ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತರಲ್ಲ: ಶಾಸಕ ಸ್ವರೂಪ್ ಪ್ರಕಾಶ್

ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ: ಶಾಸಕ ಸ್ವರೂಪ್ ಪ್ರಕಾಶ್
Published 27 ಜೂನ್ 2024, 13:11 IST
Last Updated 27 ಜೂನ್ 2024, 13:11 IST
ಅಕ್ಷರ ಗಾತ್ರ

ಹಾಸನ: ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ ನಾಡಪ್ರಭು ಕೆಂಪೇಗೌಡ ಅವರು ಒಂದು ಸಮುದಾಯಕ್ಕೆ ಸೀಮಿತ ಆದವರಲ್ಲ ಎಂದು ಶಾಸಕ ಸ್ವರೂಪ್ ಪ್ರಕಾಶ್ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಂಪೇಗೌಡ ಅವರು ಕಟ್ಟಿದಂತಹ ರಾಜ್ಯದ ರಾಜಧಾನಿ ಬೆಂಗಳೂರು ಇಂದಿಗೂ ಸರ್ವ ಜನಾಂಗದ ಜನರಿಗೆ ಜೀವನಕ್ಕೆ ನೆರಳು ನೀಡಿದೆ. ಇಲ್ಲಿ ರಾಜ್ಯದವರೇ ಅಲ್ಲದೆ ನೆರೆ ರಾಜ್ಯದ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಮಹಾನಗರಕ್ಕೆ ಅಡಿಪಾಯ ಹಾಕಿದ ಕೆಂಪೇಗೌಡರ ದೂರದೃಷ್ಟಿ ಸ್ಮರಣೀಯವಾದದ್ದು ಎಂದರು.

ಇಂದು ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಂಬತ್ತು ಮಂದಿ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಸಹಕಾರದಿಂದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದಿದೆ ಎಂದರು.

ಕೆಂಪೇಗೌಡರ ಪ್ರತಿಮೆಯನ್ನು ನಗರದಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂಬ ಚಿಂತನೆ ಇದ್ದು, ಮುಂದಿನ ವರ್ಷದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆಗೆ ಸಾಕಾರಗೊಳ್ಳಲಿದೆ ಎಂದು ಸ್ವರೂಪ್ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಮಾತನಾಡಿ, ದೂರ ದೃಷ್ಟಿ ಆಡಳಿತದ ಗುರಿ ಇಟ್ಟುಕೊಂಡು ಭೌಗೋಳಿಕವಾಗಿ ಉತ್ತಮ ಹವಾಮಾನ ಹೊಂದಿದಂತಹ ಬೆಂಗಳೂರನ್ನು ಗುರುತಿಸಿ‌ದ ಕೆಂಪೇಗೌಡರು ಮಹಾನಗರದ ಸೃಷ್ಟಿಕರ್ತರಾಗಿದ್ದಾರೆ. ಇಂದು ರಾಜ್ಯದ ರಾಜಧಾನಿಯಾಗಿ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಶತಮಾನಗಳ ಹಿಂದೆಯೇ ಮಹಾನಗರವಾಗಿ ಹೊರಹೊಮ್ಮುವ ಕುರಿತು ಹಾಗೂ ಹವಾಮಾನ, ಭೌಗೋಳಿಕ ಅನುಕೂಲದ ಬಗ್ಗೆ ಜ್ಞಾನ ಹೊಂದಿದ್ದ ಕೆಂಪೇಗೌಡರ ದೂರದೃಷ್ಟಿಯ ಆಡಳಿತ ಮೆಚ್ಚುವಂತದ್ದು’ ಎಂದು ಸ್ಮರಿಸಿದರು.

’ಕಳೆದ ಬಾರಿ ರಾಜ್ಯಮಟ್ಟದಲ್ಲಿ ಕೆಂಪೇಗೌಡ ಜಯಂತಿಯನ್ನು ಹಾಸನದಲ್ಲಿ ಆಚರಣೆ ಮಾಡಲಾಗಿತ್ತು. ಈ ಬಾರಿಯೂ ಸಹ ಯಾವುದೇ ಕುಂದು ಕೊರತೆ ಉಂಟಾಗದಂತೆ ಜಿಲ್ಲಾಡಳಿತದಿಂದ ಕೆಂಪೇಗೌಡ ಜಯಂತಿಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದ್ದು, ಒಂದು ಸಮುದಾಯಕ್ಕೆ ಸೀಮಿತವಾಗದೆ ಉತ್ತಮ ಆಡಳಿತ ನೀಡಿದ ಕೆಂಪೇಗೌಡರ ಸ್ಮರಿಸುವುದು ಹೆಮ್ಮೆಯ ವಿಚಾರವಾಗಿದೆ’ ಎಂದು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಗುರುರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಅಧಿಕಾರ ತಮ್ಮದೇ ಎಂದುಕೊಳ್ಳುತ್ತಾರೆ. ಆದರೆ ಪ್ರಜೆಗಳಿಗಾಗಿ, ಅವರ ಕಲ್ಯಾಣಕ್ಕಾಗಿಯೇ ನಾನಾ ಅಭಿವೃದ್ಧಿ ಕೆಲಸ ಮಾಡಿದ, ಸಾಲು ಸಾಲು ಕೆರೆಕಟ್ಟೆ ಕಟ್ಟುವ ಮೂಲಕ ಜನಾನುರಾಗಿ ಆಗಿ ಆಡಳಿತ ನೀಡಿದ ಕೆಂಪೇಗೌಡರು ಇಂದಿಗೂ ಮಾದರಿಯಾಗಿದ್ದಾರೆ’ ಎಂದರು.

ಬೆಂಗಳೂರು, ಕುಣಿಗಲ್, ಹೊಸೂರು ಸೇರಿದಂತೆ ಸುತ್ತಮುತ್ತಲು 1500ಕ್ಕೂ ಹೆಚ್ಚು ಕೆರೆಕಟ್ಟೆ, ಬಾವಿ, ರಸ್ತೆಯ ಎರಡು ಬದಿಯು ಸಾಲುಮರಗಳನ್ನು ನೆಟ್ಟು ಮಾದರಿ ಮಹಾನಗರ ಸೃಷ್ಟಿಗೆ ಕೆಂಪೇಗೌಡರು ಕಾರಣರಾದರು. ಶತಮಾನಗಳ ಹಿಂದಯೇ ಬೆಂಗಳೂರಿನ ಸುರಕ್ಷತೆಗೆ 12 ಕಡೆ ಕಾವಲು ಗೋಪುರ, ಕೋಟೆ ಕೊತ್ತಲು ಅಭಿವೃದ್ಧಿಪಡಿಸಿ ಜನಮನ್ನಣೆ ಗಳಿಸಿದ್ದರು ಎಂದರು.

ವಿಜಯನಗರ ಸಾಮ್ರಾಜ್ಯದಲ್ಲಿ ಸಾಮಂತರಾಗಿದ್ದ ಕೆಂಪೇಗೌಡರಿಗೆ ‘ಅಮರ ನಾಯಕ’ ಎಂದು ಬಿರುದು ನೀಡಲಾಗಿತ್ತು. ಅಂದು ಬೆಂಗಾವಲು ಪಡೆಯನ್ನೇ ಇಲ್ಲಿ ಕಟ್ಟಲಾಗಿತ್ತು ಆದ್ದರಿಂದ ’ಬೆಂಗಾವಲೂರು’ ಎಂದು ಕರೆಯಲಾಗುತ್ತಿತ್ತು ಅದೇ ಇಂದು ಬೆಂಗಳೂರಾಗಿ ಬದಲಾಗಿದೆ’ ಎಂದರು ವಿವರಿಸಿದರು.

ಇಂದಿನ ಕೆಲ ಜನಪ್ರತಿನಿಧಿಗಳು ಕೆರೆಕಟ್ಟೆಯನ್ನು ಕಬಳಿಸುತ್ತಿರುವ ಕಾಲದಲ್ಲಿ ಸಾವಿರಾರು ಕೆರೆಕಟ್ಟೆಗಳನ್ನು ಕಟ್ಟಿ ಜನರ ರಕ್ಷಣೆಗೆ ನೀಡಿದ ಕೆಂಪೇಗೌಡರು ಇಂದಿಗೂ ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಸ್ಮರಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಆದಿಚುಂಚನಗಿರಿ ಕಲ್ಯಾಣ ಮಂಟಪದಿಂದ ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ವಿಶೇಷವಾಗಿ ಅಲಂಕೃತ ರಥದಲ್ಲಿ ಕೆಂಪೇಗೌಡರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಣ್ಯರಿಂದ ಚಾಲನೆ ನೀಡಲಾಯಿತು, ನಂತರ ಎನ್.ಆರ್ ವೃತ್ತದ ಮಾರ್ಗವಾಗಿ ಮಹಾವೀರ ವೃತ್ತದ ಕಡೆ ಸಾಗಿ ಹಾಸನಾಂಬ ಕಲಾ ಕ್ಷೇತ್ರದ ಆವರಣದಲ್ಲಿ ಕೊನೆಗೊಂಡಿತು.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ, ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ರಘು ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್ .ಪಿ ತಾರಾನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಘಟಕದ ಅಧ್ಯಕ್ಷ ಡಾ.ಮಲ್ಲೇಶಗೌಡ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ. ಮದನಗೌಡ  ಹಾಜರಿದ್ದರು.

Cut-off box - ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಜಿ.ಎಲ್ ಮುದ್ದೇಗೌಡ (ಸಮಾಜ ಸೇವೆ) ಜೆ .ಬಿ ತಮ್ಮಣ್ಣ ಗೌಡ (ಶೈಕ್ಷಣಿಕ ) ಡಾ.ಭಾರತಿ ರಾಜಶೇಖರ್ (ವೈದ್ಯಕೀಯ) ಚೌಡವಳ್ಳಿ ಪುಟ್ಟರಾಜು (ಸಾಹಿತ್ಯ) ಪಬ್ಲಿಕ್ ಟಿವಿ ಕ್ಯಾಮೆರಾ ಮ್ಯಾನ್ ನಾಗರಾಜ್ (ಮಾಧ್ಯಮ) ಡಾ. ಪುಣ್ಯಾ (ವೈದ್ಯಕೀಯ) ರಾಧಾ (ಶಿಕ್ಷಣ ಕ್ಷೇತ್ರ) ಪೌರಕಾರ್ಮಿಕರಾದ ನೀಲಕಂಠ ಆಲೂರಿನ ಕದಾಳು ಗ್ರಾಮದ ಪ್ರಗತಿಪರ ಕೃಷಿಕರಾದ ಭಾಸ್ಕರ್ ಗೌಡ ಅವರ ಪರವಾಗಿ ತಂದೆ ಹಲಗೆ ಗೌಡ (ನಿವೃತ್ತ ಶಿಕ್ಷಕ) ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT