಾವ್ಯಮಂಜರಿ, ಹೊಸಗನ್ನಡ ಕಥಾವಲ್ಲವಿ, ಜನಪದ ಸಾಹಿತ್ಯ ಸಂಚಯ, ಕನ್ನಡ ಸಾಹಿತ್ಯ ಸಮಾಗಮ, ಬಾಹುಬಲಿ ಶತಕಂ ಹಾಗೂ ಸಮ್ಮೇಳನಾಧ್ಯಕ್ಷ ಶೆಟ್ಟರ ರಚಿಸಿದ ‘ಪಾಕೃತ ಜಗ್ದವಲಯ’ ಬಿಡುಗಡೆ ಮಾಡಲಾಯಿತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !