ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯದ ನೆಲದಲ್ಲಿ ಅರಳಿದ ಮತ್ತೆ ಕಮಲ

ವಿಜಯೋತ್ಸವ: ಕೇಸರಿ ರಂಗು ಮೂರನೇ ಬಾರಿ ಶಾಸಕರಾಗಿ ಸಿ.ಸಿ. ಪಾಟೀಲ ಆಯ್ಕೆ
Last Updated 16 ಮೇ 2018, 11:35 IST
ಅಕ್ಷರ ಗಾತ್ರ

ನರಗುಂದ: ಮತಕ್ಷೇತ್ರದಲ್ಲಿ ತೀವ್ರ ಕೂತೂಹಲ ಕೆರಳಿಸಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಂಡಾಯದ ನೆಲದಲ್ಲಿ ಮೂರನೇ ಬಾರಿಗೆ ಕಮಲ ಅರಳುವುದರ ಮೂಲಕ ಶಾಸಕರಾಗಿ ಸಿ.ಸಿ.ಪಾಟೀಲ ಆಯ್ಕೆಯಾದರು.

ತೀವ್ರ ಪೈಪೋಟಿ ಒಡ್ಡಿದ್ದ ಕಾಂಗ್ರೆಸ್‌ ಶಾಸಕ ಬಿ.ಆರ್‌.ಯಾವಗಲ್‌ ಪರಾಭವಗೊಳ್ಳುವ ಮೂಲಕ 6ನೇ ಬಾರಿ ಶಾಸಕರಾಗುವ ಕನಸು ಭಗ್ನಗೊಂಡಂತಾಯಿತು.

ಕಳೆದ ಬಾರಿ ಸೋಲನ್ನು ಅನುಭವಿಸಿದ್ದ ಸಿ.ಸಿ. ಪಾಟೀಲ ಅವರು ಮುನ್ನಡೆ ಸಾಧಿಸುತ್ತಲೇ ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಬೆಳಿಗ್ಗೆ 8 ಗಂಟೆಯಿಂದಲೇ ಪಟಾಕಿ ಸಿಡಿಸುವಿಕೆ, ಸಿಹಿ ಹಂಚುವಿಕೆ, ಯುವಕರ ಬೈಕ್ ರ‍್ಯಾಲಿ, ಪರಸ್ಪರ ಬಣ್ಣ ಎರಚುವಿಕೆ ಸೇರಿದಂತೆ ವಿಜಯೋತ್ಸವ ಸಂಭ್ರಮ ಮನೆ ಮಾಡಿತು.

ಮತ ಎಣಿಕೆ ಗದಗನಲ್ಲಿ ನಡೆದಿದ್ದರಿಂದ ಪಟ್ಟಣದಲ್ಲಿ ಗಲ್ಲಿಗಳಲ್ಲಿ ಫಲಿತಾಂಶ ಕೇಳುವ, ನೋಡುವ, ಚರ್ಚಿಸುವ ಕೂತುಹಲಕಾರಿ ಸನ್ನಿವೇಶಗಳು ಕಂಡುಬಂದವು. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಫಲಿತಾಂಶ ನಿಚ್ಚಳವಾಗುತ್ತಲೇ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಮುಖ ವೃತ್ತಗಳಲ್ಲಿ ಜಮಾಯಿಸುವ ಮೂಲಕ ಹರ್ಷ ಇಮ್ಮಡಿಗೊಳಿಸಿದರು.

ಸಿ.ಸಿ.ಪಾಟೀಲರ ಪತ್ನಿ, ಪುತ್ರರು, ಸೊಸೆಯಂದಿರು ಫಲಿತಾಂಶ ಪ್ರಕಟವಾಗುತ್ತಲೇ ತಮ್ಮ ಬೆಂಬಲಿಗರೊಂದಿಗೆ ಪ್ರತ್ಯೇಕ ಟ್ರ್ಯಾಕ್ಟರ್‌ಗಳಲ್ಲಿ ಪಟ್ಟಣದಲ್ಲಿ ಮೆರವಣಿಗೆ ಮೂಲಕ ವಿಜಯೋತ್ಸವ ಆಚರಿಸಿದರು.

ಸಂಜೆ 4 ಗಂಟೆಗೆ ಆಗಮನ: ಗದಗನ ಮತ ಎಣಿಕೆ ಕೇಂದ್ರದಿಂದ ಪಟ್ಟಣಕ್ಕೆ ಸಂಜೆ 4 ಗಂಟೆ ಸುಮಾರಿಗೆ ಬಂದ ಸಿ.ಸಿ.ಪಾಟೀಲರು ನೇರವಾಗಿ ದಂಡಾಪೂರದ ಗ್ರಾಮದೇವತೆ ಉಡಚಾಪರಮೇಶ್ವರಿ ದೇವಸ್ಥಾನಕ್ಕೆ ಬಂದು ದರ್ಶನ ಪಡೆದು ಸೇರಿದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ನಂತರ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡು ಜನತೆಗೆ ವಿಜಯದ ಸಂಕೇತ ತೋರಿಸಿ ಗೆಲುವಿನ ನಗೆ ಬೀರಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾರರಿಗೆ ಧನ್ಯವಾದ ಹೇಳಿದ್ದು ಕಂಡು ಬಂತು. ಮೆರವಣಿಗೆಯುದ್ದಕ್ಕೂ ವಾದ್ಯಮೇಳ ಹಾಗೂ ಧ್ವನಿವರ್ಧಕಗಳ ಶಬ್ದ ಜೋರಾಗಿ ಕಂಡು ಬಂತು.

ಇಡೀ ಪಟ್ಟಣ ಕೇಸರಿಮಯವಾಗಿ, ಎಲ್ಲೆಂದರಲ್ಲಿ ಬಿಜೆಪಿ ಧ್ವಜ ರಾರಾಜಿಸಿದ್ದು ಕಂಡು ಬಂತು. ಕಮಲ ಅರಳುವ ಮೂಲಕ ಮೂರನೇ ಬಾರಿಗೆ ಬಿಜೆಪಿ ಇಲ್ಲಿ ಗೆಲುವಿನ ನಗೆ ಬೀರಿದೆ.

ವಿಜಯೋತ್ಸವದಲ್ಲಿ ಉಮೇಶಗೌಡ ಪಾಟೀಲ, ಶೋಭಾ ಪಾಟೀಲ, ಉಮೇಶ ಕುಡೇನವರ, ಚಂದ್ರು ಪವಾರ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT