ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿಗೆ ಹೇಮಾವತಿ ನೀರು: ಭುಗಿಲೆದ್ದ ಆಕ್ರೋಶ

ಕಾಂಗ್ರೆಸ್‌, ಜೆಡಿಎಸ್‌, ರೈತ ಮುಖಂಡರಿಂದ ಪ್ರತಿಭಟನೆ
Published 14 ಮಾರ್ಚ್ 2024, 14:10 IST
Last Updated 14 ಮಾರ್ಚ್ 2024, 14:10 IST
ಅಕ್ಷರ ಗಾತ್ರ

ಹಾಸನ: ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ 2 ಟಿಎಂಸಿ ನೀರು ಹರಿಸುತ್ತಿರುವುದಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ರೈತ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬುಧವಾರ ಮಧ್ಯಾಹ್ನದಿಂದ ತುಮಕೂರಿಗೆ ನೀರು ಹರಿಸಲಾಗುತ್ತಿದೆ. ಇದನ್ನು ವಿರೋಧಿಸಿ ಚನ್ನರಾಯಪಟ್ಟಣ ತಾಲ್ಲೂಕಿನ ಆಲಗೊಂಡನಹಳ್ಳಿ ಏತ ನೀರಾವರಿ ಜಾಕ್‌ವೆಲ್‌ಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಚನ್ನರಾಯಪಟ್ಟಣದಲ್ಲಿ ರೈತ ಸಂಘಟನೆಗಳು ಪ್ರತಿಭಟಿಸಿದ್ದು, ತಹಶೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಿದವು.

ಸ್ವಪಕ್ಷಿಯರಿಂದಲೇ ವಿರೋಧ: ಚನ್ನರಾಯಪಟ್ಟಣದ ಹೇಮಾವತಿ ನೀರಾವರಿ ಯೋಜನಾ ಕಚೇರಿ ಎದುರು ರೈತರು ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ‘ತುಮಕೂರಿಗೆ ಕುಡಿಯುವ ನೀರು ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಗೊರೂರಿನ ಹೇಮಾವತಿ ಜಲಾಶಯದಿಂದ ನೀರು ಬಿಡುವಂತೆ ನಿರ್ಣಯ ಕೈಗೊಂಡಿದ್ದಾರೆ. ರಾಜಣ್ಣ ಕೇವಲ ಮಧುಗಿರಿ ಕ್ಷೇತ್ರಕ್ಕೆ ಶಾಸಕರಲ್ಲ. ಅವರು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರೂ ಹೌದು. ಈ ವಿಚಾರವನ್ನು ಮರೆತು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀರು ಹರಿಸದಿದ್ದರೆ ಡಿಸಿ, ಎಸ್ಪಿ ಹೊಣೆ: ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕರು, ಸಂಸದರೊಂದಿಗೆ ಪ್ರತಿಭಟಿಸಿದ ಶಾಸಕ ಎಚ್‌.ಡಿ. ರೇವಣ್ಣ, ‘ಶುಕ್ರವಾರ ಸಂಜೆಯೊಳಗೆ ಹಾಸನ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರ, ಜಿಲ್ಲಾಧಿಕಾರಿ, ಎಸ್ಪಿ ಹೊಣೆ ಆಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ನೀರು ಹರಿಸದಿದ್ದರೆ ಒಂದು ಕಡೆ ಗೊರೂರು ಜಲಾಶಯಕ್ಕೆ ಮುತ್ತಿಗೆ ಹಾಕುತ್ತೇವೆ. ಇನ್ನೊಂದೆಡೆ ನಾಲೆಯ ಬಳಿ 500 ಜನ ಸೇರಿ ನೀರು ಹರಿಸುತ್ತೇವೆ. ನಾವು ಯಾವುದೇ ಮನವಿ ಕೊಡುವುದಿಲ್ಲ. ನೇರವಾಗಿ ಹೇಳುತ್ತಿದ್ದೇನೆ, ತುಮಕೂರಿನ ಹೆಸರಿನಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT