ಬುಧವಾರ, ಡಿಸೆಂಬರ್ 11, 2019
17 °C
ಜನ ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿದ ಸಿಇಒ ಬಿ.ಎ. ಪರಮೇಶ್ ಸಲಹೆ

ಸೋಂಕಿತರ ಮಾನಸಿಕ ಸ್ಥೈರ್ಯ ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಎಚ್ಐವಿ, ಏಡ್ಸ್ ರೋಗ ನಿರ್ಮೂಲನೆಗೆ ಸಮಾಜ ಒಂದಾಗುವುದರ ಜತೆಗೆ ನಿಯಂತ್ರಣ ಕ್ರಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ್ ಸಲಹೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್ಷನ್ ಸೋಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಾಸನ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಮುಂದೊಂದು ದಿನ ಎಚ್ಐವಿ ರೋಗ ಮುಕ್ತ ಸಮಾಜ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಜನ ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ಎಚ್ಐವಿ ಸೋಂಕಿತರನ್ನು ಕಳಂಕಿತ ರೂಪದಲ್ಲಿ ಕಾಣದೆ ಸೂಕ್ಷ್ಮವಾಗಿ ಪರಿಗಣಿಸಿ, ಮಾನಸಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು. ವೈದ್ಯರು ಸಹ ಸೋಂಕಿತರಿಗೆ ಸಂಯಮದಿಂದ ಚಿಕಿತ್ಸೆ ನೀಡಬೇಕು. ಅವರಲ್ಲಿನ ಕೀಳಿರಿಮೆ ತೊಡೆದು ಹಾಕಿ ಸಮಾಜದಲ್ಲಿ ಮುಕ್ತವಾಗಿ ಬದುಕುವಂತೆ ಮಾಡಬೇಕು ಎಂದು ಹೇಳಿದರು.

ಆರ್‌ಆರ್‌ಸಿ, ಎಇಪಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಕುಮಾರ್ ಮಾತನಾಡಿ, ಎಚ್‌ಐವಿ ನಿಯಂತ್ರಣ ಕುರಿತು ಇರುವ ಮಾಹಿತಿಯನ್ನು ಜನರಿಗೆ ಪ್ರಚುರ ಪಡಿಸಬೇಕು ಎಂದು ಹೇಳಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಕಾಂತರಾಜು ಮಾತನಾಡಿ, ‘ಸಮುದಾಯಗಳು ಬದಲಾವಣೆ ಉಂಟು ಮಾಡುತ್ತವೆ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ವಿವಾಹ ಪೂರ್ವ ಲೈಂಗಿಕ ಸಂಪರ್ಕದಿಂದ ದೂರವಿದ್ದು, ವಿವಾಹದ ನಂತರದಲ್ಲಿ ಸಂಗಾತಿಗಷ್ಟೇ ನಿಷ್ಟರಾಗಿರುತ್ತೇವೆಂದು ಪ್ರಮಾಣ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಈಶ್ವರ್ ಪ್ರಸಾದ್, ಎ.ಆರ್.ಟಿ. ಕೇಂದ್ರದ ವೈದ್ಯಾಧಿಕಾರಿ ಡಾ.ಪೂರ್ಣಿಮಾ, ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಹೆಮ್ಮಿಗೆ ಮೋಹನ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಚಂದ್ರೇಗೌಡ ಹಾಜರಿದ್ದರು.

ಪ್ರತಿಕ್ರಿಯಿಸಿ (+)