ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದಲ್ಲೇ ಕೊಳೆಯುತ್ತಿರುವ ಮಂಗಳೂರು ಸೌತೆ

ಲಾಕ್ ಡೌನ್ ಸಡಿಲಗೊಂಡರೂ ಬೇಡಿಕೆ ಇಲ್ಲ; ಬೇರೆಡೆ ಸಾಗಣೆಯೂ ಆಗುತ್ತಿಲ್ಲ
Last Updated 28 ಮೇ 2020, 11:22 IST
ಅಕ್ಷರ ಗಾತ್ರ

ಹಳೇಬೀಡು: ಕೊರೊನಾ ಪರಿಣಾಮದಿಂದ ಸಮೀಪದ ಅಪ್ಪಗೌಡನಹಳ್ಳಿ ಗ್ರಾಮದಲ್ಲಿ ಮಂಗಳೂರು ಸೌತೆ ಹೊಲದಲ್ಲಿಯೇ ಉಳಿದು ಕೊಳೆಯುವ ಸ್ಥಿತಿಯಲ್ಲಿದೆ. ಉತ್ತಮ ಫಸಲು ಬಂದಿದೆ ಎಂದು ಖುಷಿಯಾಗಿದ್ದ ರೈತರು ಮಾರಾಟವಾಗದ್ದಕ್ಕೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ರೈತ ಸಗನಯ್ಯ 3 ತಿಂಗಳು ಕಷ್ಟಪಟ್ಟು 2 ಎಕರೆ ಮಂಗಳೂರು ಸೌತೆ ಬೆಳೆದಿದ್ದರು. ದಾಖಲೆಯ ಫಸಲು ಬಂದಿದ್ದರಿಂದ ₹ 2 ಲಕ್ಷ ಆದಾಯ ಖಚಿತ ಎಂದು ಊರಿನ ರೈತರು ಲೆಕ್ಕಚಾರವಾಗಿತ್ತು. ಆದರೆ, ಈಗ ಬಿಡಿಗಾಸು ಇಲ್ಲದಾಗಿದೆ.

ಲಾಕ್‌ಡೌನ್ ಆರಂಭವಾದಾಗ ಚಿಂತಾಕ್ರಾಂತರಾಗಿದ್ದ ಸಗನಯ್ಯ, ಸಡಿಲಗೊಂಡಾಗ ಸಮಾಧಾನ ಮಾಡಿಕೊಂಡಿದ್ದರು. ಆದರೆ, ಮಂಗಳೂರು ಸೌತೆಗೆ ಮಾತ್ರ ಬೇಡಿಕೆ ಬರದೆ ನಿರಾಸೆ ಮೂಡಿಸಿದೆ. ಪಕ್ವವಾದ ಸೌತೆಕಾಯಿ ಬಳ್ಳಿಯಿಂದ ಉದುರುವ ಹಂತಕ್ಕೆ ಬಂದರೂ ಖರೀದಿ ಮಾಡುವವರಿಲ್ಲದೆ ದಿಕ್ಕು ತೋಚದಂತಾಗಿದೆ.

‘ಮಾರುಕಟ್ಟೆಯಲ್ಲಿ ಕೆ.ಜಿ. ಒಂದಕ್ಕೆ ₹ 20 ರಂತೆ ಮಂಗಳೂರು ಸೌತೆ ಮಾರಾಟವಾಗುತ್ತಿದೆ. ಕೆ.ಜಿಗೆ ₹ 6ರಿಂದ 8ಕ್ಕೆ ಕೊಡುತ್ತೇವೆ ಎಂದರೂ ರೈತರ ಹತ್ತಿರ ಯಾರೂ ಸುಳಿಯುತ್ತಿಲ್ಲ. ಎರಡು ಎಕರೆ ಸೌತೆ ಬೆಳೆಯಲು ₹ 40 ಸಾವಿರ ಖರ್ಚು ಮಾಡಿದ್ದೇವೆ. ಕೂಲಿ ಕಾರ್ಮಿಕರಿಗೆ ಸಂಬಳ ಕೊಟ್ಟ ಕೆಲಸ ಮಾಡಿಸಿದ್ದಲ್ಲದೆ. ಮನೆ ಮಂದಿಯೆಲ್ಲ ದುಡಿದಿದ್ದೇವೆ. ಬೆಳೆ ಬಂದರೆ ಕೈತುಂಬಾ ಹಣ ಬರುತ್ತದೆ ಎಂದು ಸಾಲ ಮಾಡಿ ಕೈಸುಟ್ಟು ಕೊಂಡೆವು’ ಎಂಬುದು ರೈತ ಸಗನಯ್ಯ ಅವರ ಅಳಲು.

ಸೌತೆ ಬಿತ್ತನೆಯಾದ ನಂತರ ಮೊಳಕೆಯಿಂದ ಹೂವು ಬಿಟ್ಟು ಕಾಯಿಕಟ್ಟುವವರೆಗೆ ರೋಗ, ಕೀಟಬಾಧೆ ರೈತರನ್ನು ಕಾಡುತ್ತವೆ. ಮೈಮರೆತು ಯಾವುದಾದರೂ ಒಂದು ಹಂತದಲ್ಲಿ ಔಷಧ ಸಿಂಪಡಣೆ ಮಾಡದಿದ್ದರೂ, ಬೆಳೆ ಸೊರಗುತ್ತದೆ. ಬಳ್ಳಿಯ ಬೆಳವಣಿಗೆಗೆ ಸಮಯಕ್ಕೆ ಸರಿಯಾಗಿ ಕಳೆ ತೆಗೆಯುತ್ತಿರಬೇಕು. ಪ್ರತಿ ಹಂತದಲ್ಲಿ ನಿಗಾವಹಿಸಿ ಕೆಲಸ ಮಾಡಿ ಬೆಳೆ ತೆಗೆದರೂ ಪ್ರತಿಫಲ ಇಲ್ಲದಂತಾಗಿದೆ ಎಂದು ರೈತರು ಸಮಸ್ಯೆ ಬಿಚ್ಚಿಟ್ಟರು.

ಕೊರೊನಾ ಬಂದು ರೈತರ ಬದುಕನ್ನೇ ನುಂಗಿ ಹಾಕಿತು. ರಾಜ್ಯಗಳ ಗಡಿ ಬಂದ್ ಆಗಿರುವುದರಿಂದ ಸೌತೆ ರಾಜ್ಯದಲ್ಲಿಯೇ ಮಾರಾಟವಾಗಬೇಕಾಗಿದೆ. ರಾಜ್ಯದ ಬಹುತೇಕ ಕಡೆ ಕೊರೊನಾ ಹರಡಿರುವುದರಿಂದ ಹೊರ ಜಿಲ್ಲೆಗಳಿಗೂ ತರಕಾರಿ ಸಾಗಣೆಯಾಗುತ್ತಿಲ್ಲ ಎಂದು ರೈತ ಸಗನಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ಸೌತೆ ಬೆಳೆದ ಹತ್ತಾರು ರೈತರಿಗೆ ನಷ್ಟವಾಗಿದೆ. ಸರ್ಕಾರವೇ ಖರೀದಿಸಿ ಬೇಡಿಕೆ ಇರುವ ಪ್ರದೇಶಕ್ಕೆ ಸಾಗಣೆ ಮಾಡಿದರೆ ರೈತರ ಬದುಕು ಹಸನಾಗುತ್ತದೆ ಎಂದು ರೈತ ಮುಖಂಡ ಅಪ್ಪಗೌಡನಹಳ್ಳಿ ರತೀಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT