ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕಗಳಿಂದ ಡಾಂಬರು ಕಾಣದ ರಸ್ತೆ

ಗುಂಡಿಗಳಲ್ಲಿ ನಿತ್ಯ ಹರಸಾಹಸ: ಮನವಿಗೂ ಸ್ಪಂದಿಸದ ಆಡಳಿತ
Last Updated 7 ಜುಲೈ 2022, 5:01 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದಿಂದ ಮಲ್ಲಪ್ಪನಹಳ್ಳಿಗೆ ಹೋಗುವ ರಸ್ತೆಗೆ ಕೆಲವು ದಶಕಗಳಿಂದ ಡಾಂಬರ್‌ ಕಂಡಿಲ್ಲ. ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಈ ರಸ್ತೆಯಲ್ಲಿ ಹೋಗುವವರು ನಿತ್ಯ ಹರಸಾಹಸ ಮಾಡುವಂತಾಗಿದೆ. ಕೆಲವು ದಿನಗಳಿಂದ ಮೇಲಿಂದ ಮೇಲೆ ಮಳೆ ಬೀಳುತ್ತಿದೆ. ಗುಂಡಿಗಳಲ್ಲಿ ನೀರು ನಿಂತು ರಸ್ತೆ ಯಾವುದು ಎಂಬುದೇ ತಿಳಿಯದಂತಾಗಿದೆ.

ಗುಂಡಿ ಇರುವುದು ಕಾಣದೆ ಅನೇಕರು ಬಿದ್ದು ತೊಂದರೆ ಅನುಭವಿಸಿದ್ದಾರೆ. ಇದೇ ಮಾರ್ಗದಲ್ಲಿ ವಿದ್ಯುತ್‌ ನಗರ ಬಡಾವಣೆ ಇದೆ. ಬಡಾವಣೆ ಜನರು ಹತ್ತಾರು ಬಾರಿ ಶಾಸಕರು, ಪುರಸಭೆಯವರಲ್ಲಿ ಮನವಿ ಮಾಡಿದರೂ, ಸ್ಪಂದಿಸಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

‘ಈ ರಸ್ತೆ ಬಗ್ಗೆ ಅನೇಕ ಬಾರಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದರೂ ಪ್ರಯೋಜನವಾಗಿಲ್ಲ. ವಿದ್ಯುತ್ ನಗರ ಬಡಾವಣೆಯಲ್ಲಿ ಅನೇಕ ಮನೆಗಳು ಬಾಡಿಗೆಗೆ ಹಾಗೂ ಮಾರಾಟಕ್ಕಿದ್ದರೂ ಯಾರೂ ಕೊಳ್ಳಲು ಸಿದ್ಧರಿಲ್ಲ. ಇಲ್ಲಿಗೆ ಬರಲು ರಸ್ತೆಯೇ ಸರಿಯಲ್ಲ. ರೈಲ್ವೆ ಹಳಿ ದಾಟಿ ಬರಬೇಕು. ನಿತ್ಯ ಹಲವು ರೈಲುಗಳು ಓಡಾಡುತ್ತವೆ. ಕಡಿಮೆ ಬಾಡಿಗೆ ಕೊಡಿ ಎಂದು ಕೇಳಿದರೂ ಜನರು ಬರಲು ತಯಾರಿಲ್ಲ’ ಎನ್ನುತ್ತಾರೆ ಬಡಾವಣೆಯ ನಿವಾಸಿಗಳು.

‘ಕೆಲವು ತಿಂಗಳ ಹಿಂದೆ ಮಳೆ ಹೆಚ್ಚಾದಾಗ ಈ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಓಡಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು. ಆಗ ನಾನು ಬಡಾವಣೆಯ ಕೆಲವರ ಸಹಕಾರದಿಂದ ರಸ್ತೆ ಬದಿಯಲ್ಲಿ ಟ್ರಂಚ್ ಹೊಡಿಸಿ ನೀರು ನಿಲ್ಲದಂತೆ ಮಾಡಿದ್ದೆವು’ ಎನ್ನುತ್ತಾರೆ ಹರದನಹಳ್ಳಿಯ ಪುಟ್ಟರಾಜು.

‘ಈ ವಿದ್ಯುತ್ ನಗರ ಬಡಾವಣೆಯ ಜನರು ಹಾಗೂ ಮಲ್ಲಪ್ಪನಹಳ್ಳಿ ಜನರೂ ತೆರಿಗೆ ಕಟ್ಟುತ್ತಿದ್ದಾರೆ. ತೆರಿಗೆ ಕಟ್ಟಿಸಿಕೊಳ್ಳುವ ಪುರಸಭೆಯವರು ರಸ್ತೆಗೆ ಡಾಂಬಾರು ಹಾಕಿಸಿಲ್ಲ. ಈ ರಸ್ತೆ ಅಭಿವೃದ್ದಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ’ ಎಂದು ವಕೀಲ ಕೆ.ಆರ್. ಸುನಿಲ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT