ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು | ಮಳೆ ಕೊರತೆ: ಬಾಡುತ್ತಿರುವ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ

Published 27 ಆಗಸ್ಟ್ 2023, 6:21 IST
Last Updated 27 ಆಗಸ್ಟ್ 2023, 6:21 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನಲ್ಲಿ ಜೂನ್ ಮಧ್ಯಭಾಗ ಕಳೆದರೂ, ಮುಂಗಾರಿನ ಮುನ್ಸೂಚನೆ ಇಲ್ಲದೆ ಬಿತ್ತಿದ ಬೆಳೆಗಳು ಒಣಗುತ್ತಿವೆ. ಇದರಿಂದ ಮತ್ತೆ ನಷ್ಟದ ಆತಂಕ ರೈತರನ್ನು ಆವರಿಸುತ್ತಿದೆ.

ಮಳೆ ಕೈಕೊಟ್ಟಿರುವುದರಿಂದ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. ಇದೇ ಪರಿಸ್ಥಿತಿ ಕೆಲ ದಿನಗಳವರೆಗೆ ಮುಂದುವರಿದರೆ, ಪರಿಸ್ಥಿ ಇನ್ನಷ್ಟು ಬಿಗಡಾಯಿಸಲಿದೆ. ಮೇ ತಿಂಗಳಿನಲ್ಲಿ ವಾಡಿಕೆ ಮಳೆ 96 ಮಿ.ಮೀ. ಇದ್ದು, 133 ಮಿ.ಮೀ ಮಳೆಯಾಗಿತ್ತು. ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತಮ ವಾತಾವರಣ ಒದಗಿಸಿತ್ತು.

ಉತ್ಸಾಹದಿಂದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರೈತರು, ಮುಸುಕಿನ ಜೋಳ 11,640 ಹೆಕ್ಟೇರ್, ತಂಬಾಕು 7,105 ಹೆಕ್ಟೇರ್, ದ್ವಿದಳ ಧಾನ್ಯ 1,640 ಹೆಕ್ಟೇರ್, ಆಲೂಗೆಡ್ಡೆ 280 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ತಾಲ್ಲೂಕಿನಲ್ಲಿ ಒಟ್ಟು 43,190 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈಗಾಗಲೇ 15,817 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಶೇ 33.5 ರಷ್ಟು ಪ್ರಗತಿಯಾಗಿದೆ.

ಜೂನ್ ತಿಂಗಳಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಜೂ 15 ರವರೆಗೆ ವಾಡಿಕೆ ಮಳೆ 35.7 ಮಿ.ಮೀ ಬೀಳಬೇಕಿದ್ದು, ಈವರೆಗೆ ಕೇವಲ 10.6 ಮಿ.ಮೀ ಮಳೆಯಾಗಿದೆ, ಪ್ರತಿ ದಿನ ಮೋಡ ಕವಿದ ವಾತಾವರಣವಿದ್ದು, ಇನ್ನೇನು ಮಳೆ ಬರುತ್ತದೆ ಎನ್ನುವಷ್ಟರಲ್ಲಿ ಮೋಡ ಚದುರಿ ಹೋಗಿ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಮೋಡವು ಮಳೆ ಹನಿಗಳನ್ನು ಸುರಿಸದೇ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ,

ಹೀಗಾಗಿ ಬಿತ್ತನೆ ಮಾಡಿದ್ದ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿದೆ. ಒಂದರೆಡು ದಿನಗಳಲ್ಲಿ ಹದ ಮಳೆಯಾದರೆ ಅಲ್ಪ ಚೇತರಿಕೆ ಕಾಣಬಹುದು. ಇಲ್ಲದಿದ್ದಲ್ಲಿ ಬಿತ್ತನೆಯಾಗಿರುವ ಬೆಳೆ ಸಂಪೂರ್ಣ ಒಣಗಿಹೋಗುವ ಆಪಾಯ ಎದುರಾಗಿದೆ.

ನೀರಾವರಿ ವ್ಯವಸ್ಥೆ ಇರುವ ರೈತರು ನೀರು ಹಾಯಿಸಿ, ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ವಿದ್ಯುತ್ ಕಣ್ನಾಮುಚ್ಚಾಲೆಯಿಂದ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಗದೀಶ್‌
ಜಗದೀಶ್‌
ಅರಕಲಗೂಡು ತಾಲ್ಲೂಕಿನ ಹೊಲವೊಂದರಲ್ಲಿ ಬೆಳವಣಿಗೆ ಹಂತದ ಮುಸುಕಿನ ಜೋಳ ಮಳೆಯಿಲ್ಲದೆ ಬಾಡುತ್ತಿದೆ.
ಅರಕಲಗೂಡು ತಾಲ್ಲೂಕಿನ ಹೊಲವೊಂದರಲ್ಲಿ ಬೆಳವಣಿಗೆ ಹಂತದ ಮುಸುಕಿನ ಜೋಳ ಮಳೆಯಿಲ್ಲದೆ ಬಾಡುತ್ತಿದೆ.
ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಒಣಗುತ್ತಿರುವ ಜೋಳದ ಬೆಳೆ ರಕ್ಷಣೆಗೆ ರೈತ ಪುಟ್ಟರಾಜ್ ಸ್ಪ್ರಿಂಕ್ಲರ್‌ನಿಂದ ನೀರು ಹಾಯಿಸುತ್ತಿರುವುದು.
ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಒಣಗುತ್ತಿರುವ ಜೋಳದ ಬೆಳೆ ರಕ್ಷಣೆಗೆ ರೈತ ಪುಟ್ಟರಾಜ್ ಸ್ಪ್ರಿಂಕ್ಲರ್‌ನಿಂದ ನೀರು ಹಾಯಿಸುತ್ತಿರುವುದು.
ಜೂನ್‌ನಲ್ಲಿ ಇದುವರೆಗೆ ಕೇವಲ 10 ಮಿ.ಮೀ. ಸುರಿದ ಮಳೆ ಮಳೆಯನ್ನೇ ನಂಬಿ ಬಿತ್ತನೆ ಮಾಡಿರುವ ರೈತರಿಗೆ ಸಂಕಷ್ಟ ಮುಂಗಾರು ಬಿತ್ತನೆ ವಿಳಂಬ: ಇಳುವರಿಯ ಮೇಲೆ ಪರಿಣಾಮ
ಮಳೆ ಇಲ್ಲದೇ ಮುಸುಕಿನ ಜೋಳ ಸೇರಿದಂತೆ ಬಿತ್ತಿದ ಬೆಳೆಗಳು ಬಾಡುತ್ತಿದೆ. ಮಳೆ ನಂಬಿ ಬಿತ್ತನೆ ಮಾಡಿದ್ದ ರೈತನಿಗೆ ಹಣವೂ ಉಳಿಯಲಿಲ್ಲ. ಬೆಳೆಯೂ ಇಲ್ಲದಂತಾಗಿದೆ. ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ.
ಜಗದೀಶ್ ದೊಡ್ಡಮಗ್ಗೆ ಗ್ರಾಮದ ಕೃಷಿಕ
ತಾಲ್ಲೂಕಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಿದೆ. ಮಳೆ ಬೀಳದ ಕಾರಣ ಬಿತ್ತಿದ ಬೆಳೆ ಬಾಡುತ್ತಿವೆ. ಸದ್ಯದಲ್ಲಿ ಒಂದರೆಡು ಹದ ಮಳೆಯಾದಲ್ಲಿ ಬೆಳೆಗಳು ಚೇತರಿಕೆ ಕಾಣುವ ಸಾಧ್ಯತೆ ಇದೆ.
ಎಚ್.ಕೆ. ರಮೇಶ್‌ಕುಮಾರ್ ಸಹಾಯಕ ಕೃಷಿ ನಿರ್ದೇಶಕ
ಕಾಣದಾಗುತ್ತಿರುವ ಆಲೂಗಡ್ಡೆ
ಒಂದು ಕಾಲದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಆಲೂಗಡ್ಡೆ ಕೃಷಿ ತಾಲ್ಲೂಕಿನಿಂದ ಮರೆಯಾಗುತ್ತಿದೆ. ಕಸಬಾ ದೊಡ್ಡಮಗ್ಗೆ ಹಾಗೂ ಮಲ್ಲಿಪಟ್ಟಣ ಹೋಬಳಿಯ ಕೆಲಭಾಗದಲ್ಲಿ ಸುಮಾರು 4 ರಿಂದ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗೆಡ್ಡೆಯನ್ನು ಬಿತ್ತನೆ ಮಾಡಲಾಗುತ್ತಿತ್ತು. ಹೆಚ್ಚಿದ ರೋಗಬಾಧೆ ದೊರಕದ ಬೆಲೆ ಗುಣಮಟ್ಟದ ಬಿತ್ತನೆ ಬೀಜ ದೊರಕದಿರುವುದು ಹೆಚ್ಚಿದ ವೆಚ್ಚ ಹೀಗೆ ಹಲವು ಕಾರಣಗಳಿಂದ ರೈತರು ಆಲೂಗಡ್ಡೆ ಬೆಳೆಯುವುದನ್ನು ಕಡಿಮೆ ಮಾಡುತ್ತಾ ಬಂದರು. ಕಷ್ಟಗಳ ಮಧ್ಯೆಯೂ ಇತ್ತೀಚಿನವರೆಗೂ 1500 ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆಯಾಗುತ್ತಿತ್ತು. ಈ ಬಾರಿ ಕೇವಲ 280 ಹೆಕ್ಟೇರ್ ಪ್ರದೇಶಕ್ಕೆ ಬೆಳೆ ಸೀಮಿತ ಗೊಂಡಿದೆ. ಈ ಬಾರಿ ಬಿತ್ತನೆ ಮಾಡಿದ್ದ ಆಲೂಗಡ್ಡೆಯು ಮಳೆಯಿಲ್ಲದೇ ನಾಶವಾಗಿದ್ದು ಕೃಷಿಕರು ತಲೆ ಮೇಲೆ ಕೈಹೊತ್ತು ಕುಳಿತು ಕೊಳ್ಳುವಂತಾಗಿದೆ. ಈಗ ಮಳೆಯಾದರೂ ಬಿತ್ತನೆಗೆ ಹದಗೊಳಿಸಲು ಎರಡು ವಾರವಾದರೂ ಬೇಕು. ಇದೇ ಪರಿಸ್ಥಿತಿ ಮುಂದುವರಿದರೆ ಬಿತ್ತನೆ ತಡವಾಗಲಿದೆ. ಮುಂಗಾರು ಬಿತ್ತನೆ ವಿಳಂಬವಾದಲ್ಲಿ ಇಳುವರಿ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT