ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲೆ: ತ್ರಿಶತಕ ತಲುಪಿದ ಕೋವಿಡ್ ಸೋಂಕಿತರು

224 ಜನ ಗುಣಮುಖ, 75 ಸಕ್ರಿಯ ಪ್ರಕರಣ
Last Updated 25 ಜೂನ್ 2020, 7:04 IST
ಅಕ್ಷರ ಗಾತ್ರ

ಹಾಸನ: ಬೆಂಗಳೂರಿನ ಬಿ.ಎಂ.ಟಿ.ಸಿ ಯ ನೌಕರನಾಗಿದ್ದ ಅರಸೀಕೆರೆಯವ್ಯಕ್ತಿಗೆ ಕೋವಿಡ್‌ ದೃಢ ಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 300ಕ್ಕೆ ಏರಿಕೆ ಆಗಿದೆ.

ಅರಸೀಕೆರೆಯ 40 ವರ್ಷದ (ಪಿ 299) ಪುರುಷನಿಗೆ ಪಾಸಿಟಿವ್ ಬಂದಿದ್ದು, ಆತನು ವಾಸವಿದ್ದ ಗ್ರಾಮವನ್ನು ಕಂಟೈನ್‌ಮೆಂಟ್‌ ವಲಯವನ್ನಾಗಿ ಮಾಡಲಾಗಿದೆ. ಜೂನ್ 14ರಂದು ರಜೆ ಪಡೆದು ಅರಸೀಕೆರೆಗೆ ಬಂದಿರುವ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದು, ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದ್ದು, ಬುಧವಾರ ಪಾಸಿಟಿವ್‌ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ 24 ಪ್ರದೇಶಗಳನ್ನು ಕಂಟೈನನ್‌ಮೆಂಟ್‌ ವಲಯವನ್ನಾಗಿ ಗುರುತಿಸಲಾಗಿತ್ತು. ಸರ್ಕಾರದ ನಿರ್ದೇಶನದಂತೆ 28 ದಿನಗಳ ಬಳಿಕ ಈ ವಲಯದಲ್ಲಿ ಯಾವುದೇ ಪಾಸಿಟಿವ್‌ ಪತ್ತೆಯಾಗದ ಹಿನ್ನೆಲೆ 2 ಕಂಟೈನ್‌ಮೆಂಟ್‌ ವಲಯಗಳನ್ನು ತೆರವು ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 22 ಕಂಟೈನ್‌ಮೆಂಟ್‌ ವಲಯಗಳಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈವರೆಗೆ 300 ಜನರಿಗೆ ಕೋವಿಡ್‌ -19 ದೃಢ ಪಟ್ಟಿದ್ದು, ಅದರಲ್ಲಿ 224 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 75 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೊವಿಡ್‌ ಆಸ್ಪತ್ರೆಯ ಐಸೋಲೆಷನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಖಾಸಗಿ ಆಸ್ಪತ್ರೆ ಮಾಲೀಕರ ಜೊತೆ ಸಭೆ;

ಜಿಲ್ಲೆಯಲ್ಲಿ ಸರ್ಕಾರಿ ಕೊವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಎಲ್ಲಾ ರೀತಿಯ ಸೌಲಭ್ಯಗಳಿದ್ದು, ಖಾಸಗಿ ಆಸ್ಪತ್ರೆಗಳ ಅಗತ್ಯ ಬರುವುದಿಲ್ಲ. ಆದರೂ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ 11 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್‌ ಚಿಕಿತ್ಸೆ ನೀಡಲು ಗುರುತಿಸಲಾಗಿದೆ. ಒಂದೇ ಆಸ್ಪತ್ರೆಯಲ್ಲಿ ಏಕ ಕಾಲದಲ್ಲಿ ಸಾಮಾನ್ಯ ರೋಗಿಗಳು ಮತ್ತು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟದ ಕೆಲಸ ಈ ಬಗ್ಗೆ ಖಾಸಗಿ ಆಸ್ಪತ್ರೆಯ ಮಾಲೀಕರ ಸಭೆ ಕರೆದು ವ್ಯವಸ್ಥೆಗಳಕುರಿತು ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಕಾಶ್‌ ಇದ್ದರು.

ಸರ್ಕಾರದ ನಿರ್ಧಾರದಂತೆ ಜೂನ್‌ 25ರಿಂದ ಜುಲ್ 4ರವರೆಗೆ ನಡೆಯುವಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆಗೆ ಹಾಜರಾಗಬಹುದು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಆತಂಕ ಬೇಡ

ಜಿಲ್ಲೆಯಲ್ಲಿ 89 ಪರೀಕ್ಷಾ ಕೇಂದ್ರಗಳನ್ನು ತರೆದಿದ್ದು, 21,257 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಹೊರ ಜಿಲ್ಲೆಯಲ್ಲಿ ಓದುತ್ತಿದ್ದು, ನಮ್ಮ ಜಿಲ್ಲೆಗೆ ಬಂದು 501 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ನಮ್ಮ ಜಿಲ್ಲೆಯಿಂದ ಹೊರ ಜಿಲ್ಲೆಗೆ 254 ವಿದ್ಯಾರ್ಥಿಗಳು ಹೋಗಿದ್ದಾರೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಬೆಳಿಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು. ಸ್ಕ್ರೀನಿಂಗ್, ಸ್ಯಾನಿಟೈಸರ್‌, ಮಾಸ್ಕ್‌ ವಿತರಣೆ ಹಾಗೂ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 142 ಕೆ.ಎಸ್‌.ಆರ್‌.ಟಿ.ಸಿ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಅರಕಲಗೂಡು ತಾಲ್ಲೂಕು ಕಂಟೈನ್‌ ಮೆಂಟ್‌ ವಲಯದಿಂದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾ ಗುತ್ತಿದ್ದು, ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಒಟ್ಟಿ ನಲ್ಲಿ ಪರೀಕ್ಷೆ ಸುಗಮವಾಗಿ ನಡೆಯಲು ಜಿಲ್ಲಾಡಳಿತದಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT