ಶನಿವಾರ, ಸೆಪ್ಟೆಂಬರ್ 18, 2021
29 °C
ನಿಸರ್ಗ ಪ್ರಿಯರನ್ನು ಆಕರ್ಷಿಸುತ್ತಿದೆ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ

ಹಾಸನ: ನಯನ ಮನೋಹರ ಜಲಧಾರೆ

ಗಂಗೇಶ್ ಬಿ.ಪಿ. Updated:

ಅಕ್ಷರ ಗಾತ್ರ : | |

Prajavani

ಕೊಣನೂರು: ಧುಮ್ಮಿಕ್ಕಿ ಹರಿಯುತ್ತಿರುವ ಜಲಧಾರೆಯಿಂದಾಗಿ ಕೃಷ್ಣರಾಜ ಅಣೆಕಟ್ಟೆಯು ಇದೀಗ ನಿಸರ್ಗಪ್ರಿಯರ ಮೆಚ್ಚಿನ ತಾಣವಾಗಿದೆ.

ಕೊಡಗಿನ ಭಾಗದಲ್ಲಿ ಮುಂಗಾರು ಬಿರುಸಾಗಿದ್ದು ಹಾರಂಗಿ ಅಣೆಕಟ್ಟೆ ಯಿಂದ ನದಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕೊಣನೂರು ಹೋಬಳಿಯ ಕಟ್ಟೇಪುರ ಬಳಿಯ ಕೃಷ್ಣರಾಜ ಅಣೆಕಟ್ಟೆಯ ಮೇಲಿಂದ ಒಂದೇ ಸಮನೆ ನೀರು ಭೋರ್ಗರೆಯುತ್ತಾ ಹರಿಯುತ್ತಿರುವುದನ್ನು ನೋಡಲು ಜನತೆ ಅರಸಿ ಬರುತ್ತಿದ್ದಾರೆ.

ಧುಮ್ಮಿಕ್ಕುವ ನೀರು ಮುಂದೆ ಹಾಸಿರುವ ಕಲ್ಲುಗಳ ಮೇಲೆ ಭೋರ್ಗರೆಯುತ್ತಾ ಸಾಗುವುದು ನಯನ ಮನೋಹರವಾಗಿದ್ದು ಎಷ್ಟೇ ನೋಡಿದರೂ ಮತ್ತೆ ಮತ್ತೆ ನೋಡಬೇಕು ಎನಿಸುವಷ್ಟು ಸುಂದರವಾಗಿದೆ. 1 ಕಿ.ಮೀ ಉದ್ದದ ಸುಮಾರು 6 ಮೀಟರ್ ಎತ್ತರದ ಅಣೆಕಟ್ಟೆಯ 53 ಮೀಟರ್ ಕೋಡಿಯಲ್ಲಿ ಕೆಲವೆಡೆ ಶಾಂತವಾಗಿ, ಕೆಲವೆಡೆ ರಭಸವಾಗಿ ಬೀಳುವ ನೀರು ಕಟ್ಟಡಕ್ಕೆ ಅಪ್ಪಳಿಸಿ ಸಾಗುತ್ತಿದೆ.

ಕಾವೇರಿ ಕಣಿವೆಯ ಮೊದಲ ಅಣೆಕಟ್ಟಾದ ಇದನ್ನು 1750ರಲ್ಲಿ ಮೈಸೂರು ಅರಸರಾಗಿದ್ದ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ್ದರಿಂದ ಈ ಅಣೆಕಟ್ಟೆಗೆ ಕೃಷ್ಣರಾಜ ಅಣೆಕಟ್ಟೆ ಎಂಬ ಹೆಸರಿದ್ದು, ಕಟ್ಟೇಪುರ ಬಳಿ ಇರುವುದರಿಂದ ಅನ್ವರ್ಥವಾಗಿ ಕಟ್ಟೇಪುರ ಕಟ್ಟೆ ಎಂತಲೂ ಕರೆಯಲಾಗುತ್ತಿದೆ.

ಹಾಸನದಿಂದ ಅರಕಲಗೂಡು, ರಾಮನಾಥಪುರ ಮಾರ್ಗವಾಗಿ 60 ಕಿ.ಮೀ ಮತ್ತು ಮೈಸೂರಿನಿಂದ 105 ಕಿ.ಮೀ ದೂರದಲ್ಲಿರುವ ಕೃಷ್ಣರಾಜ ಅಣೆಕಟ್ಟೆಯ ಹಿನ್ನೀರಿನಲ್ಲಿರುವ 6 ಎಕರೆ ಪ್ರದೇಶದ ದ್ವೀಪವು ಹಸಿರಿನಿಂದ ಕಂಗೊಳಿಸುತ್ತಿದ್ದು ಅಣೆಕಟ್ಟೆಗೆ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.