ನೀರು ಪೂರೈಕೆಗೆ ₹ 441 ಕೋಟಿ ಯೋಜನೆ: ಎಚ್.ಡಿ.ರೇವಣ್ಣ

7
'ಹೆಚ್ಚುವರಿ ಅನುದಾನ ಮಂಜೂರಾತಿಗೆ ಕ್ರಮ"

ನೀರು ಪೂರೈಕೆಗೆ ₹ 441 ಕೋಟಿ ಯೋಜನೆ: ಎಚ್.ಡಿ.ರೇವಣ್ಣ

Published:
Updated:
Deccan Herald

ಹಾಸನ: ಗೊರೂರಿನ ಹೇಮಾವತಿ ನದಿಯಿಂದ ಹಾಸನ ನಗರಕ್ಕೆ ಕುಡಿಯುವ ನೀರಿನ 3 ನೇ ಹಂತದ ಯೋಜನೆಗೆ ಈಗ ಮಂಜೂರಾಗಿರುವ ₹141ಕೋಟಿ ಜೊತೆಗೆ ಹೆಚ್ಚುವರಿಯಾಗಿ ₹ 300 ಕೋಟಿ ಮಂಜೂರು ಮಾಡಿಸಿ ಒಟ್ಟು ₹ 441 ಕೋಟಿ ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಮೃತ್ ಯೋಜನೆಯಲ್ಲಿ ಮಂಜೂರಾಗಿರುವ ₹117 ಕೋಟಿ ಹಾಗೂ ನಗರದಲ್ಲಿ ನೀರು ವಿತರಣಾ ಜಾಲ ನಿರ್ಮಾಣಕ್ಕೆ ₹ 24 ಕೋಟಿ ಮಂಜೂರಾಗಿದೆ. ಈ ಯೋಜನೆಯಿಂದ ಹಾಸನ ನಗರ ಹಾಗೂ ನಗರಕ್ಕೆ ಹೊಂದಿಕೊಂಡಂತಿರುವ ಹೊಸ ಬಡಾವಣೆಗಳಿಗೆ ದಿನ 24 ಗಂಟೆಯೂ ನೀರು ಪೂರೈಕೆಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಹೆಚ್ಚುವರಿ ಅನುದಾನ ಮಂಜೂರು ಮಾಡಿಸಲಾಗಿದೆ’ ಎಂದರು.

ಸಮಗ್ರ ಯೋಜನೆ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು ಮತ್ತು ಒಳ ಚರಂಡಿ ವ್ಯವಸ್ಥಾಪಕ ನಿರ್ದೇಶಕ ಜಯರಾಂ, ಹೇಮಾವತಿ ಜಲಾಶಯದಿಂದ 24 ಎಂಎಲ್ ಡಿ ನೀರು ಪೂರೈಸುವ ಯೋಜನೆಯಲ್ಲಿ ಶೇಕಡಾ 40 ರಷ್ಟು ಕಾಮಗಾರಿ ಮುಗಿದಿದೆ. ನೀರು ಸಂಗ್ರಹಣಾಗಾರ ನಿರ್ಮಾಣಕ್ಕೆ ಖಾಸಗಿ ಜಮೀನು ಅಗತ್ಯವಿದ್ದು, ಜಿಲ್ಲಾಽಧಿಕಾರಿ ಅವರು ಭೂ ಮಾಲೀಕರೊಂದಿಗೆ ಸಂಧಾನ ನಡೆಸಿ ಭೂಮಿ ಸ್ವಾಽಧೀನ ಮಾಡಿಕೊಂಡು ಮಂಡಳಿಗೆ ಭೂಮಿ ಹಸ್ತಾಂತರಿಸಿದರೆ ಕಾಮಗಾರಿಯನ್ನು ತ್ವರಿತಗೊಳಿಸಲಾಗುವುದು ಎಂದರು.

ಈಗ ರೂಪಿಸಿರುವ ಯೋಜನೆಯಿಂದ ಹಾಸನ ನಗರಕ್ಕೆ ದಿನವೀಡಿ ನೀರು ಪೂರೈಸಲಾಗವುದಿಲ್ಲ. ಮಂಡಳಿಯು ರಾಜ್ಯದ ವಿವಿಧೆಡೆ ಕೈಗೊಂಡಿರುವ ಯೋಜನೆಗಳಲ್ಲಿ ಉಳಿತಾಯವಾಗಿರುವ ₹ ೭೦ ಕೋಟಿ ಅನ್ನು ನಗರದ ಕುಡಿಯುವ ನೀರು ಯೋಜನೆಗೆ ನೀಡಲಿದ್ದು, ಉಳಿದ ₹ ೨೩೦ ಕೋಟಿ ಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಮಾಹಿತಿ ನೀಡಿದರು.

ಹೊಳೆನರಸೀಪುರ ಪಟ್ಟಣದ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅರಕಲಗೂಡು ಪಟ್ಟಣದ ಯೋಜನೆ ಪೂರ್ಣಗೊಳಿಸಲೂ ಕ್ರಮ ಕೈಗೊಳ್ಳಲಾಗಿದೆ. ಅರಸೀಕೆರೆ ನಗರದಲ್ಲಿ ನೀರು ಪೂರೈಕೆಯಲ್ಲಿನ ದೋಷ ಸರಿಪಡಿಸಲಾಗುವುದು. ಬೇಲೂರಿನಲ್ಲಿ ನಿರ್ಮಾಣವಾಗಬೇಕಾಗಿರುವ ಮೇಲೆತ್ತರದ ಟ್ಯಾಂಕ್ ನಿರ್ಮಾಣವೂ ಶೀಘ್ರ ಆರಂಭವಾಗಲಿದೆ ಎಂದು ಜಯರಾಂ ಹೇಳಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಚನ್ನರಾಯಪಟ್ಟಣದಲ್ಲಿ ಕುಡಿಯುವ ನೀರಿನ ಪೈಪುಗಳ ಅಳವಡಿಕೆಗೆ ನಿಗದಿಪಡಿಸಿರುವ ₹ ೫ ಕೋಟಿ ಸಾಕಾಗುವುದಿಲ್ಲ. ₹ ೧೫ ಕೋಟಿ ಮಂಜೂರು ಮಾಡಬೇಕು. ಇಲ್ಲದಿದ್ದರೆ ೩ ನೇ ಹಂತದ ಯೋಜನೆಯ ಪೂರ್ಣ ಪ್ರಯೋಜನ ಜನರಿಗೆ ಲಭ್ಯವಾಗುವುದಿಲ್ಲ ಎಂದರು.

ಶಾಸಕ ಪ್ರೀತಂ ಜೆ.ಗೌಡ, ‘ರಸ್ತೆಗಳ ನಿರ್ಮಾಣಕ್ಕೆ ಮೊದಲು ಕುಡಿಯುವ ನೀರು ಮತ್ತು ಒಳ ಚರಂಡಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು. ಆನಂತರ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಎಂಜಿನಿಯರುಗಳಿಗೆ ಸೂಚನೆ ನೀಡಬೇಕು’ ಎಂದು ಸಲಹೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !