ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬರ ತೆಜೋವಧೆಗಾಗಿ ಸುಳ್ಳು ದೂರು ನೀಡಬೇಡಿ

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಿ.ಎಚ್.ವಘೇಲಾ ಸಲಹೆ
Last Updated 10 ಜುಲೈ 2018, 13:37 IST
ಅಕ್ಷರ ಗಾತ್ರ

ಹಾಸನ :‘ಉತ್ತಮ ರೀತಿಯಲ್ಲಿ ಬದುಕುವುದು ನಮ್ಮ ಹಕ್ಕು. ಸಂವಿಧಾನ ನೀಡಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.’ ಎಂದು ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಿ.ಎಚ್.ವಘೇಲಾ ಸಲಹೆ ನೀಡಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ವತಿಯಿಂದ ಏರ್ಪಡಿಸಿದ್ದ ಮಾನವ ಹಕ್ಕುಗಳ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. ‘ಮೂಲಭೂತ ಹಕ್ಕುಗಳ ರಕ್ಷಣೆಯೇ ಮಾನವ ಹಕ್ಕುಗಳ ಆಯೋಗದ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಸಮಸ್ಯೆಯಾದರೂ ಸಾರ್ವಜನಿಕರು ಕೂಡಲೇ ಆಯೋಗ ಸಂಪರ್ಕಿಸಬಹದುದು. ಜೀವನ ಎಂದರೆ ಉಸಿರಾಡುವುದು ಮಾತ್ರವಲ್ಲ, ಬದಲಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮಾನತೆ ಸಾಧಿಸುವುದಾಗಿದೆ’ ಎಂದು ತಿಳಿಸಿದರು.

‘ಯಾವ ಬಟ್ಟೆ ಧರಿಸಬೇಕು, ಯಾವ ಆಹಾರ ಸೇವಿಸಬೇಕು, ಎಲ್ಲಿ ಸಂಚರಿಸಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ನಮಗಿದೆ. ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನ ನಡೆದರೆ ಅದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಸಮಾಜದ ಪ್ರತಿಯೊಬ್ಬರನ್ನು ಗೌರವಿಸುವ ವ್ಯವಧಾನ ಬಳಸಿಕೊಳ್ಳಬೇಕು. ಮತ್ತೊಬ್ಬರ ತೆಜೋವಧೆಗಾಗಿ ಸುಳ್ಳು ದೂರು ನೀಡುವುದು, ನಿಯಮ ದುರುಪಯೋಗ ಮಾಡಿಕೊಳ್ಳಬಾರದು’ ಎಂದು ಸಲಹೆ ನೀಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 50 ರಷ್ಟಿರುವ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ. ಉದ್ಯೋಗ ಹಂಚಿಕೆಯಲ್ಲಿ ಸಮಾನತೆ ಜಾರಿಯಾಗಬೇಕೆಂಬ ಘೋಷಣೆ ಕಾಗದಗಳಿಗೆ ಮಾತ್ರ ಸೀಮಿತವಾಗಿದೆ. ವಿದ್ಯಾರ್ಥಿಗಳು ಸಂವಿಧಾನವನ್ನು ಅಭ್ಯಸಿಸಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ಮಾನವ ಹಕ್ಕುಗಳ ಆಯೋಗ ಮಾಜಿ ಸದಸ್ಯ ಸಿ.ಜಿ.ಹುನಗುಂದ ಮಾತನಾಡಿ, ‘1914ರಲ್ಲಿ ನಡೆದ ಪ್ರಥಮ ಹಾಗೂ 1939ರ ದ್ವಿತೀಯ ಮಹಾಯುದ್ಧಗಳು ಮಾನವ ಜನಾಂಗಕ್ಕೆ ಭೀತಿ ಹುಟ್ಟಿಸಿದವು. ಆ ಸಂದರ್ಭದಲ್ಲಿ ವಿವಿಧ ದೇಶದ ಗಣ್ಯರು ಚರ್ಚಿಸಿ ಮಾನವ ಹಕ್ಕುಗಳ ಆಯೋಗ ರಚಿಸದಿದ್ದರೆ ಇನ್ನು ಘೋರ ಪರಿಣಾಮ ಎದುರಿಸಬೇಕಿತ್ತು. 1948ರಲ್ಲಿ ಅಸ್ತಿತ್ವ ಪಡೆದ ಮಾನವ ಹಕ್ಕುಗಳ ಆಯೋಗ ಇದುವರೆಗೆ ಅನೇಕ ಕೆಲಸ ಮಾಡಿದೆ. ಸಂತ್ರಸ್ತರ, ಅನ್ಯಾಯಕ್ಕೊಳಗಾದವರ, ಮಹಿಳೆಯರ ಹಕ್ಕು ಕಾಪಾಡುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ ಎಂದರು.

ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಜಿಲ್ಲಾಧ್ಯಕ್ಷ ಪವಿತ್ರ ಉದಯವಾರ, ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲ ಕೆ.ಟಿ.ಕೃಷ್ಣೇಗೌಡ, ದಯಾನಂದ್, ಬಸವರಾಜ್, ಆರ್.ಪಿ.ವೆಂಕಟೇಶಮೂರ್ತಿ, ರವಿ ನಾಕಲಗೂಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT