ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತ ದೇವೇಗೌಡರು ಮತ್ತೆ ತವರಿಗೆ ಬರುವರೇ?

ತಾತನಿಗೆ ಕ್ಷೇತ್ರ ತ್ಯಾಗ ಮಾಡಲು ಮೊಮ್ಮಗನ ತೀರ್ಮಾನ
Last Updated 24 ಮೇ 2019, 19:45 IST
ಅಕ್ಷರ ಗಾತ್ರ

ಹಾಸನ: ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲೆ ಜೆಡಿಎಸ್‌ ಪಕ್ಷದಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದಾಗಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಜ್ವಲ್ ರೇವಣ್ಣ ಘೋಷಿಸಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ತುಮಕೂರು ಕ್ಷೇತ್ರದಲ್ಲಿ ದೇವೇಗೌಡರು ಪರಾಭವಗೊಂಡಿರುವ ಕಾರಣ ಹಾಸನವನ್ನು ಮತ್ತೆ ತಾತಗೆ ಬಿಟ್ಟು ಕೊಡುವ ಸಲುವಾಗಿ ಈ ದಿಢೀರ್ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳುತ್ತಿದ್ದರೂ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟಿ ಹಾಕಿದ್ದು, ದೊಡ್ಡಗೌಡರ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.

‘ಈ ನಿರ್ಧಾರಕ್ಕೆ ನನ್ನ ಪಾಲಿನ ದೇವರಾಗಿರುವ ದೇವೇಗೌಡರ ಸೋಲು ಪ್ರಮುಖ ಕಾರಣ’ ಎಂದು ತುರ್ತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಪ್ರಜ್ವಲ್, ‘ ಗೌಡರ ಸೋಲು ನನಗೆ ದುಃಖ ತಂದಿದೆ. ಹೀಗಾಗಿ ಹೋರಾಟವೇ ಜೀವನ ಎಂದುಕೊಂಡು ಬಂದಿರುವ ಅವರಿಗೆ ಮತ್ತೆ ಶಕ್ತಿ ತುಂಬುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಪ್ರಜ್ವಲ್ ಅವರ ಈ ನಡೆ ರಾಜಕೀಯ ಪಾಳೆಯದಲ್ಲಿ ಅನೇಕ ರೀತಿಯ ಚರ್ಚೆಗಳಿಗೆ ದಾರಿ ಮಾಡಿದೆ. ಮುಖ್ಯವಾಗಿ ತಮ್ಮ ರಾಜಕೀಯ ಜೀವನದ ಕೊನೆಗಾಲದಲ್ಲಿ ದೇವೇಗೌಡರು ಸೋಲಲು ಕುಟುಂಬ ಸದಸ್ಯರೇ ಕಾರಣ ಎಂದು ಕೇಳಿ ಬರುತ್ತಿರುವ ಆರೋಪ ಹೋಗಲಾಡಿಸಲು ಪ್ರಜ್ವಲ್ ಕುಟುಂಬ ಈ ತೀರ್ಮಾನಕ್ಕೆ ಬಂದಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ. ಹಾಗಾದರೆ ಸೋತಿರುವ ಗೌಡರು ಮತ್ತೆ ತವರಿಗೆ ಬರುವರೇ? ಎಂಬ ಕುತೂಹಲ ಮೂಡಿಸಿದೆ.

1991ರಿಂದ (1996 ಹಾಗೂ 1999 ಹೊರತು ಪಡಿಸಿ) 2014ರವರೆಗೆ ಹಾಸನ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದ ದೇವೇಗೌಡರು ತವರು ಕ್ಷೇತ್ರ ತೊರೆದಾಗಲೇ ಅವರ ಅಭಿಮಾನಿ ವಲಯ ಬೇಸರಗೊಂಡಿತ್ತು.

ಕ್ಷೇತ್ರವನ್ನು ಮೊಮ್ಮಗನಿಗೆ ಧಾರೆ ಎರೆಯುವ ಮೊದಲು ಗೌಡರು ಕ್ಷೇತ್ರದ ಜನರೊಂದಿಗಿನ ಬಾಂಧವ್ಯ ನೆನೆದು ಕಣ್ಣೀರು ಹಾಕಿದ್ದರು. ತನ್ನ ಬದಲಿಗೆ ಮೊಮ್ಮಗನಿಗೆ ಆಶೀರ್ವಾದ ಮಾಡುವಂತೆ ಅವರೇ ಮನವಿ ಮಾಡಿದ್ದರಿಂದ ಕಾರ್ಯಕರ್ತರು ಪಕ್ಷದ ಪರವಾಗಿ ಹಗಲಿರುಳು ದುಡಿದಿದ್ದರು.

ಗೌಡರು ತುಮಕೂರಿನಿಂದ ಸ್ಪರ್ಧಿಸಿದಾಗ ಹಲವು ಕಟ್ಟಾ ಜೆಡಿಎಸ್‌ ಕಾರ್ಯಕರ್ತರು ಅಲ್ಲಿಗೂ ತೆರಳಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. 87ರ ಇಳಿಯಸ್ಸಿನಲ್ಲಿ ಗೌಡರು ಸೋಲಬಾರದು ಎನ್ನುವುದು ಅವರ ಉದ್ದೇಶವಾಗಿತ್ತು. ಆದರೆ, ಫಲಿತಾಂಶ ವ್ಯತಿರಿಕ್ತವಾಗಿರುವುದು ಕಾರ್ಯಕರ್ತರನ್ನು ಘಾಸಿಗೊಳಿಸಿದೆ.

ದೊಡ್ಡಗೌಡರು ಸೋತಿರುವುದನ್ನು ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂತೋಷ, ದುಃಖ ಎರಡರ ನಡುವೆ ನೋವು ಹೆಚ್ಚಾಗಿದೆ.

ರಾಜಕೀಯ ಲಾಭ, ನಷ್ಟ ಅಳೆದು ತೂಗುವ, ಮುತ್ಸದ್ದಿ ಗೌಡರು ಸುರಕ್ಷಿತವಾದ ತವರು ಕ್ಷೇತ್ರ ತೊರೆದು ತುಮಕೂರು ಕ್ಷೇತ್ರವನ್ನು ಆಯ್ದುಕೊಳ್ಳುವ ತಪ್ಪು ನಿರ್ಧಾರ ಏಕೆ ಕೈಗೊಂಡರು ಎನ್ನುವ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ.

ಚುನಾವಣೆಗಳಲ್ಲಿ ಪರಭಾವಗೊಂಡು ರಾಜಕೀಯ ಮುಖ್ಯವಾಹಿನಿಯಿಂದ ದೂರ ಉಳಿಯುವಂತಾಗಿದ್ದ ದಿನಗಳಲ್ಲಿ ಗೌಡರು ’ಫಿನಿಕ್ಸ್‌’ ನಂತೆ ಮತ್ತೆ ಬರುವೆ ಎಂದು ಹೇಳುತ್ತಿದ್ದರು. ಈ ಇಳಿವಯಸ್ಸಿನಲ್ಲಿಯೇ ಇದು ಸಾಧ್ಯವೇ ಎಂಬುದನ್ನು ಕಾಲವೇ ಉತ್ತರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT