ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಲೂರು | ಸ್ವಚ್ಛತೆ ಮರೀಚಿಕೆ: ಹೆಚ್ಚಿದ ಡೆಂಗಿ

ಆಲೂರು ತಾಲ್ಲೂಕಿನಲ್ಲಿ 24 ಪ್ರಕರಣ ಪತ್ತೆ: ಎಲ್ಲರೂ ಗುಣಮುಖ
Published 6 ಜುಲೈ 2024, 7:08 IST
Last Updated 6 ಜುಲೈ 2024, 7:08 IST
ಅಕ್ಷರ ಗಾತ್ರ

ಆಲೂರು: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ತುಂತುರು ಮಳೆ ಸುರಿಯುತ್ತಿದ್ದು, ಎಲ್ಲೆಡೆಯೂ ಕೆಸರು ನೀರು ಕಾಣುತ್ತಿದೆ. ಇದರ ಬೆನ್ನಲ್ಲೇ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗುತ್ತಿದ್ದು, ಡೆಂಗಿ ಆತಂಕ ಜನರನ್ನುಕಾಡುತ್ತಿದೆ.

10 ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆಯಿಂದ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣಗಳು ಹೆಚ್ಚಾಗುತ್ತಿವೆ. ತುಂತುರು ಮಳೆ ಆಗುತ್ತಿರುವದರಿಂದ ಚರಂಡಿ, ಹೋಟೆಲ್‌, ಪಂಕ್ಚರ್ ಅಂಗಡಿ, ಸಂತೆ ಮೈದಾನ, ಗೂಡಂಗಡಿಗಳ ಸಮೀಪ, ಗುಜರಿ ಸಂಗ್ರಹ ಸ್ಥಳ ಸೇರಿದಂತೆ ಅಲ್ಲಲ್ಲಿ ನೀರು ಶೇಖರಣೆಯಾಗಿ ಲಾರ್ವಾಗಳಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ.

ತಾಲ್ಲೂಕು ಅರೆ ಮಲೆನಾಡು ಪ್ರದೇಶ ಆಗಿರುವುದರಿಂದ ಜಡಿ ಮಳೆಯಾಗುವುದು ಅಪರೂಪ. ಜಡಿ ಮಳೆಯಾಗಿದ್ದರೆ, ರಭಸವಾಗಿ ನೀರು ಹರಿದಾಗ ಕೊಳಚೆ ನಿರ್ಮಾಣ ಆಗುತ್ತಿರಲಿಲ್ಲ. ಬಿಸಿಲು ವಾತಾವರಣ ಇಲ್ಲದಿರುವುದು ಸಹ ಅಧಿಕ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.

ಒಂದು ವಾರದಿಂದ ತುಂತುರು ಮಳೆ ಆಗುತ್ತಿರುವುದರಿಂದ ಜಿಲ್ಲಾ ಆರೋಗ್ಯ ಪರಿವೀಕ್ಷಣಾ ತಂಡ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹೋಟೆಲ್, ಪಂಕ್ಚರ್ ಅಂಗಡಿ, ಗುಜರಿ ಅಂಗಡಿಗಳಿಗೆ ಭೇಟಿ ಮಾಡಿದ ಸಂದರ್ಭದಲ್ಲಿ, ನೀರು ನಿಂತಿರುವ ಸ್ಥಳಗಳನ್ನು ಮಾಲೀಕರಿಗೆ ತೋರಿಸಿ, ಇಂತಹ ಪ್ರಕರಣಗಳನ್ನು ತಡೆಯುವಂತೆ ಸೂಚನೆ ನೀಡಿದರು. ಇದೇ ರೀತಿ ಮುಂದುವರಿದರೆ ಡೆಂಗಿ ಪ್ರಕರಣ ಅತಿಯಾಗಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಕೆ ನೀಡಿದರು.

‘ತಾಲ್ಲೂಕು ಆಸ್ಪತ್ರೆಯಲ್ಲಿ ಡೆಂಗ್ಯೂ ಜ್ವರಕ್ಕೆ ತುತ್ತಾದವರ ಆರೈಕೆಗೆ ವಿಶೇಷವಾಗಿ 5 ಹಾಸಿಗೆಗಳುಳ್ಳ ವಾರ್ಡ್‌ ಮೀಸಲಿಡಲಾಗಿದೆ. ಅಗತ್ಯ ಔಷಧಿ, ರಕ್ತ ಪರೀಕ್ಷೆ ಮತ್ತು ಅಗತ್ಯ ರಕ್ತ ಸಂಗ್ರಹಣೆ ಸಹ ಮೀಸಲಿದೆ. ಮಕ್ಕಳು ಮತ್ತು 60 ವರ್ಷ ದಾಟಿದವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮಾ ತಿಳಿಸಿದ್ದಾರೆ.

‘ಚಳಿ, ಜ್ವರ, ತಲೆನೋವು, ಮೈಕೈ ನೋವು, ಕಣ್ಣಿನ ಹಿಂಭಾಗದಲ್ಲಿ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ನಾಲ್ಕು ದಿನ ಕಳೆದರೆ ಪ್ಲೇಟ್‍ಲೆಟ್ ಕಡಿಮೆಯಾಗಿ, ಮೈ ಮೇಲೆ ರಕ್ತದ ಕಲೆಗಳು ಕಾಣಿಸುತ್ತವೆ. ಇದು ಗುಣಪಡಿಸುವಂತಹ ರೋಗವಾಗಿದ್ದು, ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಗುಣವಾಗುತ್ತದೆ’ ಎಂದು ಅವರು ಸಲಹೆ ನೀಡಿದ್ದಾರೆ.

ಆಲೂರು ಪಟ್ಟಣದಲ್ಲಿ 5 ಸೇರಿದಂತೆ ಈವರೆಗೆ ತಾಲ್ಲೂಕಿನಲ್ಲಿ 24 ಪ್ರಕರಣ ವರದಿಯಾಗಿವೆ. ಒಬ್ಬರು ಮಾತ್ರ ಹಾಸನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಗುಣಮುಖರಾಗುತ್ತಿದ್ದಾರೆ.
ಡಾ. ನಿಸಾರ್ ಫಾತಿಮಾ ತಾಲ್ಲೂಕು ಆರೋಗ್ಯಾಧಿಕಾರಿ
ಆರೋಗ್ಯ ಇಲಾಖೆ ಸಲಹೆ ಪಾಲಿಸಬೇಕು. ಅಂಗಡಿ ಹೋಟೆಲ್ ಚರಂಡಿಯಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಡೆಂಗಿ ನಿವಾರಣೆಗೆ ಇಲಾಖೆಯೊಂದಿಗೆ ಕೈಜೋಡಿಸಬೇಕು.
ಮಂಜುಳಾ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ

ಆಶಾಗಳ ಅಸಮಾಧಾನ ನಿತ್ಯ ಎಲ್ಲೆಡೆ ತೆರಳಿ ಸೂಚನೆಗಳನ್ನು ನೀಡಲಾಗುತ್ತಿದೆ. ಆದರೆ ಕೆಲವರು ಸಲಹೆಗಳನ್ನು ಸ್ವೀಕರಿಸದೇ ಎಂದಿನಂತೆ ಇರುತ್ತಾರೆ ಎಂದು ಆಶಾ ಕಾರ್ಯಕರ್ತೆಯರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಅಂಗಡಿ ಹೋಟೆಲ್ ಗುಜರಿ ಅಂಗಡಿಗಳ ಬಳಿ ತೆರಳಿ ನೀರು ನಿಲ್ಲದಂತೆ ಶುಚಿಯಾಗಿ ಇಟ್ಟುಕೊಳ್ಳಬೇಕು. ಶೇಖರಿಸಿಟ್ಟಿದ್ದ ನೀರನ್ನು ಎರಡು ದಿನಗಳಿಗೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ಶೇಖರಣೆ ಮಾಡಿಕೊಳ್ಳಬೇಕು. ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗಿ ಜ್ವರದಿಂದ ಬಳಲುತ್ತೀರಿ ಜಾಗೃತರಾಗಿರಿ ಎಂದು ಸಲಹೆ ಸೂಚನೆ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT