ಬುಧವಾರ, ನವೆಂಬರ್ 20, 2019
20 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ಕೆಎಂಶಿ ಅಸಮಾಧಾನ

ಕಳಪೆ ಬಿತ್ತನೆ ಬೀಜ, ಪೈಪ್‌ ಪೂರೈಕೆ

Published:
Updated:
Prajavani

ಹಾಸನ: ಎಸ್ ಸಿಪಿ ಹಾಗೂ ಟಿಎಸ್ ಪಿ ಯೋಜನೆ ಸೌಲಭ್ಯವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಗಮನ ಹರಿಸಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆ ಅಡಿ ಎಸ್‌ಸಿ, ಎಸ್‌ಟಿ ಅರ್ಹ ಫಲಾನುಭವಿಗಳನ್ನು ಜನಸಂಖ್ಯಾ ಆಧಾರದಲ್ಲಿ ಅವಕಾಶ ನೀಡಿ ಆಯ್ಕೆ ಮಾಡಬೇಕು. ಅಲ್ಲದೇ ರೈತರಿಗೆ ನೀಡುತ್ತಿರುವ ಬಿತ್ತನೆ ಬೀಜ, ಹನಿ ನೀರಾವರಿ ಪೈಪುಗಳು ಗುಣಮಟ್ಟದ್ದಾಗಿಲ್ಲ. ಹಾಗಾಗಿ ನಿರ್ದಿಷ್ಟ ಕಂಪನಿಗಳಿಂದಲೇ ಖರೀದಿಸಿ, ಅವುಗಳ ಗುಣಮಟ್ಟ ಪರೀಕ್ಷಿಸಿ ಪಡೆದುಕೊಳ್ಳುವ ಅವಕಾಶವನ್ನು ರೈತರಿಗೆ ನೀಡುವಂತೆ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ಉಚಿತ ಚಿಕಿತ್ಸೆ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ಚಿಕಿತ್ಸೆ ಪಡೆಯಲು ಜಾತಿ ಪ್ರಮಾಣ ಪತ್ರ ಕಡ್ಡಾಯ ಮಾಡುವಂತೆ ಹಿಮ್ಸ್‌ ಅಧಿಕಾರಿಗಳಿಗೆ ಹೇಳಿದರು.

ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ರಸ್ತೆ ಬದಿಗಳಲ್ಲಿ ಕೃಷಿ ಹೊಂಡ ನಿರ್ಮಿಸುವುದನ್ನು ತಪ್ಪಿಸಬೇಕು. ಗಂಗಾ ಕಲ್ಯಾಣ, ಹನಿ ನೀರಾವರಿ ಯೋಜನೆಯನ್ನು ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ತಲುಪಿಸಬೇಕು. ಪ್ರವಾಸೋದ್ಯಮ ಇಲಾಖೆ ಟ್ಯಾಕ್ಸಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಲಭ್ಯವಿರುವ ಇರುವ ಅನುದಾನವನ್ನು ಎಲ್ಲಾ ತಾಲ್ಲೂಕುಗಳಿಗೆ ಸಮವಾಗಿ ಹಂಚಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಅವರನ್ನು ಗುರುತಿಸಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನಿರ್ವಹಿಸಬೇಕು. ಹಳೆಯ ಜನಪದ ಕಲೆಗಳನ್ನು ಗುರುತಿಸಿ ಜೀವ ತುಂಬುವ, ಕಲಾ ತಂಡಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಕುಂಬಾರ್‌ಗೆ ಸೂಚಿಸಿದರು.

ಎಸ್‌ಸಿ, ಎಸ್‌ಟಿ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದಲ್ಲಿ ಬಿಸಿಎಂ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು. ಸ್ಲಂ ಬೋರ್ಡ್‍ಗಳಲ್ಲಿ ಮನೆ ಪಡೆಯಲು ಅನುಕೂಲವಾಗುವಂತೆ ಕಟ್ಟಡ ಕಾರ್ಮಿಕರಿಗೆ ಕಡ್ಡಾಯವಾಗಿ ಗುರುತಿನ ಚೀಟಿ ನೀಡಬೇಕು ಎಂದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಜಂಟಿ ಪರಿಶೀಲನೆ ನಡೆಸಿ, ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಬೇಕು. ಕಾಲಕಾಲಕ್ಕೆ ನೀರಿನ ಗುಣಮಟ್ಟ ಪರಿಶೀಲಿಸಲು ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕಡ್ಡಾಯವಾಗಿ ಶೌಚಾಲಯ ಬಳಸುವಂತೆ ಅರಿವು ಮೂಡಿಸಬೇಕು. ಖಜಾನೆಗಳಿಂದ ಸರ್ಕಾರಿ ಕಾಮಗಾರಿಗಳ ಬಿಲ್ ಪಾವತಿ ವಿಳಂಬವಾಗದಂತೆ ಎಚ್ಚರ ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಅನುದಾನದಲ್ಲೇ ಭವನಗಳ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಪ್ರಗತಿ ಪರಿಶೀಲನಾ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವುದರ ಜೊತೆಗೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)