ಮನೆ ನಿರ್ಮಿಸಿಕೊಡಲು ಆಗ್ರಹ

7
ಡಿ.ಸಿ ಕಚೇರಿ ಎದುರು ವಸತಿ ನಿರಾಶ್ರಿತರ ಧರಣಿ

ಮನೆ ನಿರ್ಮಿಸಿಕೊಡಲು ಆಗ್ರಹ

Published:
Updated:
Deccan Herald

ಹಾಸನ : ಆಶ್ರಯ ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಸತಿ ನಿರಾಶ್ರಿತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 20 ವರ್ಷಗಳಿಂದ  ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ವಿಧವೆಯರು, ವೃದ್ಧರು, ಬುದ್ಧಿಮಾಂದ್ಯರು ಕಷ್ಟದಲ್ಲಿ ಜೀವನ ಸಾಗಿಸಬೇಕಾಗಿದೆ. ಹಲವು ಮಂದಿಗೆ ನಿವೇಶನ ಇಲ್ಲ, ಸೂರು ಇಲ್ಲ. ಒಂದೂವರೆ ವರ್ಷದಿಂದ  ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಏಳು ತಿಂಗಳ ಹಿಂದೆ ಪಟ್ಟಣ ಪಂಚಾಯಿತಿ ವತಿಯಿಂದ ನಿರಾಶ್ರಿತರಿಗೆ ಹಕ್ಕು ಪತ್ರದ ನಕಲು ಪ್ರತಿ ನೀಡಲಾಗಿತ್ತು. ಆದರೆ, ಇದುವರೆಗೂ ಹಕ್ಕು ಪತ್ರದ ಮೂಲ ದಾಖಲಾತಿ ನೀಡಿಲ್ಲ. ನಿವೇಶನ ನೋಂದಣಿ ಮಾಡಿಸದೆ ಕಡು ಬಡವರಿಗೆ ಮನೆ ನಿರ್ಮಾಣ ಮಾಡಿಕೊಡುವಲ್ಲಿ ಶಾಸಕರು, ಆಶ್ರಯ ಸಮಿತಿ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಸೌಕರ್ಯ ಕಲ್ಪಿಸದೆ ತೊಂದರೆ ನೀಡುತ್ತಿದ್ದಾರೆ’ ಎಂದು ದೂರಿದರು.

‘ನಿವೇಶನಗಳು ಹಂಚಿಕೆಯಾಗಿರುವ ಭಾಗದಲ್ಲಿ ಮೂಲ ಸೌಲಭ್ಯ ಇಲ್ಲ. ಕೂಡಲೇ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರೆ, ‘ಶಾಸಕರು ಒಪ್ಪಿದರೆ ಈಗಲೇ ಮಾಡಿಕೊಡುತ್ತೇನೆ’ ಎಂದು ಉತ್ತರಿಸುತ್ತಾರೆ. ಶಾಸಕರನ್ನು ಕೇಳಿದರೆ, ‘ಪಟ್ಟಣ ಪಂಚಾಯಿತಿ ಚುನಾವಣೆ ಮುಗಿಯುವವರೆಗೂ ಏನು ಮಾಡಲು ಆಗುವುದಿಲ್ಲ’ ಎನ್ನುತ್ತಾರೆ. ನೆಪ ಹೇಳಿಕೊಂಡು ಆಶ್ರಯ ಸಮಿತಿಯವರು ಕೈಕಟ್ಟಿ ಕುಳಿತಿದ್ದಾರೆ. ಇವರ ಬೇಜವಾಬ್ದಾರಿತನದಿಂದ ಬಡವರು ಸೂರು ಇಲ್ಲದೆ ಪರಿತಪಿಸಬೇಕಾಗಿದೆ’ ಎಂದು ಅಳಲು ತೋಡಿಕೊಂಡರು.

‘ಎಷ್ಟೋ ಕುಟುಂಬಗಳು ಮನೆ ಬಾಡಿಗೆ ಹಣ ಕಟ್ಟಲಾಗದ ಸ್ಥಿತಿಗೆ ಬಂದಿವೆ. ಜಿಲ್ಲಾಧಿಕಾರಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ, ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು.
ನಿವಾಸಿಗಳಾದ ತುಳಸಿಯಮ್ಮ, ರಾಧ, ಲಕ್ಷ್ಮೀ, ಸಾವಿತ್ರಮ್ಮ, ಜಾಕಿರ ಬಾನು, ಗಂಗಮ್ಮ, ಪುಟ್ಟಲಕ್ಷ್ಮೀ, ದಿವ್ಯಶ್ರೀ, ಶಾಂತಮ್ಮ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !