ಶುಕ್ರವಾರ, ನವೆಂಬರ್ 27, 2020
23 °C
50 ವರ್ಷಗಳಿಂದ ಗುಡಿಸಲಿನಲ್ಲೇ ವಾಸಿಸುತ್ತಿರುವ ಜನ, ಮನೆ ಕಟ್ಟಿಸಿಕೊಡುವಂತೆ ಆಗ್ರಹ

ಸಕಲೇಶಪುರ: ಕೃಷ್ಣಗೊಲ್ಲ ಕುಟುಂಬಗಳಿಗಿಲ್ಲ ಸೂರು

ಜಾನೇಕೆರೆ ಆರ್. ಪರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ‘ಈ ಊರಿಗೆ ಬಂದು ಹಲವು ವರ್ಷಗಳೇ ಆಯ್ತು. ಇದೇ ಪ್ಲಾಸ್ಟಿಕ್‌ ಗುಡಿಸಲಲ್ಲೇ ಜೀವನ ಕಳೆದೋಯ್ತು. ಮೊಮ್ಮಕ್ಕಳು ಬೆಳೆದು ದೊಡ್ಡವರಾದ್ರೂ ಹೆಂಚಿನ ಮನೇಲಿ ವಾಸ ಮಾಡುವ ಭಾಗ್ಯ ಬರಲಿಲ್ಲ...’

ಗುಡಿಸಲಿನ ಮೂಲೆಯಲ್ಲಿ ಕುಳಿತಿದ್ದ 65 ವರ್ಷದ ತಾಯಮ್ಮ, ತಮ್ಮ ಬದುಕಿನ ಕಷ್ಟವನ್ನು ವಿವರಿಸಿದ್ದು ಹೀಗೆ...

ತಾಲ್ಲೂಕಿನ ಯಸಳೂರು ಹೋಬಳಿಯ ಚಂಗಡಿಹಳ್ಳಿ ಗ್ರಾಮದಲ್ಲಿ ಸುಮಾರು 10 ಕುಟುಂಬಗಳು ಕಳೆದ 50 ವರ್ಷಗಳಿಂದಲೂ ಗುಡಿಸಲಿನಲ್ಲಿ ಬದುಕು ಸಾಗಿಸುತ್ತಿದ್ದಾರೆ. ಚಾವಣಿ ಇಲ್ಲದ ಬಿದ್ದುಹೋಗುವ ಸ್ಥಿತಿಯಲ್ಲಿರುವ ಗೋಡೆಗೆ ಟಾರ್ಪಲ್‌ ಸುತ್ತಿದ್ದಾರೆ. ಈ ಕುಟುಂಬಗಳು ನಿವೇಶನ, ವಸತಿ, ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಸರ್ಕಾರ ಸೌಲಭ್ಯಗಳಿಂದ ವಂಚಿತ ವಾಗಿವೆ. ಪಡಿತರ ವ್ಯವಸ್ಥೆ ಸಿಗುತ್ತಿದೆ. 

ಗ್ರಾಮದಲ್ಲಿ ಈ ಹಿಂದೆ 30ಕ್ಕೂ ಹೆಚ್ಚು ಕುಟುಂಬಗಳು ಇದ್ದವು. ಕೆಲ ಕುಟುಂಬಗಳು ಬೇಲೂರು ತಾಲ್ಲೂಕಿನ ಗೆಂಡೇಹಳ್ಳಿ, ಇನ್ನೂ ಕೆಲ ಕುಟುಂಬಗಳು ಶನಿವಾರಸಂತೆಯಲ್ಲಿ ನೆಲೆಸಿವೆ. ಸದ್ಯ ಇಲ್ಲಿರುವವರು ಪರಿಶಿಷ್ಟ ಪಂಗಡ ಕೃಷ್ಣಗೊಲ್ಲ (ಹಾವಾಡಿಗ) ಜಾತಿಗೆ ಸೇರಿದವರು. ಇವರ ಮೂಲ ಕಸುಬು ಹಾವು ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಆಟವಾಡಿಸಿ ಪ್ರೇಕ್ಷಕರು ನೀಡಿದ ಹಣದಲ್ಲಿ ಬದುಕು ಸಾಗಿಸುವುದು. ಆದರೆ, ಇದನ್ನು ನಿಷೇಧಿಸಿದ ನಂತರ ಇವರ ಬದುಕು ಅತಂತ್ರವಾಯಿತು.

‘ಕೆಲವರು ಭಿಕ್ಷೆ ಬೇಡಿದರೆ, ಇನ್ನೂ ಕೆಲವರು ತೋಟಗಳಲ್ಲಿ ಕೂಲಿ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದಾರೆ’ ಎಂದು ನಿವಾಸಿ ಮಮತಾ ತಿಳಿಸಿದರು.

‘ಚಂಗಡಿಹಳ್ಳಿಯಲ್ಲಿ ಕೃಷ್ಣಗೊಲ್ಲ ಕುಟುಂಬಗಳು ಇರುವುದು ಗಮನಕ್ಕೆ ಬಂದಿರಲಿಲ್ಲ. 2 ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ರಮೇಶ್‌ ಪ್ರತಿಕ್ರಿಯಿಸಿದರು.

‘ಆಶ್ರಯ ಯೋಜನೆಯಲ್ಲಿ ಅವ್ಯವಹಾರ’

‘ಚಂಗಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕೆಲವರು, ಕೃಷ್ಣಗೊಲ್ಲ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಮನೆ ಕಟ್ಟಿಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ದುರುಪಯೋಗ ಮಾಡಿಕೊಂಡಿದ್ದಾರೆ. ಕೆಲ ಮನೆಗಳಿಗೆ ತಳಪಾಯ ಹಾಕಿ, ಸಿಮೆಂಟ್‌ ಇಟ್ಟಿಗೆಯಲ್ಲಿ ಗೋಡೆ ಕಟ್ಟಿಸಿದ್ದಾರೆ. ಆದರೆ, ಬಾಗಿಲು ಇಲ್ಲ. ಚಾವಣಿ, ಸಾರಣಿಗೆ ಕೆಲಸ ಮಾಡದೆ ಪೂರ್ತಿ ಹಣವನ್ನು ಲಪಟಾಯಿಸಿದ್ದಾರೆ’ ಎಂದು ಗ್ರಾಮದ ನಿರಂಜನ್‌ ಆರೋಪಿಸಿದರು.

ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಕೋಶ ತಾಲ್ಲೂಕು ವಿಸ್ತರಣಾ ಅಧಿಕಾರಿಗಳು ಈವರೆಗೂ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ

–ನವೀನ್‌ ಸದಾ, ಆದಿವಾಸಿ ಹಸಲರು ಹಾಗೂ ಗಿರಿಜನರ ಸಂಘದ ಜಿಲ್ಲಾ ಅಧ್ಯಕ್ಷ

***

ಕೃಷ್ಣಗೊಲ್ಲರಿಗೆ ಮನೆ, ವಿದ್ಯುತ್‌, ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ವಿಫಲರಾಗಿದ್ದಾರೆ

–ವಳಲಹಳ್ಳಿ ವೀರೇಶ್, ದಲಿತ ಸಂಘರ್ಷ ಸಮಿತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.