ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸ್ವಚ್ಛ ನೀರು ಕುಡಿಸುತ್ತಿರುವ ಶುದ್ಧ ನೀರಿನ ಘಟಕಗಳು

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಉತ್ತಮ ನಿರ್ವಹಣೆ: ಸ್ಥಳೀಯಾಡಳಿತ, ಸಂಘ–ಸಂಸ್ಥೆಗಳ ಉಸ್ತುವಾರಿ
Last Updated 25 ಜುಲೈ 2022, 5:08 IST
ಅಕ್ಷರ ಗಾತ್ರ

ಹಾಸನ: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಆರಂಭಿಸಲಾದ ಘಟಕಗಳಲ್ಲಿ ಹಲವು ಉತ್ತಮ ಸೇವೆ ನೀಡುತ್ತಿದ್ದರೆ, ಕೆಲವೆಡೆ ದುರಸ್ತಿಗೆ ಎದುರು ನೋಡುತ್ತಿವೆ.

ಹಾಸನ ನಗರದಲ್ಲಿ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಸ್ಥಳೀಯ ಶಾಸಕ ಪ್ರೀತಂ ಗೌಡ ಮುತುವರ್ಜಿ ವಹಿಸಿದ್ದು, ಪ್ರತಿ ಘಟಕದಲ್ಲೂ ಶುದ್ಧ ಕುಡಿಯುವ ನೀರು ನಿರಂತರವಾಗಿ ದೊರೆಯುತ್ತದೆ. ಒಂದು ಘಟಕದಲ್ಲಿ ನಿತ್ಯ 20 ಸಾವಿರ ಲೀಟರ್‌ ನೀರು ದೊರೆಯುತ್ತದೆ.

ನಗರಸಭೆಯಿಂದ ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಶುದ್ಧ ಕುಡಿಯುವ ನೀರು ಅಗತ್ಯ ಇರುವವರು ಮಾತ್ರ ಈ ಘಟಕಗಳಲ್ಲಿ ನೀರು ಪಡೆಯುತ್ತಾರೆ. ಉಳಿದಂತೆ ಅಕ್ಕಪಕ್ಕದ ಅಂಗಡಿಯವರು, ಹೋಟೆಲ್‌ನವರಿಗೆ ಈ ಘಟಕಗಳು ಸಂಜೀವಿನಿಯಾಗಿ ಪರಿಣಮಿಸಿವೆ.

ಶ್ರವಣಬೆಳಗೊಳ ಹೋಬಳಿ ವ್ಯಾಪ್ತಿಯಲ್ಲಿ 7 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 19 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೊಂದಿವೆ. ಒಂದನ್ನು ಹೊರತುಪಡಿಸಿ ಉಳಿದಂತೆ 18 ಉತ್ತಮ ಸೇವೆಯನ್ನು ಒದಗಿಸುತ್ತಿವೆ.

‘ಈ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಮುಂಜಾಗ್ರತೆಯಾಗಿ ಕೆರೆಕಟ್ಟೆಗಳಿಗೆ ನೀರನ್ನು ತುಂಬಿಸಿದ್ದರಿಂದ ಜಾನುವಾರು ಮತ್ತು ಜನತೆಗೆ ಕುಡಿಯುವ ನೀರಿನಿಂದ ಯಾವುದೇ ರೀತಿಯ ಸಮಸ್ಯೆ ಆಗಿರುವುದಿಲ್ಲ’ ಎಂದು ನಿವೃತ್ತ ಶಿಕ್ಷಕ ಚಲ್ಯಾದ ಹೊನ್ನೇಗೌಡ ತಿಳಿಸಿದರು.

ಶ್ರವಣಬೆಳಗೊಳ ಪಟ್ಟಣ ವ್ಯಾಪ್ತಿಯಲ್ಲಿ 2 ಘಟಕಗಳು ಪಂಚಾಯಿತಿ ನಿರ್ವಹಿಸುತ್ತಿವೆ. ಇನ್ನೆರಡು ಖಾಸಗಿ ಒಡೆತನವಿದ್ದು, ಸರ್ಕಾರ ನಿಗದಿ ಪಡಿಸಿದ ದರದಲ್ಲಿ ನೀರನ್ನು ಕೊಡುತ್ತಿದ್ದಾರೆ. ಕಾಂತರಾಜಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂತರಾಜಪುರ, ಅಜ್ಜೇನಹಳ್ಳಿ, ವಡ್ಡರಹಳ್ಳಿ ತಲಾ ಒಂದರಂತೆ 3, ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿ ಕಬ್ಬಾಳುವಿನಲ್ಲಿ 1, ಸುಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಡಹಳ್ಳಿ, ಪರಮ, ಹೊಸಹಳ್ಳಿ, ಕುಂಭೇನಹಳ್ಳಿ ತಲಾ ಒಂದರಂತೆ 4, ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜುಟ್ಟನಹಳ್ಲಿ, ದಡಿಘಟ್ಟ, ಹುಳಿಯಾರು, ಚಲ್ಯಾ ಒಂದರಂತೆ 4, ಬೆಕ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಕ್ಕ, ಬಿ.ಚೋಳೇನಹಳ್ಳಿ, ರಾಚೇನಹಳ್ಳಿಯಲ್ಲಿ ತಲಾ ಒಂದರಂತೆ 3, ದಮ್ಮನಿಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಮ್ಮನಿಂಗಲ, ಕೊತ್ತನಘಟ್ಟದಲ್ಲಿ ತಲಾ ಒಂದರಂತೆ 2 ಶುದ್ಧ ಕುಡಿಯುವ ನೀರಿನ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.

‘ಶ್ರವಣಬೆಳಗೊಳದ ಎಪಿಎಂಸಿ ಯಾರ್ಡ್‌ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ನಿರ್ವಹಣೆ ಇಲ್ಲದೇ ಘಟಕದ ಸುತ್ತ ಗಿಡಗಂಟೆಗಳಿಂದ ಆವೃತಗೊಂಡಿದೆ. ಘಟಕ ಇದ್ದರೂ ಇಲ್ಲದಂತೆ ಆಗಿದೆ’ ಎನ್ನುತ್ತಾರೆ ರೈತ ಮುಖಂಡ ದಡಿಘಟ್ಟದ ಮಂಜೇಗೌಡ.

ಅರಸೀಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಕೆಲವೆಡೆ ಸಮರ್ಪಕ ನಿರ್ವಹಣೆ ಇಲ್ಲದೇ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿ ಇಲ್ಲದಿರುವುದರಿಂದ ಕೆಲವು ಗ್ರಾಮಗಳ ಜನರು ಅಕ್ಕಪಕ್ಕದ ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಕುಡಿಯುವ ನೀರು ತರುವ ಪರಿಸ್ಥಿತಿ ಇದೆ.

ತಾಲ್ಲೂಕಿನ ಕೆಲವೆಡೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಿರ್ವಹಣೆ ಆಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ನಿರ್ವಹಣೆ ಆಗುತ್ತಿರುವುದರಿಂದ ಅಂತಹ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿಲ್ಲ.

ಅರಸೀಕೆರೆ ನಗರದಲ್ಲಿ ನಗರಸಭೆ ಅಥವಾ ಜನಪ್ರತಿನಿಧಿಗಳಿಂದ ಯಾವುದೇ ಶುದ್ಧ ಕುಡಿಯುವ ನೀರಿನ ಘಟಕಗಳು ತೆರೆದಿಲ್ಲ. ಬೆರಳೆಣಿಕೆಯಷ್ಟು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಉಳಿದಂತೆ ನಗರದ ಬಹುತೇಕ ಜನರು ಹೇಮಾವತಿ ನದಿ ನೀರನ್ನೇ ಅವಲಂಬಿಸಿದ್ದಾರೆ.

ಇತ್ತೀಚೆಗೆ ಜಲಜೀವನ್ ಮಿಷನ್ ಯೋಜನೆಯಡಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿ ಮುಗಿದಿದ್ದರೂ ಇನ್ನೂ ನೀರಿನ ಸಂಪರ್ಕ ಹಾಗೂ ಪೂರೈಕೆಯಾಗದೇ ಸಾರ್ವಜನಿಕರು ನೀರು ಬರುವ ನಿರೀಕ್ಷೆಯಲ್ಲಿದ್ದಾರೆ.

‘ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಕೆಲವು ದಿನಗಳ ಕಾಲ ನೀರು ದೊರೆತರೆ, ಉಳಿದಂತೆ ಹೆಚ್ಚು ದಿನಗಳ ಕಾಲ ಕುಡಿಯಲು ನೀರು ಸಿಗದೆ ಪಕ್ಕದ ಚಿಕ್ಕೂರು ಹಾಗೂ ಬಿಸಿಲೇಹಳ್ಳಿ ಗ್ರಾಮಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯೂರು ಗ್ರಾಮಸ್ಥರೊಬ್ಬರ ಅಳಲಾಗಿದೆ.

ಹಿರೀಸಾವೆ ಹೋಬಳಿಯ ಎಲ್ಲ ಪಂಚಾಯಿತಿ ವ್ಯಾಪ್ತಿಯಿಂದ 13 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ವಿವಿಧ ಖಾಸಗಿ ಸಂಸ್ಥೆಗಳು ಬಹುತೇಕ ಘಟಕಗಳ ನಿರ್ವಹಣೆ ಮಾಡುತ್ತಿವೆ.

ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆಲವು ಹಳ್ಳಿಗಳಲ್ಲಿ ಹೊಸ ಘಟಕ ಸ್ಥಾಪನೆಗೆ ಬೇಡಿಕೆ ಇದೆ. ಹಿರೀಸಾವೆ ಹೋಬಳಿ ಕೇಂದ್ರದಲ್ಲಿ ಇನ್ನೊಂದು ಘಟಕ ಸ್ಥಾಪನೆ ಮಾಡಲು ಸಾರ್ವಜನಿಕರು ಹಲವು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ, ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿಲ್ಲ.

ಮತಿಘಟ್ಟ ಪಂಚಾಯಿತಿ ವ್ಯಾಪ್ತಿಯ ಬಿ.ಜಿ. ಕೊಪ್ಪಲಿನಲ್ಲಿ ಹೊಸ ಘಟಕದ ಕಾಮಗಾರಿ 2 ವರ್ಷದ ಹಿಂದೆ ಪ್ರಾರಂಭವಾಗಿದ್ದರೂ ಇದುವರೆಗೆ ಪೂರ್ಣವಾಗಿಲ್ಲ.

‘ಚನ್ನರಾಯಪಟ್ಟಣದಲ್ಲಿ ಒಟ್ಟು 7 ಶುದ್ದ ಕುಡಿಯುವ ನೀರಿನ ಘಟಕಗಳಿವೆ. ಒಂದು ನೀರಾವರಿ ಇಲಾಖೆಯಿಂದ, ಉಳಿದವುಗಳು ಸಂಘ, ಸಂಸ್ಥೆಗಳ ನೆರವಿನೊಂದಿಗೆ ನಡೆಯುತ್ತಿದೆ.

ಶುದ್ದ ಕುಡಿಯುವ ನೀರಿನ ಘಟಕ ಅಳವಡಿಸಲು ಪುರಸಭೆ ಜಾಗ ನೀಡಿದೆ. ಉಸ್ತುವಾರಿ ನೋಡಿಕೊಳ್ಳುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕಗಳಿಂದ ಪಟ್ಟಣದ ಜನರಿಗೆ ಅನುಕೂಲವಾಗಿದೆ. ಪಟ್ಟಣದ ವಳಗೇರಮ್ಮ ದೇವಸ್ಥಾನದ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ಮುಂದೆ ಬಂದಿದೆ. ಅದಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಪುರಸಭೆಯ ಮುಖ್ಯಾಧಿಕಾರಿ ಎಚ್.ಟಿ. ಕೃಷ್ಣಮೂರ್ತಿ ತಿಳಿಸಿದರು.

ಆಲೂರು ಪಟ್ಟಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಒಂದು ಮತ್ತು ಪಟ್ಟಣ ಪಂಚಾಯಿತಿಯಿಂದ ಎರಡು ಶುದ್ಧ ಕುಡಿಯುವ ಕೇಂದ್ರಗಳನ್ನು ತೆರೆಯಲಾಗಿದೆ.

ಎರಡು ಕೇಂದ್ರಗಳು ಚಾಲ್ತಿಯಲ್ಲಿವೆ. ಆಸ್ಪತ್ರೆ ಮುಂಭಾಗದಲ್ಲಿರುವ ಕುಡಿಯುವ ಶುದ್ಧ ನೀರು ಘಟಕ ದುರಸ್ತಿಗೊಳಗಾಗಿ ವರ್ಷಗಳೆ ಕಳೆದವು. ಬಸ್ ನಿಲ್ದಾಣ ಪಕ್ಕದಲ್ಲಿ ಇರುವುದರಿಂದ ಹೆಚ್ಚು ಜನರು ಸೇರುವ ಕೇಂದ್ರ ಇದಾಗಿದ್ದು, ಕುಡಿಯುವ ನೀರು ದೊರಕದಂತಾಗಿದೆ.

ಬಹುತೇಕ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜನಸಂದಣಿ ಹೆಚ್ಚಾಗಿರುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ಕೇಂದ್ರಗಳನ್ನು ತೆರೆಯಲಾಗಿದೆ. ಜನಸಾಮಾನ್ಯರು ಉಪಯೋಗಿಸುತ್ತಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸುತ್ತಾರೆ.

ಬೇಲೂರು ಪಟ್ಟಣದಲ್ಲಿ ಪುರಸಭೆಯಿಂದ ಪುರಸಭಾ ಆವರಣದಲ್ಲಿ ಮತ್ತು ಚನ್ನಕೇಶವ ದಾಸೋಹ ಭವನದ ಸಮೀಪ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಎರಡು ಘಟಕಗಳ ಉಪಯೋಗವನ್ನು ಪಟ್ಟಣದ ಜನತೆ ಪಡೆದುಕೊಳ್ಳುತ್ತಿದ್ದಾರೆ.

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ರಾಯಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದು, ಗ್ರಾಮಸ್ಥರು ಇದರ ಪ್ರಯೋಜನ ಪಡೆಯುತ್ತಿಲ್ಲ. ಆದ್ದರಿಂದ ಅದನ್ನು ಬೇರೆಡೆಗೆ ಸ್ಥಳಾಂತರಿಸಲು ಸಂಸ್ಥೆ ಮುಂದಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಬಿಕ್ಕೋಡು, ಬಂಟೇನಹಳ್ಳಿ ಸೇರಿದಂತೆ ತಾಲ್ಲೂಕಿನಲ್ಲಿ ಆರು ಘಟಕಗಳನ್ನು ಸ್ಥಾಪಿಸಲಾಗಿದೆ.

ಹಳೇಬೀಡು ಭಾಗದ ಶೇ 75 ರಷ್ಟು ಹಳ್ಳಿಗಳಲ್ಲಿ ಸಾಕಷ್ಟು ಘಟಕಗಳಲ್ಲಿ ನೀರು ಪರಿಪೂರ್ಣವಾಗಿ ಶುದ್ಧವಾಗುತ್ತಿಲ್ಲ. ಚಿನ್ನದ ಬಣ್ಣದ ₹ 5 ನಾಣ್ಯ ಹಾಕಿದರೂ ಒಮ್ಮೊಮ್ಮೆ ನೀರು ಬಾರದೆ ನಾಣ್ಯ ವಾಪಸ್ ಬರುತ್ತದೆ. ಕೆಲವು ಘಟಕದಲ್ಲಿ ದುರಸ್ತಿ ಕೆಲಸ ವಿಳಂಬವಾಗುತ್ತದೆ. ಒಮ್ಮೊಮ್ಮೆ ದೀರ್ಘಾವಧಿ ನೀರು ಪೂರೈಕೆ ನಿಲ್ಲುತ್ತದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ.

‘ಘಟಕದಲ್ಲಿ ಶುದ್ಧ ನೀರು ಪೂರೈಕೆಯಾದರೂ ಕೆಲವರು ತಮ್ಮ ನೀರಿನ ಕ್ಯಾನ್ ಸಮರ್ಪಕವಾಗಿ ಶುಚಿಗೊಳಿಸುವುದಿಲ್ಲ. ಸಾಕಷ್ಟು ಕ್ಯಾನ್ ಪಾಚಿ ಕಟ್ಟಿವೆ. ಇಂತಹ ಬಳಕೆದಾರರು ಮನೆಗೆ ಕೊಂಡೊಯ್ಯುವ ನೀರು ವಾಸನೆ ಬರುತ್ತದೆ. ಬಳಕೆದಾರರು ನೀರು ಸಂಗ್ರಹಿಸುವ ಪಾತ್ರೆ ಹಾಗೂ ನೀರು ಕೊಂಡೊಯ್ಯುವ ಕ್ಯಾನ್ ಶುಚಿತ್ವಕ್ಕೂ ಮಹತ್ವ ಕೊಡಬೇಕು’ ಎನ್ನುತ್ತಾರೆ ನೀರಿನ ಘಟಕಗಳ ಸಿಬ್ಬಂದಿ.

ನೀರು ಪಡೆಯಲು ಡಿಜಿಟಲ್‌ ಕಾರ್ಡ್‌
ಹಳೇಬೀಡಿನ ಕರಿಯಮ್ಮ ದೇವಾಲಯ ಬಳಿ ಇರುವ ಶುದ್ಧ ಗಂಗಾ ನೀರಿನ ಘಟಕ ಗುಣಮಟ್ಟದ ನೀರು ಪೂರೈಕೆಗೆ ಹೆಸರಾಗಿದೆ. ಘಟಕದಲ್ಲಿ ಪ್ರತಿದಿನ 1,300 ಬಳಕೆದಾರರು ತಲಾ 20 ಲೀಟರ್ ನೀರು ಪಡೆಯುತ್ತಿದ್ದಾರೆ.

‘ಬೇಲೂರು ತಾಲ್ಲೂಕಿನಲ್ಲಿ ಧರ್ಮಸ್ಥಳ ಯೋಜನೆಯ 6 ಘಟಕಗಳು ನೀರು ಪೂರೈಕೆ ಮಾಡುತ್ತಿವೆ. ಪ್ರತಿದಿನ ಸಿಬ್ಬಂದಿ ಶುದ್ಧೀಕರಿಸಿದ ನೀರಿನ ಗುಣಮಟ್ಟ ಪರೀಕ್ಷೆ ನಡೆಸುತ್ತಾರೆ. ತಿಂಗಳಿಗೊಮ್ಮೆ ಟ್ಯಾಂಕ್ ಸ್ವಚ್ಛತೆ ನಡೆಯುತ್ತಿದೆ. ಹೀಗಾಗಿ ಆರೋಗ್ಯಕ್ಕೆ ಉತ್ತಮವಾದ ನೀರು ದೊರಕುತ್ತಿದೆ’ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.

‘ಘಟಕದಲ್ಲಿ 1,500 ಮಂದಿಗೆ ಡಿಜಿಟಲ್ ಕಾರ್ಡ್ ವಿತರಣೆ ಮಾಡಲಾಗಿದೆ. ಆದರೆ 800 ಕಾರ್ಡ್ ಮಾತ್ರ ಪ್ರತಿ ತಿಂಗಳು ರಿಚಾರ್ಜ್ ಆಗುತ್ತಿವೆ. ₹5 ರ ನಾಣ್ಯ ಹಾಕಿ ನೀರು ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಒಂದು ತಿಂಗಳಿಗೆ ₹5 ನಾಣ್ಯದಿಂದ ₹25 ಸಾವಿರದಿಂದ ₹30 ಸಾವಿರ ಆದಾಯ ಬರುತ್ತಿದೆ’ ಎನ್ನುತ್ತಾರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ.

ಘಟಕದವರು ಬಂದೋಬಸ್ತ್ ನಲ್ಲಿಗಳನ್ನು ಅಳವಡಿಸಬೇಕು. ಉದ್ದ ಹಾಗೂ ಗಿಡ್ಡವಾದ ಕ್ಯಾನ್‌ಗಳಿಗೆ ಪ್ರತ್ಯೇಕ ನಲ್ಲಿ ಹಾಕಬೇಕು. ಜನಪ್ರತಿನಿಧಿಗಳು ಘಟಕದ ಮುಂಭಾಗದ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಮಾಡಿದರೆ ಅನುಕೂಲ ಹೆಚ್ಚುತ್ತದೆ ಎಂದು ಜನರು ಹೇಳುತ್ತಿದ್ದಾರೆ.

ಶುದ್ಧ ನೀರು, ನಿರ್ವಹಣೆ ಉತ್ತಮ
ಬೇಲೂರಿನ ಪುರಸಭಾ ಆವರಣದಲ್ಲಿರುವ ಘಟಕದ ನೀರನ್ನು ನಾನು ಐದು ವರ್ಷಗಳಿಂದ ಬಳಸುತ್ತಿದ್ದೇನೆ. ನೀರು ಶುದ್ಧವಾಗಿರುತ್ತದೆ. ನಿರ್ವಹಣೆ ಚೆನ್ನಾಗಿದೆ. ತಾಂತ್ರಿಕ ಲೋಪದೋಷಗಳು ಕಂಡು ಬಂದರೂ, ತಕ್ಷಣ ಸರಿ ಪಡಿಸುತ್ತಾರೆ. ಇದರಿಂದ ಜನರಿಗೆ ಉಪಯುಕ್ತವಾಗಿದೆ.
ಎಚ್.ವೈ.ಯೋಗೀಶ್, ಬಿಜೆಪಿ ಮುಖಂಡ ಬೇಲೂರು

ಘಟಕ ದುರಸ್ತಿ ಮಾಡಿ
ಆಲೂರು ಪಟ್ಟಣದ ಹೃದಯ ಭಾಗದಲ್ಲಿರುವ ಶುದ್ಧ ನೀರು ಘಟಕ ದುರಸ್ತಿಗೊಳಗಾಗಿ ವರ್ಷಗಳೆ ಕಳೆದವು. ಆಸ್ಪತ್ರೆ, ಬಸ್ ನಿಲ್ದಾಣ, ಮಾರುಕಟ್ಟೆ ಇರುವುದರಿಂದ ಪ್ರತಿದಿನ ಸಾವಿರಾರು ಜನಸಂದಣಿ ಇರುತ್ತದೆ. ಕುಡಿಯಲು ನೀರಿಗೆ ಪರದಾಡಬೇಕಾಗಿದೆ. ಘಟಕ ದುರಸ್ತಿ ಆಗಬೇಕು.
ಆನಂದ್, ಕುಂಬಾರಹಳ್ಳಿ ಕೊಪ್ಪಲು

ಘಟಕಗಳ ನಿರ್ವಹಣೆ ಹೊರಗುತ್ತಿಗೆ
ಆಸ್ಪತ್ರೆ ಮುಂಭಾಗದಲ್ಲಿರುವ ಘಟಕ ದುರಸ್ತಿ ಮಾಡಬೇಕಾಗಿದೆ. ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲಿ ದುರಸ್ತಿಯಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಘಟಕಗಳ ನಿರ್ವಹಣೆಗೆ ಹೊರ ಗುತ್ತಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು.
ನಟರಾಜ್, ಮುಖ್ಯಾಧಿಕಾರಿ, ಆಲೂರು ಪಟ್ಟಣ ಪಂಚಾಯಿತಿ

ನೀರು ರುಚಿ ಇಲ್ಲ
ಹಿರೀಸಾವೆ ಹೋಬಳಿಯ ಮತಿಘಟ್ಟ ಪಂಚಾಯಿತಿ ವ್ಯಾಪ್ತಿಯ ಸೋರೆಕಾಯಿಪುರ ಮತ್ತು ಆಯರಹಳ್ಳಿಯಲ್ಲಿ ಇರುವ ಘಟಕಗಳ ನೀರು ರುಚಿ ಇಲ್ಲ. ಈ ಘಟಕಗಳಿಗೆ ಸರಬರಾಜು ಮಾಡುತ್ತಿರುವ ಕೊಳವೆ ಬಾವಿ ನೀರನ್ನು ಬದಲಿಸಬೇಕಿದೆ.
ಅನಿಲ್, ಮತಿಘಟ್ಟ ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ

ನೀರಿನ ಘಟಕಗಳು ಉಪಯುಕ್ತ
ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಶುದ್ಧ ಗಂಗಾ ನೀರಿನ ಘಟಕದಿಂದ ಸ್ಥಳೀಯರು ಮಾತ್ರವಲ್ಲದೆ ವಿವಿಧ ಊರಿನಿಂದ ಬರುವ ಜನರಿಗೆ ಉಪಯುಕ್ತವಾಗಿದೆ. ಘಟಕದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿರುವುದರಿಂದ ಶುದ್ಧ ನೀರು ದೊರಕುತ್ತಿದೆ. ತಿಂಗಳಿಗೊಮ್ಮೆ ರಿಚಾರ್ಜ್ ಮಾಡಿಸುವ ಕಾರ್ಡ್ ಕೊಟ್ಟಿರುವುದರಿಂದ ಪ್ರತಿದಿನ ನಾಣ್ಯ ಹೊಂದಿಸುವ ಸಮಸ್ಯೆ ಇಲ್ಲ.
ಎಚ್.ಎಸ್.ವಿಜಯ್, ಹಳೇಬೀಡು ವರ್ತಕ

ನಿರ್ವಹಣೆ: ಚಿದಂಬರಪ್ರಸಾದ
ಪೂರಕ ಮಾಹಿತಿ: ಬಿ.ಪಿ.ಜಯಕುಮಾರ್‌, ರಂಗನಾಥ ಜೆ.ಎನ್‌., ಎಚ್.ಎಸ್.ಅನಿಲ್ ಕುಮಾರ್, ಹಿ.ಕೃ.ಚಂದ್ರು, ಸಿದ್ಧರಾಜು, ಎಂ.ಪಿ. ಹರೀಶ್‌, ಮಲ್ಲೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT