ಗುರುವಾರ , ಸೆಪ್ಟೆಂಬರ್ 23, 2021
21 °C
ಬಸವೇಶ್ವರ ದೇಗುಲದ ಪ್ರವೇಶ, ಬ್ರಹ್ಮಕಳಸ ಪ್ರತಿಷ್ಠಾಪನಾ ಸಮಾರಂಭ

ಸತ್ಸಂಗದಿಂದ ಮೋಕ್ಷ: ಚುಂಚಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮೋಕ್ಷ ಸಾಧನೆಯಾಗಬೇಕಾದರೆ ಸತ್ಸಂಗ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಯಡಿಯೂರು ಗ್ರಾಮದಲ್ಲಿ ನಿರ್ಮಿಸಿರುವ ಬಸವೇಶ್ವರ ದೇಗುಲದ ಪ್ರವೇಶ ಮತ್ತು ಬ್ರಹ್ಮ ಕಳಸ ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ಮೋಕ್ಷ ಶ್ರೇಷ್ಠವಾದುದು. ಅದನ್ನು ಸಾಧಿಸಬೇಕಾದರೆ ಸಜ್ಜನರ ಸಹವಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ದೇಶದ ಆಸ್ತಿ ಎನಿಸಿಕೊಂಡಿರುವ ಮಕ್ಕಳು, ಏನೇ ಮಾಡಬೇಕಾದರೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಈ ದಿನಗಳಲ್ಲಿ ಒಳ್ಳೆಯದರ ಜೊತೆ ಅರಿವಿಲ್ಲದಂತೆ ಕೆಟ್ಟದು ಬೆಳೆಯುತ್ತದೆ. ಆದ್ದರಿಂದ ಸ್ನೇಹ, ಸಂಬಂಧ ಬೆಳೆಸುವಾಗ ಯಾವುದೇ ಕಾರಣಕ್ಕೂ ಮೈ ಮರೆಯಬಾರದು ಎಂದು ಇದಕ್ಕೆ ಕಾಗೆ- ಪಾರಿವಾಳದ ಗೆಳೆತನದ ಪರಿಣಾಮದ ಪ್ರಸಂಗವನ್ನು ಶ್ರೀಗಳು ಉದಾಹರಿಸಿದರು.

ಒಮ್ಮೆ ನಾಡನ್ನು ಆಳುವ ದೊರೆಯೊಬ್ಬ ಬೃಹನ್ಮರದ ಕೆಳಗೆ ನಿದ್ರಿಸುತ್ತಿದ್ದ. ದೊರೆ ದೇವರಿಗೆ ಸಮಾನ ಎಂದು ನಂಬಿದ್ದ ಪಾರಿವಾಳ, ಸೂರ್ಯನ ರಶ್ಮಿ ಆತನ ಮುಖದ ಮೇಲೆ ಬೀಳುವುದನ್ನು ಕಂಡ ಕೂಡಲೇ ತಾನು ಮರವೇರಿ ತನ್ನ ರೆಕ್ಕೆಯನ್ನು ಬಿಸಿಲಿಗೆ ಚಾಚಿ, ಬಿಸಿಲು ದೊರೆಯ ಮೇಲೆ ಬೀಳುವುದನ್ನು ತಡೆಯಿತು. ಇದನ್ನು ಕಂಡ ಕಾಗೆಯೂ ಅದೇ ರೀತಿ ಮಾಡಲು ಹೋಗಿ ನಾಡನ್ನು ಅಳುವ ದೊರೆಯ ಮುಖದ ಮೇಲೆ ಕಸ ಹಾಕಿ ಅಲ್ಲಿಂದ ಹಾರಿ ಹೋಯಿತು. ಅಲ್ಲೇ ಇದ್ದ ಸೈನಿಕ ಸಿಟ್ಟಾಗಿ ಕಾಗೆಗೆ ಗುಂಡಿಕ್ಕಲು ಯತ್ನಿಸಿದ, ಆದರೆ ಆ ಗುಂಡು ಅಲ್ಲೇ ಇದ್ದ ಪಾರಿವಾಳಕ್ಕೆ ತಗುಲಿ ಸಾವನ್ನಪ್ಪಿತು. ಇದರರ್ಥ ಯಾರೇ ಆಗಲಿ ಉತ್ತಮರ ಸಹವಾಸ ಮಾಡಬೇಕು. ಕಾಗೆಯಂಥವರ ಜೊತೆ ಸ್ನೇಹ ಮಾಡಿದರೆ ಪಾರಿವಾಳದಂತೆ ಬಲಿಯಾಗಬೇಕಾಗುತ್ತದೆ. ಆದ್ದರಿಂದ ಒಳ್ಳೆಯರ ಗೆಳೆತನ ಮಾಡಿ ಎಂದು  ಸಲಹೆ ನೀಡಿದರು.

ಭಗವಂತನ ಧ್ಯಾನ ಮಾಡಿದರೆ ಹೃದಯದಲ್ಲಿ ಭಕ್ತಿಯ ಸಿಂಚನ ಮೂಡುತ್ತದೆ. ಜಗತ್ತಿನಲ್ಲಿ ಪರಸ್ಪರ ಸ್ನೇಹ, ವಿಶ್ವಾಸ ಶ್ರೇಷ್ಠವಾದುದು. ಸಕಾರಾತ್ಮಕ ಚಿಂತನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಸಚಿವ ರೇವಣ್ಣ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ ಶ್ರೀಗಳು, ನಾಡು ಮೆಚ್ಚಿದ ಸಂಸದ ಎಚ್.ಡಿ. ದೇವೇಗೌಡರ ಪುತ್ರ ರೇವಣ್ಣ ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳಾಗಿವೆ ಎಂದು ಹೇಳಿದರು.

ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಅಗತ್ಯವಿರುವ ಕಾಲೇಜು ಸ್ಥಾಪನೆ ಮಾಡಲಾಗುತ್ತಿದೆ. ಮೊಸಳೆ ಹೊಸಹಳ್ಳಿಯಲ್ಲಿ ಈ ವರ್ಷದಿಂದಲೇ ಎಂಜಿನಿಯರಿಂಗ್ ಕಾಲೇಜು ಆರಂಭವಾಗಲಿದೆ ಎಂದರು.

ಆದಿಚುಂಚನಗಿರಿ ಸ್ವಾಮೀಜಿ ನಮ್ಮ ಸಮಾಜದ ದೇವರು ಎಂದು ಬಣ್ಣಿಸಿದ ರೇವಣ್ಣ, ಸಮಾಜ ಸೇವೆಗಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿದ್ದಾರೆ ಎಂದು ಗುಣಗಾನ ಮಾಡಿದರು.

ಬಜೆಟ್‌ನಲ್ಲಿ ಆದಿಚುಂಚನಗಿರಿ ಮಠಕ್ಕೆ ಏನಾದರೂ ಕೊಡಬೇಕಾ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಕೇಳಿದ್ದಕ್ಕೆ, ಅದಕ್ಕೆ ಭಕ್ತರಿದ್ದಾರೆ ಎಂದಿದ್ದರು ಎಂಬ ಸನ್ನಿವೇಶವನ್ನು ಉದಾಹರಿಸಿದರು.

ಆದಿಚುಂಚನಗಿರಿ ಶಾಖಾಮಠಾಧೀಶ ಶಂಭುನಾಥ ಸ್ವಾಮೀಜಿ, ಶಾಸಕ ಸಿ.ಎನ್.ಬಾಲಕೃಷ್ಣ, ಹುಡಾ ಅಧ್ಯಕ್ಷ ಕೆ.ಎಂ.ರಾಜೇಗೌಡ, ಎಪಿಎಂಸಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಪಿ.ಸ್ವರೂಪ್, ಮುಖಂಡ ಸ್ವಾಮಿಗೌಡ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು