ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಗುತ್ತಿರುವ ಸಂಕ್ರಾಂತಿ ಸಂಭ್ರಮ

Published 14 ಜನವರಿ 2024, 7:18 IST
Last Updated 14 ಜನವರಿ 2024, 7:18 IST
ಅಕ್ಷರ ಗಾತ್ರ

ಆಲೂರು: ಹೊಸ ವರ್ಷದಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿ. ಎಳ್ಳು–ಬೆಲ್ಲದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಇದೀಗ ಗ್ರಾಮೀಣ ಪ್ರದೇಶದಲ್ಲೂ ಕಡಿಮೆಯಾಗುತ್ತಿದೆ. ಆಚರಣೆಗಳು ಸೊರಗಿದ್ದು, ಸಂಕ್ರಾಂತಿ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆ.

ಸುಮಾರು ಎರಡು-ಮೂರು ದಶಕಗಳ ಹಿಂದೆ ಸಂಕ್ರಾಂತಿ ಹಬ್ಬವೆಂದರೆ ರೈತರಿಗೆ ಸುಖ ಸಮೃದ್ಧಿ ಅವಕಾಶ ಕಲ್ಪಿಸುವ ಸಂದರ್ಭವಾಗಿತ್ತು. ಎತ್ತುಗಳು, ಒಕ್ಕಲಾಟದ ಪರಿಕರಗಳನ್ನು ಸಿಂಗರಿಸಿ, ವರ್ಷವಿಡೀ ಬೆಳೆದ ಬೆಳೆಯನ್ನು ಕೊಯ್ಲು ಮಾಡಿ ಸಗಣಿಯಿಂದ ಶುಚಿಗೊಳಿಸಿದ ಕಣಗಳಲ್ಲಿ ಒಕ್ಕಲಾಟಕ್ಕಾಗಿ ಸುಸಜ್ಜಿತವಾಗಿ ಭತ್ತ, ರಾಗಿ ಗುಡ್ಡೆಗಳನ್ನು ಸುರಕ್ಷಿತವಾಗಿ ಮಾಡುತ್ತಿದ್ದರು. ಕೆಲವು ರೈತರು ಒಕ್ಕಲಾಟ ಪ್ರಾರಂಭಿಸಿ ಭತ್ತ, ರಾಗಿ ಗುಡ್ಡೆ ಮಾಡಿ ಸಿಂಗರಿಸಿ ಪೂಜಿಸುತ್ತಿದ್ದರು.

ಸಂಕ್ರಾಂತಿ ಹಬ್ಬದ ದಿನ ಸಾಮಾನ್ಯವಾಗಿ ಸಸ್ಯಾಹಾರಿಗಳು ಕಡುಬು, ಚಿಲುಕು ಅವರೆಕಾಳು ಸಾರು ಮಾಡುತ್ತಿದ್ದರು. ಶಾಖಾಹಾರಿಗಳು ಕುರಿ, ಕೋಳಿ ಮಾಂಸದ ಅಡುಗೆಗಳನ್ನು ಮಾಡಿಕೊಳ್ಳುತ್ತಿದ್ದರು. ಕಣದಲ್ಲಿರುವ ಭತ್ತ, ರಾಗಿ ಗುಡ್ಡೆಗಳು, ಒಕ್ಕಲಾಟಕ್ಕೆ ಬಳಸುವ ಕೃಷಿ ಪರಿಕರಗಳನ್ನು ಪೂಜಿಸಿ ಗುಡ್ಡೆಗಳಿಗೆ ಹತ್ತಾರು ಕಡುಬುಗಳನ್ನು ಹುಲ್ಲಿನೊಳಗೆ ಬಚ್ಚಿಡುತ್ತಿದ್ದರು.

ಗುಡ್ಡೆಯೊಳಗೆ ಭತ್ತದ ಹುಲ್ಲಿನ ಶಾಖದಲ್ಲಿದ್ದ ಕಡುಬನ್ನು ಮರುದಿನ ಆಹಾರವಾಗಿ ಬಳಸಿದರೆ ಹೊಟ್ಟೆಯಲ್ಲಿರುವ ರೋಗಗಳು ದೂರವಾಗುತ್ತವೆ. ಕಪ್ಪು ಎಳ್ಳು, ಹುಣಸೆಹಣ್ಣು, ಜೀರಿಗೆ, ಒಣ ಮೆಣಸಿನಕಾಯಿ ಬಳಸಿ ಕುಟ್ಟಿ ತಯಾರಿಸಿದ ಕುಟ್ಟಿಂಡಿಯೊಂದಿಗೆ ಕಡುಬನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹಿರಿಯರು ಹೇಳುತ್ತಿದ್ದರು.

ಮುಖ್ಯವಾಗಿ ಹೊಲಗಳಿರುವ ಪ್ರತಿ ಕುಟುಂಬದಲ್ಲಿ ಅವರೆಕಾಯಿ ಬೆಳೆಯುತ್ತಿದ್ದರು. ಸಂಕ್ರಾಂತಿ ಹಬ್ಬದ ವೇಳೆಗೆ ಅವರೆಕಾಯಿಯನ್ನು ಸಂಪೂರ್ಣ ಕೊಯ್ಲು ಮಾಡಿ ದನಕರುಗಳಿಗೆ ಮೇಯಲು ಬಿಡುತ್ತಿದ್ದರು. ಈ ಕಾಲದಲ್ಲಿ ದನಕರುಗಳು ಅವರೆಗಿಡಗಳನ್ನು ತಿಂದರೆ ಆರೋಗ್ಯಪೂರ್ಣವಾಗಿರುತ್ತವೆ ಎಂಬುದು ವಾಡಿಕೆ.

ಹಬ್ಬದ ಹಿಂದಿನ ದಿನ ಮರಸು ಗ್ರಾಮದಲ್ಲಿ ಬಲೆ ಬಳಸಿಕೊಂಡು ಮೊಲಗಳನ್ನು ಹಿಡಿದು ತರುತ್ತಿದ್ದರು. ಮೊದಲು ಹಿಡಿದ ಮೊಲದ ಕಾಲಿಗೆ ಗೆಜ್ಜೆ ಕಟ್ಟಿ ಪೂಜಿಸಿ ರಂಗನಾಥಸ್ವಾಮಿ ಅಡ್ಡೆದೇವರ ಸಮ್ಮುಖದಲ್ಲಿ ಉತ್ತರ ದಿಕ್ಕಿಗೆ ಓಡಿಸುತ್ತಿದ್ದರು. ಇದರಿಂದ ಊರಿಗೆ ಸಂಕಷ್ಟ ತೊಲಗಿ ಸುಖ– ಸಮೃದ್ಧಿ ದೊರಕುತ್ತದೆ ಎಂಬುದು ವಾಡಿಕೆ.

ಆದರೆ ಇತ್ತೀಚೆಗೆ ಕೃಷಿಯಲ್ಲಿ ಭಾರಿ ಬದಲಾವಣೆಯಾಗಿದ್ದು, ಕೃಷಿ ಕಾರ್ಮಿಕರ ಅಭಾವ ಎದುರಾಗಿರುವುದರಿಂದ ಗದ್ದೆ, ಹೊಲಗಳಲ್ಲಿ ಯಂತ್ರಗಳ ಮೂಲಕ ಬೆಳೆ ಕಟಾವು ಮಾಡಿ ಸ್ಥಳದಲ್ಲೇ ಮಾರಾಟ ಮಾಡಲಾಗುತ್ತಿದೆ. ಈ ಕಾರಣದಿಂದ ಒಕ್ಕಲು ಕಣಗಳಿಲ್ಲ. ಭತ್ತ, ರಾಗಿ ಗುಡ್ಡೆಗಳು ಕಣ್ಮರೆಯಾಗಿವೆ. ಕಣಗಳಲ್ಲಿ ನಡೆಯುತ್ತಿದ್ದ ಹಬ್ಬದ ಸಡಗರ ಸಂಪೂರ್ಣ ತೆರೆಮರೆಗೆ ಸರಿದು ಹೋಗಿದೆ. ಧಾರ್ಮಿಕ ಕಾರ್ಯಕ್ರಮಗಳಿಗೂ ಸಂಕಷ್ಟ ಎದುರಾಗಿದೆ.

ಹೊಲದಲ್ಲಿ ಬೆಳೆದಿರುವ ಅವರೆಕಾಯಿ ಗಿಡಗಳು.
ಹೊಲದಲ್ಲಿ ಬೆಳೆದಿರುವ ಅವರೆಕಾಯಿ ಗಿಡಗಳು.
‘ಯಾಂತ್ರೀಕರಣವೇ ಕಾರಣ’
ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಸಂಕ್ರಾಂತಿ ಹಬ್ಬದ ಸಡಗರ ಕ್ರಮೇಣ ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಕೃಷಿಯಲ್ಲಿ ಯಾಂತ್ರೀಕರಣ ಮತ್ತು ಬಹುತೇಕ ಕೃಷಿ ಕಾರ್ಮಿಕರು ಪಟ್ಟಣಕ್ಕೆ ವಲಸೆ ಹೋಗಿರುವುದು ಕಾರಣವಾಗಿದೆ ಎನ್ನುತ್ತಾರೆ ಮರಸು ಹೊಸಳ್ಳಿ ಗ್ರಾಮದ ಗಿಡ್ಡಮ್ಮ. ಹಿಂದೆ ರೊಟ್ಟಿ ಕಡುಬು ಇಡ್ಲಿ ದೋಸೆ ಹೋಳಿಗೆ ಚಿರೊಟ್ಟಿಗೆಂದು ಕೆಲವು ಹಬ್ಬಗಳು ಮೀಸಲಾಗಿದ್ದವು. ಈಗ ಪ್ರತಿದಿನ ತಮಗಿಷ್ಟವಾದ ತಿಂಡಿ ತಿನಿಸುಗಳನ್ನು ಸವಿಯುತ್ತಿರುವುದರಿಂದ ಹಬ್ಬಗಳಿಗೆ ಸೀಮಿತವಾಗಿಲ್ಲ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT