ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ ಲೋಕಸಭೆ ಚುನಾವಣೆ: ಗೌಡರ ಕುಟುಂಬಕ್ಕೆ ಸೆಡ್ಡು ಹೊಡೆಯುವರೇ ಶ್ರೇಯಸ್ ಪಟೇಲ್‌

Published 9 ಮಾರ್ಚ್ 2024, 4:59 IST
Last Updated 9 ಮಾರ್ಚ್ 2024, 4:59 IST
ಅಕ್ಷರ ಗಾತ್ರ

ಹಾಸನ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಹಾಸನ ಕ್ಷೇತ್ರದಿಂದ ಶ್ರೇಯಸ್‌ ಪಟೇಲ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಯುವಕರಿಗೆ ಆದ್ಯತೆ ಸಿಕ್ಕಂತಾಗಿದೆ. ಆರು ಜನರ ಹೆಸರು ಪಟ್ಟಿಯಲ್ಲಿದ್ದರೂ, ಅಂತಿಮವಾಗಿ ಶ್ರೇಯಸ್‌ ಪಟೇಲ್‌ ಅವರಿಗೆ ಮನ್ನಣೆ ನೀಡಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೇಯಸ್‌ ಪಟೇಲ್‌, ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಶಾಸಕ ಎಚ್.ಡಿ. ರೇವಣ್ಣ ಅವರ ವಿರುದ್ಧ 3,500 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. ಅಂದಿನಿಂದಲೇ ಮುಂದಿನ ಲೋಕಸಭೆಗೆ ಶ್ರೇಯಸ್ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು.

ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಶತಾಯಗತಾಯ ಗೆಲ್ಲಲೇ ಬೇಕು ಎನ್ನುವ ಉದ್ದೇಶದಿಂದ ಎಲ್ಲ ಪಕ್ಷಗಳಿಗಿಂತ ಮೊದಲೇ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದೆ.

ಎಂ.ಎ.ಗೋಪಾಲಸ್ವಾಮಿ, ಬಿ.ಶಿವರಾಂ, ಬಾಗೂರು ಮಂಜೇಗೌಡ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದರು. ಈಗಾಗಲೇ ಪಕ್ಷದ ಕ್ಷೇತ್ರ ಉಸ್ತುವಾರಿ ಆಗಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಅವರು ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆಗೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿದ್ದರು. ಅದರ ಆಧಾರದಲ್ಲಿ ಕೆಪಿಸಿಸಿಗೆ ವರದಿ ಸಲ್ಲಿಸಿದ್ದರು. ಅಂತಿಮವಾಗಿ ದೇವೇಗೌಡರ ಕುಟುಂಬಕ್ಕೆ ಸೆಡ್ಡು ಹೊಡೆಯಬಲ್ಲ ಅಭ್ಯರ್ಥಿ ಎಂಬ ಕಾರಣಕ್ಕೆ ಶ್ರೇಯಸ್‌ ಪಟೇಲ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಸಂತಸ ತಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಶ್ರೇಯಸ್ ಪಟೇಲ್, ಕಾಂಗ್ರೆಸ್‌ ಅಭ್ಯರ್ಥಿ

ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಿತವಾಗಿದೆ. ಕಾಂಗ್ರೆಸ್‌ನಿಂದ ಶ್ರೇಯಸ್‌ ಪಟೇಲ್‌ ಸ್ಪರ್ಧಿಸಲಿದ್ದು, ಇಬ್ಬರೂ ಯುವಕರಾಗಿರುವುದು ಚುನಾವಣೆಯ ರಂಗು ಹೆಚ್ಚಿಸಲಿದೆ.

ಕುಟುಂಬಗಳ ಮಧ್ಯೆ ಹಣಾಹಣಿ

ಎಚ್‌.ಡಿ. ದೇವೇಗೌಡರು ಹಾಗೂ ಪುಟ್ಟಸ್ವಾಮಿಗೌಡರ ಮಧ್ಯೆ ಮೊದಲಿನಿಂದ ಸ್ಪರ್ಧೆ ಏರ್ಪಡುತ್ತಲೇ ಬಂದಿತ್ತು.

ಪ್ರಾರಂಭದ ಸ್ನೇಹವನ್ನು ಕಡಿದುಕೊಂಡು ದೂರವಾದ ಪುಟ್ಟಸ್ವಾಮಿಗೌಡರು, ಪ್ರತಿ ಚುನಾವಣೆಯಲ್ಲೂ ದೇವೇಗೌಡರಿಗೆ ಸವಾಲೊಡ್ಡುತ್ತಲೇ ಬಂದಿದ್ದರು. ಇದೀಗ ದೇವೇಗೌಡರ ಕುಟುಂಬಕ್ಕೆ ಅದೇ ಕುಟುಂಬದವರು ಮತ್ತೆ ಸವಾಲೊಡ್ಡುತ್ತಿದ್ದಾರೆ.

2013 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ. ರೇವಣ್ಣ ಅವರ ವಿರುದ್ಧ ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಸ್ಪರ್ಧೆ ಮಾಡಿ, ಸೋಲು ಅನುಭವಿಸಿದ್ದರು. 2023 ರ ಚುನಾವಣೆಯಲ್ಲಿ ರೇವಣ್ಣ ಅವರ ವಿರುದ್ಧ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್‌ ಪಟೇಲ್‌ ಸ್ಪರ್ಧೆಗೆ ಇಳಿದಿದ್ದರು. ಇದೀಗ ಮತ್ತೊಮ್ಮೆ ಪ್ರಜ್ವಲ್‌ ರೇವಣ್ಣ ವಿರುದ್ಧ ಶ್ರೇಯಸ್‌ ಕಣಕ್ಕೆ ಇಳಿದಿದ್ದು, ಎರಡು ಕುಟುಂಬಗಳ ನಡುವಿನ ಸ್ಪರ್ಧೆ ಮುಂದುವರಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT