ಸೋಮವಾರ, ಆಗಸ್ಟ್ 2, 2021
19 °C
ತಲೆಮರೆಸಿಕೊಂಡ ಇಬ್ಬರ ಬಂಧನಕ್ಕೆ ಕಾರ್ಯಾಚರಣೆ

ರೌಡಿ ಶೀಟರ್‌ ಹತ್ಯೆ ಪ್ರಕರಣ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ಹುಣಸಿನಕೆರೆ ಬಳಿಯ 80 ಅಡಿ ರಸ್ತೆಯಲ್ಲಿ ಹಗಲು ಹೊತ್ತಿನಲ್ಲೇ ರೌಡಿ ಶೀಟರ್‌ ಭರತ್‌ನನ್ನು ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ವಲ್ಲಭಾಯಿ ರಸ್ತೆ 3ನೇ ಕ್ರಾಸ್‌ ನಿವಾಸಿಗಳಾದ ರೋಹಿತ್‌ (28), ವಸಂತ (27), ವಲ್ಲಭಾಯಿ ರಸ್ತೆ 5ನೇ ಕ್ರಾಸ್‌ ನಿವಾಸಿ ಎಚ್‌.ಪಿ.ಮಣಿಕಂಠ (20), ನಗರದ ಹುಣಸಿನಕೆರೆ ರಸ್ತೆ ಬನಶಂಕರಿ ಕ್ಯಾಂಟೀನ್ ಹತ್ತಿರದ ನಿವಾಸಿ ಜಯಂತ (20) ಎಂಬುವರನ್ನು ಬಂಧಿಸಿದ್ದು, ಅಂಬೇಡ್ಕರ್‌ ನಗರ 2ನೇ ಕ್ರಾಸ್‌ ನಿವಾಸಿ ಕೆ.ವೈ. ಸುದೀಪ (20) ಹಾಗೂ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಬನವಾಸೆ ಗ್ರಾಮದ ಶರತ್‌ (26) ತಲೆ ಮರೆಸಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ 23ರಂದು ಸಂಜೆ 4 ಗಂಟೆ ಸಮಯದಲ್ಲಿ ಹುಣಸಿನಕೆರೆ 80 ಅಡಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವಲ್ಲಭಾಯಿ ರಸ್ತೆ 3ನೇ ಕ್ರಾಸ್‌ ನಿವಾಸಿ ಎಚ್‌.ಪಿ. ಭರತ್‌ ಎಂಬ ಯುವಕನನ್ನು ಹಳೆ ದ್ವೇಷದ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ನಗರದ ಪೆನ್‌ಷನ್‌ ಮೊಹಲ್ಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು.

ಕೊಲೆಯಾದ ವ್ಯಕ್ತಿಯೂ ರೌಡಿ ಶೀಟರ್‌ ಆಗಿದ್ದು, ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದನು. ಕೊಲೆಯಾದ ಭರತ್‌ ಹಾಗೂ ಅವನಿಗೆ ಗೊತ್ತಿರುವ ವ್ಯಕ್ತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆಗಿದ್ದು, ಅದೇ ದ್ವೇಷ ಮುಂದುವರೆದಿದೆ. ಬಳಿಕ 80 ಅಡಿ ರಸ್ತೆಯಲ್ಲಿ ಹತ್ಯೆ ಮಾಡಿದ್ದರು. ಈ ಪೈಕಿ ನಾಲ್ಕು ಮಂದಿಯನ್ನು ಬಂಧಿಸಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ. ಆದಷ್ಟು ಬೇಗ ಉಳಿದವರ ಬಂಧನ ಆಗಲಿದೆ ಎಂದರು.

‘ಎಲ್ಲರೂ ಮೊದಲಿನಿಂದಲೇ ಸ್ನೇಹಿತರಾಗಿದ್ದು, ಒಂದೇ ರಸ್ತೆಯ ವಾಸ ಇದ್ದರು. ಕೊಲೆಯಾದ ವ್ಯಕ್ತಿ ಭರತ್‌ ಕೆಲವು ದಿನಗಳ ಹಿಂದೆ ಮದ್ಯ ಸೇವಿಸಿ ರಸ್ತೆಯಲ್ಲಿ ಗಲಾಟೆ ಮಾಡಿ ಅವರನ್ನೆಲ್ಲ ಕೊಲೆ ಮಾಡುತ್ತೇನೆ ಎಂದು ಕೂಗಾಡಿ ರಂಪಾಟ ಮಾಡಿದ್ದ. ಈ ವಿಷಯ ತಿಳಿದ ರೋಹಿತ್‌ ಇವನು ನಮಗೆ ಏನಾದರೂ ಮಾಡಬಹುದು ಎಂದು ಯೋಜನೆ ರೂಪಿಸಿದ್ದಾರೆ’ ಎಂದು ವಿವರಿಸಿದರು.

‘ಮದುವೆ, ಇತರೆ ಸಮಾರಂಭಗಳಿಗೆ ಅಲಂಕಾರಕ್ಕೆ ಭರತ್‌ ಹೂವು ನೀಡುವ ಕೆಲಸ ಮಾಡುತ್ತಿದ್ದ. ಪುನೀತ್‌ ಹಾಗೂ ಭರತ್ ಹೋಗುತ್ತಿದ್ದಾಗ ಸುದೀಪ್ ಸಂದೇಶ ಕೊಟ್ಟಿದ್ದಾನೆ. ನಂತರ ಭರತ್‌ನ ಬೈಕ್ ಅಡ್ಡಗಟ್ಟಿದ್ದಾರೆ. ಜೊತೆಯಲ್ಲಿದ್ದ ಪುನೀತ್‌ ಓಡಿಹೋಗಿದ್ದಾನೆ. ಬೆದರಿಸಲು ಹೋಗಿ ಕೊಲೆಯನ್ನೇ ಮಾಡಿದ್ದಾರೆ’ ಎಂದು ಹೇಳಿದರು.

ಮೇ 27ರಂದು ಸಂಜೆ 4.30ರ ಸಮಯದಲ್ಲಿ ಹಾಸನ ನಗರದ ರೈಲ್ವೆ ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಬಂಧಿಸಲು ಶ್ರಮಿಸಿದ ಡಿವೈಎಸ್‌ಪಿ ಟಿ.ಆರ್‌.ಪುಟ್ಟಸ್ವಾಮಿಗೌಡ, ನಗರ ವೃತ್ತದ ಪಿಎಸ್‌ಐ ಎಸ್‌.ರೇಣುಕಪ್ರಸಾದ್‌, ಪೆನ್‌ಷನ್‌ ಮೊಹಲ್ಲಾ ಠಾಣೆಯ ಪಿಎಸ್‌ಐ ರಾಜನಾಯಕ್‌ ಮತ್ತು ಸಿಬ್ಬಂದಿಗಳಾದ ಹರೀಶ್‌, ಸೋಮಶೇಖರ್‌, ನಗರ ಠಾಣೆಯ ದಿಲೀಪ್, ಜಿ.ಭರತ್‌ ಅವರನ್ನು ಎಸ್ಪಿ ಶ್ರೀನಿವಾಸ್‌ಗೌಡ  ಅವರು ಶ್ಲಾಘಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು