ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ನಿರ್ವಹಣೆ ಕೊರತೆಯಿಂದ ನಲುಗಿದ ಉದ್ಯಾನಗಳು

ನೀರಿಲ್ಲದೆ ಬಾಡುತ್ತಿರುವ ಗಿಡಗಳು; ಪಾರ್ಕ್‌ಗಳಲ್ಲಿ ತುಕ್ಕು ಹಿಡಿದ ಮಕ್ಕಳ ಆಟಿಕೆಗಳು
Last Updated 21 ಮಾರ್ಚ್ 2022, 4:03 IST
ಅಕ್ಷರ ಗಾತ್ರ

ಹಾಸನ: ಅನುದಾನ, ನೀರು, ಸಿಬ್ಬಂದಿ, ಸಂಪನ್ಮೂಲ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಇಲ್ಲದೆ ಉದ್ಯಾನಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ.ನೀರಿಲ್ಲದೆ ಗಿಡ, ಮರಗಳು ಒಣಗುತ್ತಿವೆ. ಇನ್ನು ಸಣ್ಣಪುಟ್ಟ ಉದ್ಯಾನಗಳ ಸ್ಥಿತಿ ತೀರಾ ಅವ್ಯವಸ್ಥೆಯಿಂದ ಕೂಡಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನೂರಾರು ಉದ್ಯಾನಗಳನ್ನು ನಿರ್ಮಿಸ ಲಾಗಿದೆ. ಆದರೆ, ಕೆಲವು ಉದ್ಯಾನಗಳ ಸ್ಥಿತಿ ಅಯೋಮಯ ಎನ್ನುವಂತಿದೆ. ವಾಯುವಿಹಾರ, ವ್ಯಾಯಾಮ, ವಿಶ್ರಾಂತಿ ಹಾಗೂ ಮಕ್ಕಳ ಆಟಕ್ಕೆ ಅಗತ್ಯವಾಗಿರುವ ಉದ್ಯಾನಗಳ ನಿರ್ವಹಣೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ.

ಉದ್ಯಾನಗಳ ಸುತ್ತಲೂ ಪೊದೆಗಳು ಬೆಳೆದಿದ್ದು, ಆಗಾಗ ಹಾವು, ಹೆಗ್ಗಣಗಳು ಕಾಣಿಸಿಕೊಳ್ಳುತ್ತಿವೆ. ಕೆಲವೆಡೆ ಉದ್ಯಾನದಲ್ಲಿ ಒಣಗಿದ ಹುಲ್ಲಿಗೆ ಬೆಂಕಿ ಹಚ್ಚಿರುವ ಉದಾಹರಣೆ ಇದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಬಹುತೇಕ ಉದ್ಯಾನಗಳು ಸೊರಗಲಾರಂಭಿಸಿವೆ.

ಸಮರ್ಪಕ ನಿರ್ವಹಣೆ ಇಲ್ಲದೆ ಕೆಲ ಉದ್ಯಾನಗಳು ಪಾಳು ಬಿದ್ದಿವೆ. ಮಕ್ಕಳಆಟಿಕೆಗಳು ತುಕ್ಕು ಹಿಡಿದಿವೆ. ಮಾಸಿದ ನಾಮಫಲಕ, ಎಲ್ಲೆಂದರಲ್ಲಿ ಬೆಳೆದ ಕಸ,ನೀರಿಲ್ಲದೆ ಒಣಗಿ ನೆಲಕ್ಕೊರಗಿದ ಗಿಡಗಳನ್ನು ನೋಡಬಹುದು. ಆಲಂಕಾರಿಕ
ಗಿಡಗಳನ್ನು ಸರಿಯಾಗಿ ಬೆಳೆಸಿಲ್ಲ.

ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಎರಡು ಲಕ್ಷ ಜನಸಂಖ್ಯೆ ಇದೆ. 35 ವಾರ್ಡ್‌ಗಳಿವೆ. ನಗರಸಭೆ ವ್ಯಾಪ್ತಿಗೆ 21 ಉದ್ಯಾನಗಳ ಪೈಕಿ 18 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲ ಉದ್ಯಾನಗಳು ಆಕರ್ಷಿಸುತ್ತಿದೆ. ತೆರೆದ ಜಿಮ್, ಯೋಗ, ಮಕ್ಕಳ ಆಟಕ್ಕೆ ಸೌಲಭ್ಯ ಅಳವಡಿಸಲಾಗಿದೆ.

ನಗರದ ಹೃದಯಭಾಗದಲ್ಲಿರುವ ಮಹಾರಾಜ ಉದ್ಯಾನವನ್ನು ₹11ಕೋಟಿ ವೆಚ್ಚದಲ್ಲಿ ಮಾದರಿ ಪಾರ್ಕ್ ಆಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜನರು, ಸಂಘ ಸಂಸ್ಥೆಗಳು, ನಗರಸಭೆ ಮತ್ತು ಹುಡಾ ವ್ಯಾಪ್ತಿಯ ಕೆಲಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಇದಲ್ಲದೆ, ಕೆಲ ಉದ್ಯಾನಗಳನ್ನು ಸ್ವಯಂಸೇವಾ ಸಂಸ್ಥೆ ಹಾಗೂ ಖಾಸಗಿಸಂಸ್ಥೆಗಳು ದತ್ತು ಪಡೆದು ಅಭಿವೃದ್ಧಿ ಪಡಿಸಿವೆ.

‘ನಗರಸಭೆ ವ್ಯಾಪ್ತಿಯಲ್ಲಿ 18 ಉದ್ಯಾನಗಳು ಅಭಿವೃದ್ಧಿಯಾಗಿವೆ. ಇವುಗಳ ನಿರ್ವಹಣೆ ಅನುದಾನ ಮೀಸಲಿಡಲಾಗಿದೆ. ಕೊಳವೆಬಾವಿ ಮತ್ತು ಟ್ಯಾಂಕರ್‌ಗಳ ಮೂಲಕ ನೀರುಣಿಸ ಲಾಗುತ್ತಿದೆ’ ಎಂದು ನಗರಸಭೆ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದರು.

ನಗರಕ್ಕೆ ಹೊಂದಿಕೊಂಡಿರುವ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಬೀರನಹಳ್ಳಿಕೆರೆ ಸರ್ಕಾರಿ ಶಾಲೆ ಪಕ್ಕದ ಉದ್ಯಾನ ಸಂಪೂರ್ಣ ಪಾಳುಬಿದ್ದಿದ್ದು,ಅಕ್ರಮ ಚಟುವಟಿಕೆಗಳ ತಾಣವಾಗಿದೆ. ತಂತಿ ಬೇಲಿ ಅಲ್ಲಲ್ಲಿ ಕಿತ್ತು ಹಾಕಲಾಗಿದೆ. ಪ್ರವೇಶ ದ್ವಾರ ಗೇಟ್‌ ಮುರಿದಿದ್ದು, ಸ್ಥಳೀಯರು ದನಗಳನ್ನು ಉದ್ಯಾನದ ಒಳಗೆ ಕಟ್ಟಿ ಮೇಯಿಸುತ್ತಿದ್ದಾರೆ.

‘ರಾತ್ರಿ ವೇಳೆ ಉದ್ಯಾನದಲ್ಲಿ ಕಿಡಿಗೇಡಿಗಳು ಮದ್ಯ ಸೇವನೆ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿ ದ್ದಾರೆ’ ಎಂಬುದು ನಿವಾಸಿಗಳ ಆರೋಪ.

ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಆರ್‌.ಜಿ.ಗಿರೀಶ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶ್ರಮದಾನದಮೂಲಕ ಉದ್ಯಾನದಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆರವು ಮಾಡಿದ್ದಾರೆ. ಜತೆಗೆವಿವಿಧ ಜಾತಿಯ ಗಿಡಗಳನ್ನು ನೆಟ್ಟಿದ್ದಾರೆ.

ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಮೂರು ಉದ್ಯಾನಗಳಿವೆ. ಹೌಸಿಂಗ್ ಬೋರ್ಡ್ ಬಡಾವಣೆ ಪಾರ್ಕ್ ವಾಯುವಿಹಾರಕ್ಕೆ ನಡಿಗೆ ನಿರ್ಮಿಸಲಾಗಿದೆ. ತೆಂಗು, ಹಲಸು, ಬಾಳೆ, ಇನ್ನಿತರೆ ಗಿಡಗಳಿವೆ. ಆದರೆ,
ಸಮರ್ಪಕ ನಿರ್ವಹಣೆ ಇಲ್ಲ. ಬಡಾವಣೆ ನಿವಾಸಿ ನಾಗರಾಜು ಎಂಬುವರು ಗಿಡಗಳಿಗೆ ನೀರು ಹರಿಸುತ್ತಾರೆ.

ವಿವೇಕಾನಂದ ಉದ್ಯಾನಅಭಿವೃದ್ಧಿ ಪಡಿಸಲಾಗಿದೆ. ಆದರೆ, ರಾತ್ರಿ ವೇಳೆಪುಂಡರ ಹಾವಳಿ ಇದೆ. ರಾಮೇಶ್ವರ ಬಡಾವಣೆ ಉದ್ಯಾನದ ಅಭಿವೃದ್ಧಿಗೂ ಒತ್ತುನೀಡಬೇಕಿದೆ.

ಮಲೆನಾಡಿನ ಪ್ರವಾಸಿ ತಾಣಗಳ ಕೇಂದ್ರ ಸ್ಥಾನವಾಗಿರುವಸಕಲೇಶಪುರ ಪಟ್ಟಣದಲ್ಲಿ ಏಕೈಕ ಉದ್ಯಾನವನ್ನು ಪುರಸಭೆ ನಿರ್ವಹಣೆಮಾಡದೆ ಪಾಳು ಬಿದ್ದಿದೆ. ನಡಿಗೆ ಪಥದ ಇಂಟರ್‌ ಲಾಕ್‌ ಮುಚ್ಚಿ ಹೋಗುವಷ್ಟು ಹಲ್ಲು
ಬೆಳೆದು, ಹಾವು, ಹಲ್ಲಿಗಳ ವಾಸಸ್ಥಾನ ವಾಗಿದೆ. ಮಲ್ಲಿಕಾರ್ಜುನ ಬಡಾವಣೆ ನಿವಾಸಿಗಳು ಈ ಉದ್ಯಾನದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಾರೆ.

ಆಲೂರು ಪಟ್ಟಣ ವ್ಯಾಪ್ತಿಯಲ್ಲಿ ಹಳೆ ಕೋರ್ಟ್ ಸರ್ಕಲ್, ಹೌಸಿಂಗ್ಬೋರ್ಡ್‌ನಲ್ಲಿ ಉದ್ಯಾನ ಇದೆ. ಹಳೆ ಕೋರ್ಟ್ ಉದ್ಯಾನದಲ್ಲಿ ಸೊಳ್ಳೆಗಳ ಕಾಟ.ಕುಡಿಯುವ ನೀರು, ಆಸನ ವ್ಯವಸ್ಥೆ ಇದೆ.

ಬೇಲೂರಿನ ಪುರಸಭಾ ವ್ಯಾಪ್ತಿಯಲ್ಲಿ ಐದು ಉದ್ಯಾನಗಳಿದ್ದು, ಅಧ್ವಾನಗೊಂಡಿವೆ. ಮಕ್ಕಳ ಆಟಿಕೆಗಳು ತುಕ್ಕು ಹಿಡಿದಿವೆ.

‘ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಉದ್ಯಾನ ನಿರ್ವಹಣೆಗೆ ಸಿಬ್ಬಂದಿ ನೇಮಿಸಿಲ್ಲ. ಆಯಾ ವಾರ್ಡ್ ನೀರುಗಂಟಿಗಳು ನೀರುಣಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಪುರಸಭಾ ಮುಖ್ಯಾಧಿಕಾರಿ ಸುಜಯ್ ಕುಮಾರ್
ತಿಳಿಸಿದರು.

ಮಾದರಿ ಉದ್ಯಾನ ನಿರ್ಮಾಣ

ಹಿರಿಯ ನಾಗರಿಕರ ಸಹಕಾರದೊಂದಿಗೆ ಹಾಸನ ತಾಲ್ಲೂಕಿನ ಚಿಕ್ಕಹೊನ್ನೆನ ಹಳ್ಳಿಯ ವಿಜಯ ಶಾಲೆಯ ಆಡಳಿತ ಮಂಡಳಿ ನಗರದ ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಉದ್ಯಾನವನ್ನು ಸ್ವಚ್ಛಗೊಳಿಸಿ, ಮೂಲ ಸೌಲಭ್ಯ ಕಲ್ಪಿಸಿದೆ. ಶಿಕ್ಷಣ ಸಂಸ್ಥೆಯು ₹4 ಲಕ್ಷ ಹಾಗೂ ಹಿರಿಯ ನಾಗರಿಕರು ₹70 ಸಾವಿರ ದೇಣಿಗೆ ನೀಡಿದ ಪರಿಣಾಮ ಪಾರ್ಕ್‌ ಅಭಿವೃದ್ಧಿಗೊಂಡು ಎಲ್ಲರ ಗಮನ ಸೆಳೆದಿದೆ.

‘ಪಾರ್ಕ್‌ನಲ್ಲಿ ಹಣ್ಣು ಹಾಗೂ ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ನಡಿಗೆ ಪಥ, ಗೇಟ್‌ ಹಾಗೂ ಮಕ್ಕಳ ಆಟೋಟ ಉಪಕರಣಗಳನ್ನು ಅಳವಡಿಸಲಾಗಿದೆ. ನಿರ್ವಹಣೆಗೆ ಶಾಲೆ ಸಿಬ್ಬಂದಿಯನ್ನೇ ನಿಯೋಜಿಸಲಾಗಿದ್ದು, ಇಂಗು ಗುಂಡಿ ನಿರ್ಮಾಣದಿಂದ ನೀರಿನ ಕೊರತೆ ನೀಗಿದೆ’ ಎಂದು ವಿಜಯ ಶಾಲೆಯ ತಾರಾ ಸುಬ್ಬಸ್ವಾಮಿ ತಿಳಿಸಿದರು.
ಸಂಘ ಸಂಸ್ಥೆಗಳಿಗೆ ದತ್ತು

ನಗರ ಸೇರಿದಂತೆ ಸುತ್ತಮುತ್ತಲಿನ 6 ಉದ್ಯಾನ ಅಭಿವೃದ್ಧಿಪಡಿಸಿ, ಅವುಗಳ ನಿರ್ವಹಣೆಯನ್ನು ಸಂಘ ಸಂಸ್ಥೆಗಳಿಗೆ ವಹಿಸುವ ಕುರಿತು ಚಿಂತನೆ ನಡೆಸಲಾಗಿದೆ. ಅಭಿವೃದ್ಧಿ ಪಡಿಸಿದ ಬಳಿಕ ಅವುಗಳ ನಿರ್ವಹಣೆಗಾಗಿ ರೆಡ್‌ಕ್ರಾಸ್ ಸಂಸ್ಥೆ, ಹಸಿರು ಭೂಮಿ ಪ್ರತಿಷ್ಠಾನ, ರೋಟರಿ
ಕ್ಲಬ್ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಗೆ ದತ್ತು ನೀಡಲಾಗುವುದು ಎಂದು ಶಾಸಕ ಪ್ರೀತಂ ಜೆ.ಗೌಡ ತಿಳಿಸಿದರು.

ಜನ, ಅಧಿಕಾರಿಗಳು ಏನಂತಾರೆ?

ಸ್ಥಳೀಯರ ಸಹಕಾರ ಅಗತ್ಯ

ಸ್ಥಳೀಯ ಸಂಸ್ಥೆಗಳ ಅನುದಾನಕ್ಕೆ ಕಾಯದೆ ಸ್ಥಳೀಯರೇ ಉದ್ಯಾನ ಅಭಿವೃದ್ಧಿಗೆ ಶ್ರಮಿಸಬೇಕು. ಸಾರ್ವಜನಿಕರ ಸಹಕಾರದೊಂದಿಗೆ ಸ್ವಾತಂತ್ರ್ಯ ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ. ಉದ್ಯಾನಗಳಲ್ಲಿ ಕಡಿಮೆ ಪ್ರಮಾಣದ ಕಾಂಕ್ರೀಟೀಕರಣ ಇರಬೇಕು. ಒತ್ತುವರಿ ತೆರವು ಮಾಡಬೇಕು.

–ಕಿಶೋರ್ ಕುಮಾರ್, ಪರಿಸರವಾದಿ, ಹಾಸನ

ಒತ್ತುವರಿ ತೆರವಿಗೆ ಕ್ರಮ

ತಾಲ್ಲೂಕು ಕೇಂದ್ರದಲ್ಲಿ ಸರಿಯಾದ ಉದ್ಯಾನಗಳಿಲ್ಲ. ಹೊಸ ಬಡಾವಣೆಗಳಲ್ಲಿ ಮೀಸಲಿಟ್ಟಿರುವ ಜಾಗದಲ್ಲಿ ಉದ್ಯಾನ ನಿರ್ಮಿಸಲಾಗುವುದು. ಒತ್ತುವರಿ ಆಗಿರುವ ಉದ್ಯಾನ, ಆಟದ ಮೈದಾನವನ್ನು ತೆರವುಗೊಳಿಸಲಾಗುವುದು.

–ಕಾಡಪ್ಪ, ಪುರಸಭಾ ಅಧ್ಯಕ್ಷ, ಸಕಲೇಶಪುರ

ಉದ್ಯಾನ ನಿರ್ವಹಣೆ ವಿಫಲ

ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟಿರುವ ಜಾಗಗಳನ್ನೆಲ್ಲಾ ಖಾಸಗಿಯವರಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿಕೊಡಲಾಗಿದೆ. ಬಡಾವಣೆ ನಿವಾಸಿಗಳೆಲ್ಲಾ ಹೋರಾಟ ಮಾಡಿ ಉಳಿಸಿಕೊಂಡಿರುವ ಈ ಒಂದು ಉದ್ಯಾನವನ್ನು ನಿರ್ವಹಣೆ ಮಾಡುವಲ್ಲಿ ಪುರಸಭೆ ವಿಫಲವಾಗಿದೆ.

–ಶಶಿಧರ್‌, ಸಹನಾ ಪ್ಲಾಂಟೇಷನ್‌, ಸಕಲೇಶಪುರ

ಉದ್ಯಾನದ ಅಂದ ಹೆಚ್ಚಿಸಲಿ

ಹೌಸಿಂಗ್ ಬೋರ್ಡ್ ಉದ್ಯಾನದ ಗಿಡಗಳಿಗೆ 4-5 ವರ್ಷಗಳಿಂದ ನೀರು ಹರಿಸುವ ಕೆಲಸ ಮಾಡುತ್ತಿದ್ದೇನೆ. ಪುರಸಭೆಯಿಂದ ಕೊಳವೆಬಾವಿ ಕೊರೆಸಲಾಗಿದೆ. ಸೂಕ್ತ ನಿರ್ವಹಣೆ ಮಾಡಿದರೆ ಅದರ ಅಂದ ಮತ್ತಷ್ಟು ಹೆಚ್ಚಾಗಲಿದೆ.

–ನಾಗರಾಜು, ಹೌಸಿಂಗ್ ಬೋರ್ಡ್ ಬಡಾವಣೆ, ಚನ್ನರಾಯಪಟ್ಟಣ

ಪಾರ್ಕ್‌ ದತ್ತು ಪಡೆಯಲಿ

ಪುರಸಭಾ ವ್ಯಾಪ್ತಿಗೆ ಬರುವ ಉದ್ಯಾನಗಳನ್ನು ಸ್ಥಳೀಯರ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲಾಗುವುದು. ಸ್ವಚ್ಛತೆಗೂ ಕ್ರಮ ಕೈಗೊಳ್ಳಲಾಗುವುದು. ಸಂಘ ಸಂಸ್ಥೆಗಳು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು.

–ಜಿ.ಆರ್.ಸುರೇಶ್, ಪುರಸಭಾಧ್ಯಕ್ಷ, ಚನ್ನರಾಯಪಟ್ಟಣ

ಪೌರಕಾರ್ಮಿಕರ ನೇಮಕ

ಹೌಸಿಂಗ್ ಬೋರ್ಡ್ ಉದ್ಯಾನ ನಿರ್ವಹಣೆ ಮಾಡಲಾಗುತ್ತಿದೆ. ಶುಚಿತ್ವ ಕಾಪಾಡಲು ಪೌರ ಕಾರ್ಮಿಕರನ್ನು ನೇಮಿಸಲಾಗಿದೆ. ಸಾರ್ವಜನಿಕರು ಕೈ ಜೋಡಿಸಬೇಕು.

–ನಟರಾಜ್, ಮುಖ್ಯಾಧಿಕಾರಿ, ಆಲೂರು ಪ.ಪಂ

ಸ್ವಚ್ಛತೆಗೆ ಆದ್ಯತೆ ನೀಡಲಿ

ಉದ್ಯಾನಗಳಿದ್ದರೆ ಸಾರ್ವಜನಿಕರಿಗೆ ಉತ್ತಮ ಹಸಿರು ವಾತಾವರಣ ಸೃಷ್ಟಿಯಾಗುತ್ತದೆ. ಅನೈತಿಕ ಚಟುವಟಿಕೆಗೆ ಅವಕಾಶವಿರಬಾರದು. ಜನಸಾಮಾನ್ಯರು ಸಹ ಶುಚಿತ್ವದ ಬಗ್ಗೆ ಗಮನ ನೀಡಬೇಕು.

–ಕೆ.ಜಿ.ನಾಗರಾಜು, ವಕೀಲ, ಆಲೂರು

****

ನಿರ್ವಹಣೆ: ಕೆ.ಎಸ್.ಸುನಿಲ್‌, ಪೂರಕ ಮಾಹಿತಿ: ಜೆ.ಎಸ್.ಮಹೇಶ್, ಸಿದ್ದರಾಜು, ಜಾನೆಕೆರೆ ಪರಮೇಶ್, ಎಂ.ಪಿ.ಹರೀಶ್, ಮಲ್ಲೇಶ್.‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT