ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಮಳೆ ಇಲ್ಲದೇ ರೈತರ ಪರದಾಟ

ಶುಂಠಿ, ಜೋಳ ಬಿತ್ತನೆ ಮಾಡಿ, ಆಗಸದತ್ತ ನೋಡುತ್ತಿರುವ ಅನ್ನದಾತ
Published 26 ಜೂನ್ 2024, 5:21 IST
Last Updated 26 ಜೂನ್ 2024, 5:21 IST
ಅಕ್ಷರ ಗಾತ್ರ

ಆಲೂರು: ಈ ಸಾಲಿನಲ್ಲಿ ಕಾಲಕ್ಕೆ ಸರಿಯಾಗಿ ಮಳೆಯಾಗದೇ ಕೃಷಿ ಚಟುವಟಿಕೆಯಲ್ಲಿ ಏರುಪೇರಾಗಿದೆ. 20 ದಿನಗಳ ಹಿಂದೆ ಹದ ಮಳೆಯಾದ ಸಂದರ್ಭ ಮುಸುಕಿನ ಜೋಳ, ಶುಂಠಿ ಬಿತ್ತನೆ ಮಾಡಲಾಗಿದ್ದು, ಬಿತ್ತನೆ ಮಾಡಿ ಹತ್ತು ದಿನಗಳ ನಂತರ ಒಂದು ದಿನ ಮಾತ್ರ ಹದ ಮಳೆಯಾಗಿದೆ. ಶೇ. 60-70 ಭಾಗ ಮಾತ್ರ ಮುಸುಕಿನ ಜೋಳ ನೆಲದಿಂದ ಮೇಲಕ್ಕೆ ಎದ್ದಿವೆ. ಉಳಿದ ಸಸಿಗಳು ಇನ್ನೂ ಜಮೀನಿನಿಂದ ಮೇಲೆ ಬಂದಿಲ್ಲ.

ಈ ವರ್ಷ ಶುಂಠಿಗೆ ಅಧಿಕ ಲಾಭ ದೊರಕಿದ್ದ ರಿಂದ, ಬಹುತೇಕ ರೈತರು ಅಲ್ಪ ಪ್ರಮಾಣದಿಂದ ಹಿಡಿದು ಗುತ್ತಿಗೆ ಆಧಾರದಲ್ಲಿ ಸಾವಿರಾರು ಮಂದಿ ಶುಂಠಿ ಬೆಳೆಗೆ ಮಾರು ಹೋಗಿದ್ದಾರೆ. ಮಳೆ ಕೊರತೆಯಿಂದ ಕೆರೆ ಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಗ್ಗಿದೆ. ಶುಂಠಿಗೆ ನೀರು ಸಿಂಪಡಿಸಲು ಸಾಧ್ಯವಾಗುತ್ತಿಲ್ಲ. ಕೆಲ ರೈತರು ಮಳೆ ನಂಬಿ ಶುಂಠಿ ಬೆಳೆದಿದ್ದು, ಸಕಾಲಕ್ಕೆ ಮಳೆಯಾಗದೆ ರೈತರ ಪಾಡು ಹೇಳತೀರದಾಗಿದೆ.

ಮುಸುಕಿನ ಜೋಳವನ್ನು ಹದವಿದ್ದ ಸಂದರ್ಭದಲ್ಲಿ ಬಿತ್ತನೆ ಮಾಡಿದ್ದು, ಚೆನ್ನಾಗಿ ಹುಟ್ಟಿ ಬಂದಿದೆ. 15 ದಿನಗಳಿಂದೀಚೆಗೆ ಮಳೆಯಾಗದೆ ಕೇವಲ ಮೋಡ ಕವಿದ ವಾತಾವರಣ ವಿರುವುದರಿಂದ ಹೊಲಗಳಲ್ಲಿ ಹದ ಕಡಿಮೆಯಾಗಿ ಗೊಬ್ಬರ ಹಾಕಲು ಅವಕಾಶ ಇಲ್ಲ . ಮೋಡ ವಿರುವುದರಿಂದ ರೋಗ ಎಡತಾಕದಂತೆ ಕ್ರಿಮಿನಾಶಕ ಸಿಂಪರಣೆಗೂ ಅವಕಾಶಇಲ್ಲ. ಹೊಲಗಳಲ್ಲಿ ಕಳೆ ಬೆಳೆದು ಬೆಳೆ ಮುಚ್ಚಿ ಹೋಗಿದೆ.

ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಕಪಕ್ಕದ ಹಳ್ಳಿಗಳಲ್ಲಿ ದೊರಕುವ ಅಲ್ಪ ಕೃಷಿ ಕಾರ್ಮಿಕರನ್ನು ನಿತ್ಯದ ಚಟುವಟಿಕೆಯಲ್ಲಿ ಬಳಸಿ ಕೊಳ್ಳುವುದರಿಂದ, ಇಮ್ಮಡಿ ಸಂಬಳ ಕೊಟ್ಟು ಕೆಲಸ ಮಾಡಿಸಿ ಕೊಳ್ಳಬೇಕಾಗಿದೆ. ಮನೆಯವರೆ ಕೆಲಸ ಮಾಡಿಕೊಂಡರೆ ಮಾತ್ರ ಅಲ್ಪಸ್ವಲ್ಪ ಲಾಭ ಕಾಣಬಹುದು. ಇಲ್ಲವಾದರೆ ಬೆಳೆ ಚೆನ್ನಾಗಿ ಬಂದರೂ ಲಾಭಾಂಶ ಕಡಿಮೆಯಾಗುತ್ತದೆ ಎನ್ನುತ್ತಾರೆ ರೈತರು.

ತಾಲ್ಲೂಕಿನಲ್ಲಿರುವ ಬಹುತೇಕ ಕೆರೆಗಳಲ್ಲಿ ನೀರಿಲ್ಲದೇ ಬಿಕೊ ಎನ್ನುತ್ತಿವೆ. ಸಮೃದ್ಧ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದರೆ ಮಾತ್ರ, ಈಗಾಗಲೇ ಬಿತ್ತನೆ ಮಾಡಿರುವ ಶುಂಠಿ, ಮುಸುಕಿನ ಜೋಳ ಬೆಳೆ ಹಸನಾಗಿ ಬೆಳೆದು ರೈತರಿಗೆ ವರದಾನವಾಗಲಿದೆ. ಇಲ್ಲವಾದರೆ ತೀವ್ರ ಸಂಕಷ್ಟ ಎದುರಾಗುವುದರಲ್ಲಿ ಸಂದೇಹವಿಲ್ಲ ಎಂಬುದು ರೈತರ ಅಳಲು.

ಮಳೆಯಾದರೆ ಉತ್ತಮ ಬೆಳೆ

ಮಾರುಕಟ್ಟೆಯಲ್ಲಿ ಬೆಲೆ ಚೆನ್ನಾಗಿದ್ದರಿಂದ ಅಧಿಕವಾಗಿ ಶುಂಠಿ ಬಿತ್ತನೆ ಮಾಡಿದ್ದಾರೆ. ಮೋಡ ಕವಿದ ವಾತಾವರಣವಿದ್ದರೆ ಬೆಳೆಗಳಿಗೆ ಅತಿಯಾಗಿ ರೋಗ ಬರುತ್ತದೆ. ಬಿಸಿಲು ಇದ್ದರೆ ಮಾತ್ರ ಕ್ರಿಮಿನಾಶಕ ಸಿಂಪಡಿಸಬಹುದು. 15 ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ಕೃಷಿ ಕೆಲಸ ಮಂಕಾಗಿದೆ. ಮಳೆಯಾಗಿ ಕೆರೆಗಳು ತುಂಬಿದರೆ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುತ್ತದೆ ಎನ್ನುವುದು ಮರಸುಹೊಸಳ್ಳಿ ರೈತ ಕೃಷ್ಣೇಗೌಡ ಹೇಳುವ ಮಾತು.

ಸದ್ಯದಲ್ಲೇ ಉತ್ತಮ ಮಳೆ

ಸದ್ಯದಲ್ಲೇ ಮಳೆಯಾಗುವ ಲಕ್ಷಣವಿದೆ. ಅತಿ ಹೆಚ್ಚು ರೈತರು ಶುಂಠಿ ಬೆಳೆದಿದ್ದಾರೆ. ಉಳಿದಂತೆ ಮುಸುಕಿನ ಜೋಳ ಬೆಳೆದಿದ್ದಾರೆ. ಮೋಡದ ವಾತಾವರಣ ಇರುವುದರಿಂದ ಬೆಳೆಗಳಿಗೆ ರೋಗ ಎದುರಾದ ಸಂದರ್ಭದಲ್ಲಿ ಕ್ರಿಮಿನಾಶಕ ಸಿಂಪಡಿಸಲು ಅಡಚಣೆಯಾಗುತ್ತದೆ. ಬಿಸಿಲು ವಾತಾವರಣ ಇದ್ದಾಗ ಮಾತ್ರ ಸಿಂಪಡಿಸಬೇಕು. ಅಗತ್ಯ ಕ್ರಿಮಿನಾಶಕ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ದೊರಕುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT