ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು: ಸತ್ಯ, ಧರ್ಮ ರಕ್ಷಿಸುವ ಕವಚ ರಂಭಾಪುರಿ ಪೀಠ

ಸಮ್ಮೇಳನದಲ್ಲಿ ಪ್ರಸನ್ನ ರೇಣುಕ ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಮತ
Last Updated 3 ಅಕ್ಟೋಬರ್ 2022, 4:22 IST
ಅಕ್ಷರ ಗಾತ್ರ

ಬೇಲೂರು (ಮಾನವಧರ್ಮ ಮಂಟಪ): ‘ಸತ್ಯವೂ ಒಂದು ಧರ್ಮವಾಗಿದೆ. ಮೌಲ್ಯಾಧಾರಿತ ಚಿಂತನೆಗಳ ಮುಖಾಂತರ ಸತ್ಯದ ದಾರಿ ಕಂಡುಕೊಳ್ಳಬೇಕಾಗಿದೆ’ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೇಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ದಸರಾ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮೌಲ್ಯಾಧಾರಿತ ಚಿಂತನೆಗಳು ಬದುಕನ್ನು ಹಸನಾಗಿಸುತ್ತವೆ. ಭಕ್ತರಲ್ಲಿ ಮೌಲ್ಯ ಹೆಚ್ಚಿಸುವಲ್ಲಿ ದುಡಿಯುತ್ತಿರುವ ರಂಭಾಪುರಿ ಪೀಠದ ಜಗದ್ಗುರುಗಳು ಧರ್ಮ ರಕ್ಷಿಸುವ ಕವಚದಂತೆ ಧರ್ಮ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ’ ಎಂದರು.

‘ಮನುಷ್ಯನಿಗೆ ಶಾಸ್ತ್ರ ಇಲ್ಲವೇ ಶಸ್ತ್ರದ ಭಯ ಇರಬೇಕು. ಆಗ ಮಾತ್ರ ಉತ್ತಮ ಜೀವನದತ್ತ ಹೆಜ್ಜೆ ಹಾಕಲು ಸಾಧ್ಯ. ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆ ಯುವ ಗುರಿ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನು ಭಾವರ ಕರ್ತವ್ಯವಾಗಿದೆ’ ಎಂದರು.

‘ದಕ್ಷ, ಪ್ರಾಮಾಣಿಕತೆಗೆ ಹೆಸರಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಹಾಗೂ ಅಹಿಂಸಾ ತತ್ವ ಸಾರಿದೆ ಗಾಂಧಿ ಜಯಂತಿ ಒಂದೇ ದಿನ ಬಂದಿರುವುದು ಸಂತಸದ ವಿಚಾರ. ಜೈ ಜವಾನ್‌ ಜೈ ಕಿಸಾನ್‌ ಎಂಬ ಶಾಸ್ತ್ರಿ ಅವರ ಘೋಷಣೆ ದೇಶ ಬಾಂಧವರಿಗೆ ಸ್ಫೂರ್ತಿಯಾಗಬೇಕು’ ಎಂದು ಸ್ವಾಮೀಜಿ ನುಡಿದರು.

ಸೂಡಿ ಜುಕ್ತಿ ಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ವೀರಶೈವ ಧರ್ಮ ಪರಂಪರೆಯನ್ನು ಬೆಳೆಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಅವರು ಸಮ್ಮೇಳನದ ಮುಖಾಂತರ ಧರ್ಮದ ದಿಗ್ವಿಜಯ ಯಾತ್ರೆ ಕೈಗೊಂಡಿದ್ದಾರೆ’ ಎಂದರು.

ನೆಗಳೂರು ಹಿರೇಮಠದ ಗುರು ಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಪರಿಸರ ಸಂರಕ್ಷಣೆ ಹಾಗೂ ಗಾಂಧೀಜಿ ವಿಚಾರಧಾರೆ ಕುರಿತು ಚಿತ್ರದುರ್ಗದ ಎಚ್.ಕೆ.ಎಸ್. ಸ್ವಾಮಿ ಉಪನ್ಯಾಸ ನೀಡಿದರು.

ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ಎಂ.ಎಸ್.ದಿವಾಕರ ಅವರಿಗೆ ‘ಸಾಧನ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾನಹಳ್ಳಿ ವೇದಶ್ರೀ ಕೆ.ಜಿ. ಭರತ ನಾಟ್ಯ ಪ್ರದರ್ಶಿಸಿದರು. ರೇಣುಕಾ ಚಾರ್ಯ ಗುರುಕುಲದ ಸಾಧಕರು ವೇದಘೋಷ ಮೊಳಗಿಸಿದರು. ಗದಗಿನ ಗಾನಭೂಷಣ ವೀರೇಶ ಕಿತ್ತೂರ ಸಂಗೀತ ಸುಧೆ ಹರಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಪ್ರೀತಂಗೌಡ, ಧರ್ಮ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಎಸ್.ಲಿಂಗೇಶ್, ಕಾರ್ಯಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಎಚ್.ಎಸ್.ಸತೀಶ್ ಹಳೇಬೀಡು, ಬಿಜೆಪಿ ಮಹಿಳಾ ಘಟಕ ಕೋಶಾಧ್ಯಕ್ಷೆ ಸುರಭಿ ರಘು, ಜಿಲ್ಲಾ ಘಟಕ ಅಧ್ಯಕ್ಷ ಹುಲ್ಲಳ್ಳಿ ಸುರೇಶ್, ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಬೆಣ್ಣೂರು ರೇಣುಕುಮಾರ್, ಕೆಆರ್‌ಡಿಎಲ್ ಉಪಾಧ್ಯಕ್ಷ ಜಿವಿಟಿ ಬಸವರಾಜು, ವೀರಶೈವ ಮಹಾಸಭಾ ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ವಿಕ್ರಮ್ ಕೌರಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷ ನಂದ ಕುಮಾರ್, ಟಿ.ವೈ.ನೀಲಕಂಠ, ಉಮಾಶಂಕರ್ ಇದ್ದರು.

ಬಿಜೆಪಿ ಬೇಲೂರು ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಸ್.ಆನಂದ ಕುಮಾರ್ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ, ಸವಣೂರಿನ ಗುರು ಪಾದಯ್ಯ ಸಾಲಿಮಠ ನಿರೂಪಿಸಿದರು.

‘ಧರ್ಮ, ವಿಜ್ಞಾನ ಪೂರಕವಾಗಿರಲಿ’

‘ವಿಜ್ಞಾನ, ನಾಗರಿಕತೆ, ರಾಜಕೀಯ ಸಂಘರ್ಷದಲ್ಲಿ ಎಂದಿಗೂ ಧರ್ಮ ನಾಶವಾಗ ಬಾರದು. ಧರ್ಮ ಹಾಗೂ ವಿಜ್ಞಾನಗಳ ಸಾಮರಸ್ಯದಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಧರ್ಮದಲ್ಲಿ ಮಾರ್ಗ ವಿದ್ದರೆ, ವಿಜ್ಞಾನದಲ್ಲಿ ವೇಗವಿದೆ. ವೇಗ ಇಲ್ಲದಿದ್ದರೆ ಜಡತ್ವ, ಮಾರ್ಗ ಇಲ್ಲದಿದ್ದರೆ ಅಧರ್ಮಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಧರ್ಮ, ವಿಜ್ಞಾನ ಪರಸ್ಪರ ಪೂರಕವಾಗಿ ಕೆಲಸ ಮಾಡ ಬೇಕಿದೆ’ ಎಂದು ರಂಭಾಪುರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT