ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಸಾರಿದ ವಿಶ್ವ ಮಾನವತೆ ಬೆಳೆಸಿಕೊಳ್ಳಿ: ಜಿಲ್ಲಾಧಿಕಾರಿ ಸಿ.ಸತ್ಯಭಾಮ

Published 29 ಡಿಸೆಂಬರ್ 2023, 13:38 IST
Last Updated 29 ಡಿಸೆಂಬರ್ 2023, 13:38 IST
ಅಕ್ಷರ ಗಾತ್ರ

ಹಾಸನ: ಕನ್ನಡಿಗರ ಹೆಮ್ಮೆಯ ಕವಿ ಕುವೆಂಪು ಅವರು ಕನ್ನಡದ ಆಸ್ತಿ. ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರೂ ವಿಶ್ವ ಮಾನವತೆ ಬೆಳೆಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ‌ಕುವೆಂಪು ಇಲ್ಲದೆ ಕನ್ನಡವಿಲ್ಲ. ಕನ್ನಡ ಭಾಷೆ ಮೇಲೆ ಅವರಿಗೆ ಹಿಡಿತವಿತ್ತು. ಸಮಗ್ರವಾದ ನಾಡಗೀತೆಯಲ್ಲಿ ಕನ್ನಡ ನಾಡಿನ ವರ್ಣನೆ ಅಜರಾಮರವಾಗಿದೆ. ಇದಕ್ಕೆ ಸಮಾನವಾದ ಯಾವುದೇ ಸಾಹಿತ್ಯವಿಲ್ಲ ಎಂದು ತಿಳಿಸಿದರು.

ಕುವೆಂಪು ಅವರು ಅದ್ಬುತವಾದ ಪದಪುಂಜಗಳನ್ನು ಕಟ್ಟಿಕೊಟ್ಟಿದ್ದಾರೆ. ಎಲ್ಲ ಸಾಹಿತ್ಯದಲ್ಲೂ ತಮ್ಮ ಛಾಪು ಮೂಡಿಸಿರುವ ಅವರ ಕವನ ಸಂಕಲನ, ಕಾದಂಬರಿಗಳನ್ನು ಓದಿದರೆ ಪ್ರೇರಣೆ ಸಿಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ಜನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರು, ತಮ್ಮ ಸಾಹಿತ್ಯ ರಚನೆಯಿಂದ ವಿಶ್ವ ಮಟ್ಟದಲ್ಲಿ ಕನ್ನಡವನ್ನು ಗುರುತಿಸುವಂತೆ ಮಾಡಿದರು. ಇವರು ಕೇವಲ ಸಾಹಿತಿಯಲ್ಲ, ಸಾಮಾಜಿಕ, ಆರ್ಥಿಕ, ರಾಜಕೀಯ ಚಿಂತಕರಾಗಿದ್ದರು ಎಂದು ತಿಳಿಸಿದರು.

ಕುವೆಂಪು ಅವರಲ್ಲಿ ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಅರವಿಂದರ ಆದರ್ಶಗಳನ್ನು ಕಾಣುತ್ತೇವೆ. ಕೆಳವರ್ಗದವರ ನೋವು, ಸಂಕಟಗಳನ್ನು ತಮ್ಮ ಸಾಹಿತ್ಯದ ಮೂಲಕ ಅನಾವರಣ ಮಾಡಿದ್ದಾರೆ. ಸಮ ಸಮಾಜ ನಿರ್ಮಾಣದ ಚಿಂತನೆ ನಡೆಸುತ್ತಿದ್ದರು. ಸಮಾಜದಲ್ಲಿರುವ ಅಸಮಾನತೆಯನ್ನು ಎಚ್ಚರಿಸುತ್ತಿದ್ದರು ಎಂದು ತಿಳಿಸಿದರು.

ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕವಿ ಕುವೆಂಪು ಅವರು, ವೈಚಾರಿಕ ಮತ್ತು ವೈಜ್ಞಾನಿಕ ಚಿಂತಕರು. ಯಾವುದನ್ನು ನೇರವಾಗಿ ನಿರಾಕರಿಸಬಾರದು ಎಂಬ ತತ್ವ ಹೊಂದಿದ್ದರು. ಮೌಢ್ಯ, ಕಂದಾಚಾರಗಳನ್ನು ವಿರೋಧಿಸುತ್ತಿದ್ದರು. ಸಾಮಾನ್ಯ ವ್ಯಕ್ತಿ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ ಎಸ್.ಎಸ್., ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಪಿ.ತಾರಾನಾಥ್ ಉಪಸ್ಥಿತರಿದ್ದರು. ಯದೀಶ್ ನಿರೂಪಿಸಿ, ವಂದಿಸಿದರು.

ಕುವೆಂಪು ಅವರು ಬರೆದಂತೆ ಬದುಕಿದವರು. ಮಂತ್ರ ಮಂಗಲ್ಯದ ಮೂಲಕ ಸರಳವಾಗಿ ತಮ್ಮ ಮಕ್ಕಳ ಮದುವೆಯನ್ನು ಮಾಡಿಸಿದ್ದಾರೆ.
ಡಾ.ಹಂಪನಹಳ್ಳಿ ತಿಮ್ಮೇಗೌಡ ಜನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT