ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಿಯಾ ಯೋಜನೆ

ಅತಿ ದೊಡ್ಡ ಬಯಲು ಶಿಲ್ಪಿ ಪ್ರದರ್ಶನ ವ್ಯವಸ್ಥೆ: ಅಧಿಕಾರಿಗಳ ಜತೆ ಡಿಸಿ ಚರ್ಚೆ
Last Updated 29 ಏಪ್ರಿಲ್ 2019, 14:40 IST
ಅಕ್ಷರ ಗಾತ್ರ

ಹಾಸನ: ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಪ್ರಗತಿ ಕುರಿತು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ವಿವಿಧ ಯೋಜನಾ ತಯಾರಿ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದರು.

ಬೇಲೂರಿನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಪಾರಂಪರಿಕ ಸ್ಪರ್ಶದೊಂದಿಗೆ ಪಟ್ಟಣದ ರಸ್ತೆ, ಕಟ್ಟಡಗಳ ಸೌಂದರ್ಯವೃದ್ಧಿ ಕುರಿತಂತೆ ನೀಲಿ ನಕಾಶೆ ತಯಾರಿ ಕುರಿತು ಜಿಲ್ಲಾಧಿಕಾರಿ, ಇಂಟೆಕ್ ಸಂಸ್ಥೆ ಪ್ರತಿನಿಧಿಗಳು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬೇಲೂರು ಚನ್ನಕೇಶವ ದೇವಾಲಯ, ವಿಷ್ಣು ಸಮುದ್ರ, ಪಟ್ಟಣದ ಪ್ರಮುಖ ಬೀದಿಗಳ ವಾಣಿಜ್ಯ ಮಳಿಗೆಗಳ ಅಭಿವೃದ್ದಿ ಸ್ವಚ್ಚತೆ, ದುರಸ್ತಿ, ಸೂಚನಾ ಫಲಕ, ಮಾರ್ಗಸೂಚಿಗಳನ್ನು ಅಳವಡಿಸುವ ಕುರಿತು ಚರ್ಚಿಸಿದ ಅವರು, ಶೀಘ್ರವೇ ಕ್ರಿಯಾಯೋಜನೆ ಸಿದ್ಧ ಪಡಿಸಿ ಸಲ್ಲಿಸುವಂತೆ ತಿಳಿಸಿದರು.

ಇದೇ ರೀತಿ ಹಳೇಬೀಡು ದೇವಾಲಯದ ಸೂಕ್ತ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಸುಮಾರು 3000 ಶಿಲ್ಪಿಗಳನೊಳ್ಳಗೊಂಡ ಅತಿ ದೊಡ್ಡ ಬಯಲು ಶಿಲ್ಪಿ ಪ್ರದರ್ಶನ ವ್ಯವಸ್ಥೆ ಮಾಡುವ ಕುರಿತು ಪ್ರಿಯಾಂಕ ಚರ್ಚೆ ನಡೆಸಿದರು.

ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕಿ ಕೆ.ಮೂರ್ತೇಶ್ವರಿ ಅವರು ಇಲಾಖೆ ವತಿಯಿಂದ ಕೈಗೊಳ್ಳಲು ಉದ್ದೇಶಿಸಿರುವ ಹಾಗೂ ಹಾಲಿ ಮಂಜೂರಾಗಿರುವ ಯೋಜನೆಗಳ ಬಗ್ಗೆ ವಿವರಿಸಿದರು.

ಸಕಲೇಶಪುರದ ಮಂಜರಬಾದ್ ಕೋಟೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ, ಪ್ರವಾಸಿ ವೀಕ್ಷಣಾ ಗೋಪುರ ನಿರ್ಮಾಣ, ರಸ್ತೆ ಕಾಮಗಾರಿ, ಪಾರ್ಕಿಂಗ್ ವ್ಯವಸ್ಥೆಗಳ ಬಗ್ಗೆ ಕೂಡ ಅಧಿಕಾರಿಗಳಿಂದ ಮಾಹಿತಿ ಪಡೆದು, ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಡಿಸಿ ಸೂಚಿಸಿದರು.

ಇದಲ್ಲದೆ ವಿವಿಧ ತಾಲ್ಲೂಕುಗಳಲ್ಲಿ ಈಗಾಗಲೇ ಮಂಜೂರಾಗಿರುವ ಹಲವು ಇಲಾಖೆಗಳ ಮೂಲಕ ನಡೆಯುತ್ತಿರುವ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಬಗ್ಗೆಯೂ ಪಡೆದರು.

ಈಗಾಗಲೇ ಹಣ ಬಿಡುಗಡೆಯಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಹಾಗೂ ಅದನ್ನು ನಿಯಮಾನುಸಾರ ಹಸ್ತಾಂತರಿಸಿ, ಪ್ರವಾಸೋದ್ಯಮ ಇಲಾಖೆ ಅನುದಾನದ ಬಗ್ಗೆ ಪ್ರದರ್ಶನ ಶಿಲೆಯಲ್ಲಿ ವಿವರ ನಮೂದಿಸಿ ಎಂದು ಹೇಳಿದರು.

ಅಲ್ಲದೇ, ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಸಕಲೇಶಪುರ ತಾಲ್ಲೂಕು ರಸ್ತೆಗಳ ಅಭಿವೃದ್ಧಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಹಲವು ನಿರ್ದೇಶನ ನೀಡಿದರು. ನಿಸರ್ಗಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಪ್ರವಾಸಿ ತಾಲ್ಲೂಕುಗಳ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡುವಂತೆ ಅವರು ಹೇಳಿದರು.

ಕೆ.ಆರ್.ಐ.ಡಿ.ಎಲ್, ಪುರಾತತ್ವ ಇಲಾಖೆ, ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಟಿ.ಬಿ ರಾಜು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT