ಶುಕ್ರವಾರ, ಸೆಪ್ಟೆಂಬರ್ 17, 2021
24 °C
ವಿವಿಧ ಇಲಾಖೆ ಅಧಿಕಾರಿಗಳ ಸಭೆ

ರಸ್ತೆ ಸುರಕ್ಷತೆ: ‘ಸುಪ್ರೀಂ’ ನಿರ್ದೇಶನ ಪಾಲನೆ ಮಾಡಿ: ಪ್ರಿಯಾಂಕ ಮೇರಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಸ್ತೆ ಸುರಕ್ಷತಾ ಕ್ರಮಗಳ ಜಾರಿ ಸಂಬಂಧ ಸುಪ್ರೀಂ ಕೋರ್ಟ್ ನಿರ್ದೇಶನಗಳ ಪಾಲನೆಗೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ವ್ಯಾಪಿ ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ಸಾರ್ವಜನಿಕ ಮಾಹಿತಿ, ಜಾಗೃತಿ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯಬೇಕು ಎಂದರು.

ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡುವ ಪ್ರದರ್ಶನ ಫಲಕಗಳನ್ನು ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಬೇಕು. ನಿರಂತರ ಅರಿವಿನ ಚಟುವಟಿಕೆಗಳು ನಡೆಯಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿಯಲ್ಲಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಷ್ಟೀಯ ಹೆದ್ದಾರಿ ಇಲಾಖೆಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಅವರು ಹೇಳಿದರು.

ಅನಗತ್ಯ ರಸ್ತೆ ಉಬ್ಬುಗಳನ್ನು ತೆಗೆಯುವುದು, ಅಪಾಯಕಾರಿ ಆಗಿರುವ ಹಾಗೂ ಹೆಚ್ಚು ಅಪಘಾತಗಳು ನಡೆದಿರುವ ಸ್ಥಳಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ ಪ್ರಿಯಾಂಕ, ಸುರಕ್ಷತಾ ಕ್ರಮಗಳಿಗೆ ಅಗತ್ಯವಿರುವ ಅನುದಾನದ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು.

ಮಕ್ಕಳನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿ ಶಾಲೆಗಳ ಆಡಳಿತ ಮಂಡಳಿಯದ್ದಾಗಿದೆ. ಇದಕ್ಕೆ ಅಗತ್ಯ ಬಸ್, ಕ್ಯಾಬ್‍ಗಳನ್ನು ನಿಯೋಜಿಸಬೇಕು. ಖಾಸಗಿ ವಾಹನಗಳಲ್ಲಿ ಬರುವ ಮಕ್ಕಳಿಗೆ, ಪೋಷಕರಿಗೆ ಅರಿವು ಮೂಡಿಸಿ ಸುರಕ್ಷತಾ ಕ್ರಮಗಳ ಕುರಿತು ಹೇಳಬೇಕು ಈ ಬಗ್ಗೆ ಶಿಕ್ಷಣ ಇಲಾಖೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ಕರೆದು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಯಾವುದೇ ಶಾಲಾ ಮಕ್ಕಳು ಗೂಡ್ಸ್ ವಾಹನದಲ್ಲಿ ಬಾರದಂತೆ ಗಮನ ವಹಿಸಬೇಕು. ಮಾರುತಿ ವ್ಯಾನ್‍ಗಳ ನಿಯಮ ಬಾಹಿರವಾಗಿ ಹೆಚ್ಚಿನ ಮಕ್ಕಳನ್ನು ತುಂಬಿಕೊಂಡು ಬರುವುದನ್ನು ಕಡಿವಾಣ ಹಾಕಬೇಕು ಎಂದು ಅವರು ಹೇಳಿದರು.

ಗಾರ್ಮೆಂಟ್‌ ಹಾಗೂ ಇತರೆ ಕಾರ್ಖಾನೆಗಳಿಗೆ ಬರುವ ಕಾರ್ಮಿಕರಿಗೆ ಸುರಕ್ಷತೆ ಸಾರಿಗೆ ವ್ಯವಸ್ಥೆ ದೊರೆಯಬೇಕು. ಈ ಬಗ್ಗೆ ಸಾರಿಗೆ, ಕಾರ್ಮಿಕ ಮತ್ತು ಕೈಗಾರಿಕಾ ಇಲಾಖೆಗಳು ಜಂಟಿಯಾಗಿ ಕಾರ್ಖಾನೆ ಮುಖ್ಯಸ್ಥರು ಹಾಗೂ ಕಾರ್ಮಿಕ ಮುಖ್ಯಸ್ಥರ ಸಭೆ ನಡೆಸಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಇದೇ ರೀತಿ ಅಸಂಘಟಿತ ಕಾರ್ಮಿಕರ ಸಾಗಾಟ ಬಗ್ಗೆಯೂ ವ್ಯವಸ್ಥಿತ ಅರಿವು ಮತ್ತು ಸೂಕ್ತ ಸಾರಿಗೆ ಸಂಪರ್ಕ ಯೋಜನೆ ರೂಪಿಸಬೇಕು. ಅಲ್ಲದೆ ಶಾಲಾ ಅವಧಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳನ್ನು ಹೆಚ್ಚುವರಿಯಾಗಿ ಓಡಿಸುವ ಬಗ್ಗೆಯೂ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರು ಕೈಗೊಳ್ಳಬಹುದಾದ ರಸ್ತೆ ಸುರಕ್ಷತಾ ಕ್ರಮಗಳ ಹಾಗೂ ಅರಿವಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್ ಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಮಂಜು, ಕಾರ್ಮಿಕ ಅಧಿಕಾರಿ ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜನಾಥ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು