‘ಹಳೆಯ ಕಾಮಗಾರಿಗೆ ಭೂಮಿಪೂಜೆ’

ಹಾಸನ: ‘ಎಚ್.ಡಿ.ರೇವಣ್ಣ ಅವರು ಸಚಿವರಾಗಿದ್ದಾಗ ಅನುದಾನ ತಂದ ಕಾಮಗಾರಿಗಳಿಗೆ ಹಾಸನ ಕ್ಷೇತ್ರದ ಶಾಸಕರು ಭೂಮಿ ಪೂಜೆ ಮಾಡುತ್ತಿದ್ದಾರೆ’ ಎಂದು ಸಂಸದ ಪ್ರಜ್ವಲ್ ರೇವಣ್ಣ ಟೀಕಿಸಿದರು.
ತಾಲ್ಲೂಕಿನ ತೇಜೂರು ಗ್ರಾಮದಲ್ಲಿ ಸಾಲಗಾಮೆ ರಸ್ತೆಯಿಂದ, ಗ್ಯಾರಹಳ್ಳಿ, ರಾಚೇನಹಳ್ಳಿ, ಆಚಗೋಡನಹಳ್ಳಿ ಮಾರ್ಗವಾಗಿ ಬೇಲೂರು ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ವೈ) ಅನುದಾನವನ್ನು ತಮ್ಮ ಅನುದಾನ ಎಂಬುದಾಗಿ ಶಾಸಕರು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಈ ಬಗ್ಗೆ ಗೊತ್ತಿಲ್ಲ ಎಂದು ಕಾಣುತ್ತದೆ. ಶಾಸಕರ ಅನುದಾನಕ್ಕೆ ನಾವು ಭೂಮಿಪೂಜೆ ಮಾಡುವುದು ಬೇಡ, ನಮ್ಮನ್ನು ಕರೆಯುವುದೂ ಬೇಡ. ಆದರೆ, ಅರ್ಧ ಮುಗಿಯುವ ಹಂತಕ್ಕೆ ಬಂದಿರುವ ಕಾಮಗಾರಿಗಳಿಗೂ ಭೂಮಿ ಪೂಜೆ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಶಾಸಕರು ನನಗೆ ಬುದ್ದಿವಾದ ಹೇಳುವುದು ಬೇಡ. ಬುದ್ದಿ ಹೇಳಲು ರಾಜಕೀಯ ಅನುಭವ ಇರುವ ಎಚ್.ಡಿ. ದೇವೇಗೌಡರು, ಎಚ್.ಡಿ. ರೇವಣ್ಣ ಹಾಗೂ ಜಿಲ್ಲೆಯ ಹಿರಿಯ ಶಾಸಕರಿದ್ದಾರೆ. ಪ್ರತಿ ಬಾರಿಯೂ ನಾನು ದೇವೇಗೌಡರ ಹೆಸರು ಹೇಳಿಕೊಂಡು ಗೆದ್ದಿದ್ದೇನೆ ಎನ್ನುತ್ತಾರೆ. ಹೌದು, ನಾನು ದೇವೇಗೌಡರ ಹೆಸರು ಹೇಳಿಕೊಂಡೇ ಗೆದ್ದಿದ್ದೇನೆ’ ಎಂದರು.
‘ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರನ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೀಗೆಲ್ಲಾ ಮಾಡುತ್ತಿದ್ದಾರೆ. ಇವರ ಮಾತುಗಳನ್ನು ಕೇಳಿಯೂ ನಾವು ಸುಮ್ಮನೆ ಇದ್ದೇವೆ ಎಂದರೆ ನಮಗೆ ಮಾತನಾಡಲು ಬರುವುದಿಲ್ಲ ಎಂದಲ್ಲ. ಜಿಲ್ಲೆಯ ಜನರು ಎಲ್ಲವನ್ನು ನೋಡುತ್ತಿದ್ದಾರೆ, ಹಾಸನ ಕ್ಷೇತ್ರಕ್ಕೆ ಹೊಸದಾಗಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರಿಗೆ ಇನ್ನೂ ತಿಳಿವಳಿಕೆ ಕಡಿಮೆ. ಇಂತಹ ಸಾಕಷ್ಟು ಜನರನ್ನ ಈ ಕ್ಷೇತ್ರ ನೋಡಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್, ಜೆಡಿಎಸ್ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.