ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ನಿಕ್ಷೇಪ ವಿತರಣೆ ಖಾಸಗಿಗೆ

ಅಕ್ರಮ ತಡೆಗೆ ಕಣ್ಗಾವಲು ತಂಡ ರಚನೆ: ಡಿ.ಸಿ
Last Updated 10 ಜನವರಿ 2019, 15:32 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲ್ಲೂಕುಗಳಲ್ಲಿ ಮರಳು ನಿಕ್ಷೇಪಗಳ ವಿತರಣೆಗಾಗಿ ಟೆಂಡರ್ ಮೂಲಕ ಖಾಸಗಿ ಅವರಿಗೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ನಿಗದಿಪಡಿಸಿರುವ ಮರಳು ಯಾರ್ಡ್ ನಿಂದ ರಹದಾರಿ ನೀಡಿರುವಂತೆ ಮರಳು ಸಾಗಾಣಿಕೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಸಂಬಂಧವಾಗಿ ಈಗಾಗಲೇ ಗುರುತಿಸಿರುವ ಚೆಕ್ ಪೋಸ್ಟ್ ಗಳಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ನೌಕರರ ಹಾಗೂ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಜ.10 ರಿಂದ 25ರ ವರೆಗೆ ಮೊದಲನೇ ಹಂತದಲ್ಲಿ ಕಾರ್ಯ ನಿರ್ವಹಣೆಗಾಗಿ ತಂಡ ರಚಿಸಿ ಪ್ರತ್ಯೇಕ ಸಮಿತಿ ರಚಿಸಿದೆ. ಮರಳು ದಾಸ್ತಾನು ಸ್ಥಳದಿಂದ ಗ್ರಾಹಕರ ಕೋರಿಕೆಗೆ ಅನುಗುಣವಾಗಿ ರಹದಾರಿ ಪತ್ರ ನೀಡಲಾಗಿರುತ್ತದೆ. ಇದು ಒಂದು ಟ್ರಿಪ್ ಗೆ ಮಾತ್ರ ನೀಡಲಾಗಿದ್ದು, ದುರ್ಬಳಕೆ ಆಗದಂತೆ ನಿಗಾವಹಿಸಬೇಕು ಎಂದು ತಿಳಿಸಿದರು.

ಮರಳು ಸಾಗಾಣಿಕೆ ವಾಹನಕ್ಕೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿರಬೇಕು. ರಹದಾರಿ ಪತ್ರದಲ್ಲಿ ತಿಳಿಸಿರುವ ಮಾರ್ಗ ದಿನಾಂಕಗಳು ವ್ಯತ್ಯಾಸವಾಗದಂತೆ ಮತ್ತು ರಹದಾರಿಯ ಮಾನ್ಯತೆ ಗಮನಿಸಬೇಕು. ಅಕ್ರಮ ಮರಳು ಸಾಗಾಣಿಕೆ ಕಂಡು ಬಂದಲ್ಲಿ ತಾಲ್ಲೂಕು ಮರಳು ನಿರ್ವಹಣೆ ಸಮಿತಿಯ ಸದಸ್ಯ ಕಾರ್ಯದರ್ಶಿ ತಹಶೀಲ್ದಾರ್ ಮೂಲಕವಾಗಲಿ ಅಥವಾ ಸಮಿತಿ ಸದಸ್ಯರ ಮೂಲಕ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದರು.

ಪ್ರತಿ ಮರಳು ಲೋಡ್ ಗೆ ಸಾಗಣಿಕೆ ವೆಚ್ಚ ಸೇರಿ ಸರ್ಕಾರ ನಿಗದಿಪಡಿಸಿರುವ ದರಗಳಲ್ಲಿ ವ್ಯತ್ಯಾಸ ವಾಗದಂತೆ ಗಮನಿಸುವುದು, ನಿಯೋಜಿಸಿರುವ ಅಧಿಕಾರಿ ಮತ್ತು ನೌಕರರ ವಾಸ್ತವ್ಯ ಊಟೋಪಚಾರದ ವ್ಯವಸ್ಥೆ ಹಾಗೂ ಪ್ರಯಾಣಕ್ಕೆ ವಾಹನದ ವ್ಯವಸ್ಥೆಯನ್ನು ಗಣಿ ಮತ್ತು ಭೂಗರ್ಭ ಇಲಾಖೆ ನಿರ್ವಹಿಸಬೇಕು ಎಂದರು.

ಚೆಕ್ ಪೋಸ್ಟ್ ಮತ್ತು ಮರಳು ಯಾರ್ಡ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಕ್ರಮ ವಹಿಸಬೇಕು. ಅಧಿಕಾರಿ ಮತ್ತು ನೌಕರರಿಗೆ ನಿಗದಿಪಡಿಸಿರುವ ದಿನಾಂಕಗಳಂದು ತಪ್ಪದೇ ಸ್ಥಳದಲ್ಲಿ ಹಾಜರಿದ್ದು ಕಾರ್ಯನಿರ್ವಹಿಸುವಂತೆ ನಿರ್ದೇಶಿಸಿದರು.

ಅಕ್ರಮ ಮರಳು ಸಾಗಾಣಿಕೆ ಕಂಡು ಬಂದಲ್ಲಿ ವಾಹನವನ್ನು ತಮ್ಮ ವಶಕ್ಕೆ ಪಡೆದು ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ಮಾಡಬೇಕು. ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ ತೋರಿಸಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT