ಗುರುವಾರ , ನವೆಂಬರ್ 21, 2019
26 °C
ಸುಂಡಹಳ್ಳಿ ಶಾಲೆಯಲ್ಲಿ ವಿದ್ಯಾರ್ಥಿ, ಶಿಕ್ಷಕರ ಪರದಾಟ

ಶಿಥಿಲ ಕಟ್ಟಡದಲ್ಲಿ ನಡೆಯುತ್ತಿವೆ ತರಗತಿ

Published:
Updated:
Prajavani

ಶ್ರವಣಬೆಳಗೊಳ: ಸಮೀಪದ ಸುಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಅದರಲ್ಲೇ ತರಗತಿಗಳು ನಡೆಯುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಶಾಲೆಯ ಕಟ್ಟಡವು ತುಂಬಾ ಹಳೆಯದಾಗಿ, ಮಂಗಳೂರು ಹೆಂಚಿನಿಂದ ಕೂಡಿದ್ದು, ಗೆದ್ದಲು ಹಿಡಿದಿದೆ. ಮಳೆ ಮತ್ತು ಗಾಳಿಗೆ ಹೆಂಚುಗಳು ಒಡೆದು ಕೆಲವು ಕಡೆಗಳಲ್ಲಿ ಹಾರಿ ಹೋಗಿದ್ದರಿಂದ, ಗೋಡೆಗಳು, ತೀರು, ರೀಪರ್‌ ನೆನೆದು ಶಿಥಿಲವಾಗಿತವೆ. ಹಾಗಾಗಿ  ತರಗತಿಗಳು ನಡೆಯುವುದಕ್ಕೆ ಅನಾನುಕೂಲವಾಗಿದೆ ಎಂದು ಇಲ್ಲಿಯ ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಕೆ.ರಘು ಅಸಾಮಧಾನ ವ್ಯಕ್ತಪಡಿಸಿದರು.

ಇಲ್ಲಿಯ ಶಾಲೆಯಲ್ಲಿ 40 ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಈ ಬಾರಿ ಹೆಚ್ಚಿನ ಮಳೆಯಾಗಿದ್ದರಿಂದ ಪಾಠ ಪ್ರವಚನಗಳಿಗೆ ತುಂಬಾ ತೊಂದರೆಯಾಗಿದೆ. ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ ಸುಸಜ್ಜಿತ ಕಟ್ಟಡ ವನ್ನು ನಿರ್ಮಿಸಿಕೊಡಬೇಕು ಎಂದು ಮುಖ್ಯ ಶಿಕ್ಷಕ ಹೊಂಬಾಳಯ್ಯ ಕೋರಿದರು.

ಇಲ್ಲಿಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸುರಕ್ಷತೆಯ ಹಿತ ದೃಷ್ಟಿಯಿಂದ ನೂತನ ಕಟ್ಟಡವನ್ನು ಒದಗಿಸಬೇಕು ಎಂದು ಗ್ರಾಮಸ್ಥರಾದ ಮಹೇಶ್‌, ಲೋಕೇಶ್‌, ಸೋಮೇಗೌಡ, ರಘು, ಸಂದೀಪ್‌, ರವಿಕುಮಾರ್‌ ಪಾಟೀಲ್‌ ಆಗ್ರಹಿಸಿದರು.

’ಈಗಾಗಲೇ ಈ ಶಾಲೆಗೆ ಹೆಚ್ಚುವರಿ ಕಟ್ಟಡವನ್ನು ಒದಗಿಸಲಾಗಿದ್ದು, ಶಿಥಿಲಾ ವಸ್ಥೆಯ ಕಟ್ಟಡಗಳ ಮಾಹಿತಿಯನ್ನು ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಶಾಲೆಯ ಎಸ್‌ಡಿಎಂಸಿ, ಸ್ಥಳೀಯ ದಾನಿಗಳು, ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ಸಂಘಟಿಸಿ ಅವರಿಂದ ಸಂಪನ್ಮೂಲ ಸಂಗ್ರಹಿಸಿ ಶಾಲೆಯ ಚಿಕ್ಕಪುಟ್ಟ ದುರಸ್ಥಿಯನ್ನು ಮಾಡಿಸುವ ಯೊಜನೆಯನ್ನು ರೂಪಿಸಲಾಗುತ್ತಿದೆ‘ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಜೆ.ಸೋಮನಾಥ್‌ ’ಪ್ರಜಾವಾಣಿ‘ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)