ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೂ ಕೋಟಿ ಒಡೆಯರು

ಶಾಮನೂರು, ಮಲ್ಲಿಕಾರ್ಜುನ್, ರವೀಂದ್ರನಾಥ್, ಜಾಧವ್ ಆಸ್ತಿ ವಿವರ
Last Updated 21 ಏಪ್ರಿಲ್ 2018, 8:00 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿರುವ ವಿವಿಧ ಪಕ್ಷಗಳ ಮುಖಂಡರೆಲ್ಲರ ಆಸ್ತಿ ಕೋಟಿಗೆ ಮೀರಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆಸ್ತಿ ವಿವರ ಬಹಿರಂಗವಾಗಿದೆ.

ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ವಂತ ಮನೆ ಇಲ್ಲ, ಓಡಾಡಲು ಸ್ವಂತ ವಾಹನವೂ ಇಲ್ಲ.ಇವರಿಗೆ ಚರಾಸ್ತಿ ₹ 116.92 ಕೋಟಿ ಇದೆ. ಇದರಲ್ಲಿ ₹ 1.57 ಕೋಟಿಯಷ್ಟು ಆಭರಣಗಳಿವೆ. ನಗದು ₹ 18.39 ಲಕ್ಷ ಇಟ್ಟುಕೊಂಡಿದ್ದಾರೆ. ಬ್ಯಾಂಕ್‌, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ ಹಾಗೂ ಖಾಸಗಿ ಸಾಲ ನೀಡಿದ್ದು, ಒಟ್ಟು ₹ 103 ಕೋಟಿ ಇದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ವೊಂದರಲ್ಲೇ ₹ 48 ಕೋಟಿ ಸಾಲ ಪಡೆದಿದ್ದಾರೆ. ಒಟ್ಟು ಸಾಲ ₹ 63.47 ಕೋಟಿ ಇದೆ. ‌

ಶಾಮನೂರು ಹೆಸರಿನಲ್ಲಿ ₹ 36 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡಗಳಿವೆ. ₹ 30 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ಯಾವುದೇ ಕ್ರಿಮಿನಲ್‌ ಪ್ರಕರಣ ಶಾಮನೂರು ಮೇಲೆ ಇಲ್ಲ.

ಎಸ್‌ಎಸ್‌ಎಂ ₹ 113 ಕೋಟಿ ಆಸ್ತಿಯ ಒಡೆಯ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರ ಒಟ್ಟು ಆಸ್ತಿ ಮೌಲ್ಯ ₹ 113 ಕೋಟಿ. ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸಚಿವರು ಆಸ್ತಿಯ ವಿವರವನ್ನು ಸಲ್ಲಿಸಿದ್ದಾರೆ.

ಚರಾಸ್ತಿ ಎಷ್ಟು?: ಸಚಿವರ ಕೈನಲ್ಲಿ ₹ 1.47 ಲಕ್ಷ ನಗದು ಇದ್ದು, ಬ್ಯಾಂಕ್‌ ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ₹ 1.58 ಕೋಟಿ ನಗದು ಇದೆ. ಉಳಿದಂತೆ ಬಾಂಡ್ಸ್‌, ಡಿಬೆಂಜರ್ಸ್‌, ಎನ್‌ಎಸ್‌ಎಸ್‌, ಷೇರು ಖರೀದಿ ಸೇರಿದಂತೆ ಹಲವು ಹೂಡಿಕೆ ಯೋಜನೆಗಳಲ್ಲಿ ₹ 74.33 ಕೋಟಿ ಮೌಲ್ಯದ ಬಂಡವಾಳ ಹಾಕಿದ್ದಾರೆ.

ಚಿನ್ನದ ಮೇಲೆ ಮೋಹ: ಮಲ್ಲಿಕಾರ್ಜುನ ಅವರ ಬಳಿ 14 ಕೆ.ಜಿ. 450 ಗ್ರಾಂನಷ್ಟು ಬಂಗಾರವಿದ್ದರೆ, ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರ ಬಳಿ 3 ಕೆ.ಜಿ. 300 ಗ್ರಾಂ ಬಂಗಾರವಿದೆ.

ಸಚಿವರಿಗೂ ಸಾಲ: ಸಚಿವರು ಬ್ಯಾಂಕ್‌ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಸುಮಾರು ₹ 23.25 ಕೋಟಿ ಸಾಲ ಪಡೆದಿದ್ದಾರೆ.‌

ಸ್ಥಿರಾಸ್ತಿ ಎಷ್ಟು?: ₹ 5.48 ಕೋಟಿ ಮೌಲ್ಯದ ಕೃಷಿ ಭೂಮಿ ಹೊಂದಿರುವ ಸಚಿವರು, ₹ 15.28 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ₹ 1.38 ಕೋಟಿ ಮೌಲ್ಯದ ವಾಣಿಜ್ಯ ಮಳಿಗೆಗಳು, ₹ 9.20 ಕೋಟಿ ಮೌಲ್ಯದ ವಾಸದ ಮನೆಗಳ ಒಡೆಯರಾಗಿದ್ದಾರೆ. ಒಟ್ಟಾರೆ ₹ 31.36 ಕೋಟಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ ಮಾಲೀಕರಾಗಿದ್ದಾರೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ.

ಕಾರು ಇಲ್ಲ: ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಸಚಿವರು ಯಾವುದೇ ವಾಹನಗಳನ್ನು ಹೊಂದಿಲ್ಲ. ಜತೆಗೆ ಸರ್ಕಾರಕ್ಕೆ ಪಾವತಿಸಬೇಕಾದ ಯಾವುದೇ ಬಾಕಿಯನ್ನು ಉಳಿಸಿಕೊಂಡಿಲ್ಲ.ಸಚಿವರು ವೃತ್ತಿಯಲ್ಲಿ ರಾಜಕಾರಣಿಯಾಗಿದ್ದರೂ ಇಂಡಿ ಯನ್‌ ಕೇನ್‌ ಪವರ್ ಲಿಮಿಟೆಡ್‌ ಕಂಪೆನಿಯ ಅಧ್ಯಕ್ಷರೂ ಹೌದು. ಪತ್ನಿ ಇದೇ ಕಂಪೆನಿಯಲ್ಲಿ ನಿರ್ದೇಶಕರಾಗಿದ್ದಾರೆ. ಎಂಎಸ್‌ಬಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಸಚಿವರು ಬಿ.ಕಾಂ ಪದವಿ ಪಡೆದಿದ್ದಾರೆ.ಎಸ್‌.ಎ. ರವೀಂದ್ರನಾಥ್‌ ₹ 6.18 ಕೋಟಿ ಆಸ್ತಿ: ಬಿಜೆಪಿ ಮುಖಂಡ ಎಸ್‌.ಎ. ರವೀಂದ್ರನಾಥ್‌ ಸುಮಾರು ₹ 6.18 ಕೋಟಿ ಆಸ್ತಿ ಹೊಂದಿದ್ದಾರೆ. ಚರಾಸ್ತಿ ₹ 89.68 ಲಕ್ಷ ಇದ್ದರೆ, ಸ್ಥಿರಾಸ್ತಿ ₹ 4.69 ಕೋಟಿ ಇದೆ. ಹೆಂಡತಿ ರತ್ನಮ್ಮ ಬಳಿ ₹ 3.17 ಲಕ್ಷ ಚರಾಸ್ತಿ, ಸ್ಥಿರಾಸ್ತಿ ₹ 56.47 ಲಕ್ಷ ಇದೆ. ಇಬ್ಬರ ಆಸ್ತಿ ₹ 6.18 ಆಗುತ್ತದೆ.ಮಗನ ಬಳಿ ₹ 61.18 ಲಕ್ಷ ಚರಾಸ್ತಿ, ಸ್ಥಿರಾಸ್ತಿ ₹ 1.96 ಕೋಟಿ ಇದೆ. ಸೊಸೆ ಬಳಿ ₹ 2 ಲಕ್ಷ ಚರಾಸ್ತಿ ಇವೆ. ರವೀಂದ್ರನಾಥ್‌ ಹೆಸರಲ್ಲಿ ₹ 70 ಸಾವಿರ ಸಾಲ ಇದೆ. ಮಗನ ಹೆಸರಿನಲ್ಲಿ ₹ 86.38 ಲಕ್ಷ ಸಾಲ ಇದೆ. ರವೀಂದ್ರನಾಥ್‌ ಬಳಿ ₹ 45 ಲಕ್ಷ ಮೌಲ್ಯದ ಚಿನ್ನಾಭರಣ, ಹೆಂಡತಿ ಬಳಿ ₹ 2.40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಮಗ–ಸೊಸೆ ಬಳಿ ₹ 25.80 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ. ಅಲ್ಲದೇ, ಇಡೀ ಕುಟುಂಬದ ಬಳಿ ₹ 11 ಕೆ.ಜಿ. ಬೆಳ್ಳಿ ಆಭರಣಗಳಿವೆ.ರವೀಂದ್ರನಾಥ್‌ಗೆ ಓಡಾಡಲು ಇನೊವಾ ಕಾರು ಇದೆ. ಮಗನ ಹೆಸರಿನಲ್ಲಿ ಮಹೀಂದ್ರಾ ಸ್ಕಾರ್ಪಿಯೊ, ಟಿ.ವಿ.ಎಸ್‌. ಅಕ್ಸ್‌ಸ್‌, ಹಿರೋ ಹೋಂಡಾ ಫ್ಯಾಷನ್‌ ಬೈಕ್ ಇವೆ.

ಜಾಧವ್ ಬಳಿ ₹ 1.61 ಕೋಟಿ ಆಸ್ತಿ:
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಬಳಿ ₹ 61.27 ಲಕ್ಷ ಚರಾಸ್ತಿ ಇದೆ. ಪತ್ನಿ ಬಳಿ ₹ 27.89 ಲಕ್ಷ  ಮೌಲ್ಯ ಹಾಗೂ ಮಗನ ಬಳಿ ₹ 18.83 ಲಕ್ಷ ಮೌಲ್ಯದ ಚರಾಸ್ತಿ ಇದೆ. ₹ 1 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಬಳಿಯೂ ₹ 40 ಲಕ್ಷ ಸ್ಥಿರಾಸ್ತಿ ಇದೆ. ಜಾಧವ್‌ಗೆ ಸುಮಾರು ₹ 42 ಲಕ್ಷ ಸಾಲ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT