ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ವಿಮಾನ ನಿಲ್ದಾಣ: ಶೀಘ್ರವೇ ಆರಂಭ

ಕಾಲಮಿತಿಯೊಳಗೆ ಗುಣಮಟ್ಟ ಕಾಯ್ದುಕೊಂಡು ಕೆಲಸ ನಿರ್ವಹಿಸಲು ಡಿ.ಸಿ ಸೂಚನೆ
Last Updated 20 ಸೆಪ್ಟೆಂಬರ್ 2021, 13:19 IST
ಅಕ್ಷರ ಗಾತ್ರ

ಹಾಸನ: ದಶಕಗಳ ವಿಮಾನ ನಿಲ್ದಾಣ ಪ್ರಾರಂಭದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಮಂಗಳವಾರ ಮಾರ್ಕಿಂಗ್ ಕಾರ್ಯ ಆರಂಭಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳು, ವಿಮಾನ ಕಾಮಗಾರಿ ಗುತ್ತಿಗೆ ಪಡೆದಿರುವ ನ್ಯಾಷನಲ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿಮಾತನಾಡಿದ ಅವರು, ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕಾಲಮಿತಿಯೊಳಗೆಗುಣಮಟ್ಟ ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ನಗರದ ಹೊರವಲಯದ ಬೂವನಹಳ್ಳಿ ಬಳಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದ್ದು, ಯಾವುದೇ ರೀತಿಯ ವಿಳಂಬವಾಗದಂತೆ ಕೆಲಸ ಪ್ರಾರಂಭಿಸುವಂತೆ ನಿರ್ದೇಶನ ನೀಡಿದರು.

ಕಾಮಗಾರಿಗೆ ಅನುಕೂಲವಾಗುವಂತೆ ತ್ವರಿತವಾಗಿ ವಿದ್ಯುತ್ ಟವರ್‌ಗಳ ಸ್ಥಳಾಂತರ ಕಾರ್ಯಪೂರ್ಣಗೊಳಿಸಬೇಕು. ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಅವರು ಸೆಸ್ಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಪಿಟಿಸಿಎಲ್ ಸೂಪರಿಟೆಂಡೆಂಟ್ ಎಂಜಿನಿಯರ್‌ ಉಮೇಶ್ ಮಾತನಾಡಿ, ‘ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ಪ್ರದೇಶದಲ್ಲಿ 9 ಕಿ.ಮೀ. ಮಾರ್ಗದಲ್ಲಿ 35 ಮೀಟರ್ ವಿಸ್ತೀರ್ಣದ ಹೈಟೆನ್ಷನ್ ತಂತಿ ಹಾಗೂ ಟವರ್‌ಗಳನ್ನು ತೆಗೆದು 17 ಕಿ.ಮೀ. ದೂರದಿಂದ ವಿದ್ಯುತ್ ಸಂಪರ್ಕ ವಿಸ್ತರಿಸಬೇಕಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, 68 ಟವರ್‌ಗಳ ಪೈಕಿ 66 ಟವರ್‌ಗಳನ್ನು ಹಾಕಲಾಗಿದ್ದು, 9 ಕಿ.ಮೀ ತಂತಿ ಎಳೆಯಲಾಗಿದೆ.ಇನ್ನೂ 2 ಟವರ್ ಹಾಗೂ 8 ಕಿ.ಮೀ ತಂತಿಗಳನ್ನು ಅಳವಡಿಸುವ ಕಾರ್ಯ ಬಾಕಿ ಇದೆ. ₹ 19 ಕೋಟಿ ವೆಚ್ಚವನ್ನು ಮೂಲಸೌಕರ್ಯ ಇಲಾಖೆಯಿಂದ ಒದಗಿಸಿ ಕೊಡಬೇಕಾಗಿದ್ದು, ಭೂ ಪರಿಹಾರಧನ ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು’ ಎಂದರು.

‘ಉದ್ದೇಶಿತ ಪ್ರದೇಶದ ವಿದ್ಯುತ್ ಮಾರ್ಗ ಸ್ಥಳಾಂತರಿಸಲು ₹ 7.3 ಕೋಟಿ ಭೂ ಪರಿಹಾರ ಧನ ಸೇರಿ ₹ 19.7 ಕೋಟಿ ಬಿಡುಗಡೆ ಮಾಡಿಕೊಡುವಂತೆ ಕೋರಲಾಗಿದ್ದು, ಒಟ್ಟಾರೆಯಾಗಿ 34 ಎಕರೆ ಭೂ ಪ್ರದೇಶಕ್ಕೆ ಪರಿಹಾರ ನೀಡಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಸೆಸ್ಕ್‌ ಅಧೀಕ್ಷಕ ಎಂಜಿನಿಯರ್‌ ಅಣ್ಣೇಗೌಡ, ಕಾರ್ಯವಾಹಕ ಎಂಜಿನಿಯರ್‌ ಅರ್ಜುನ್, ಕೆಪಿಟಿಸಿಎಲ್ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗಾರ್ಜುನ್, ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೇಶ್, ತಹಶೀಲ್ದಾರ್ ನಟೇಶ್, ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್‌ ಕರುಣಾಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT