ಹಾಸನ: ಎರಡು ದಿನ ಡಿ.ಕೆ. ಶಿವಕುಮಾರ್ ಜಿಲ್ಲಾ ಪ್ರವಾಸ

ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಡಿ. 24ರಿಂದ ಎರಡು ದಿನ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಮೇಕೆದಾಟು ಯೋಜನೆ ಪಾದಯಾತ್ರೆ ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್ ಹೇಳಿದರು.
24ರಂದು ಮಡಿಕೇರಿಯ ತಲಕಾವೇರಿಯಲ್ಲಿ ಪೂಜೆ ಸಲ್ಲಿಸುವ ಡಿ.ಕೆ. ಶಿವಕುಮಾರ್, ಸಂಜೆ ಹೊಳೆನರಸೀಪುರಕ್ಕೆ ಆಗಮಿಸಿ ತಾಲ್ಲೂಕು ಕಾಂಗ್ರೆಸ್ ಭವನ ಉದ್ಘಾಟಿಸುವರು. ಬಳಿಕ ಕಾರ್ಯಕರ್ತರ ಸಭೆ ನಡೆಸುವರು. 25ರಂದು ಬೆಳಿಗ್ಗೆ ನಗರದ ಸಾಲಗಾಮೆ ರಸ್ತೆಯಲ್ಲಿರುವ ಭಾರತಿ ಕಲ್ಯಾಣ ಮಂಟಪದಲ್ಲಿ ಹಾಸನ ವಿಧಾನ ಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆ ನಡೆಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಳಿಕ ಬಾಳ್ಳುಪೇಟೆ, ಸಕಲೇಶಪುರ, ಆಲೂರು, ಕಟ್ಟಾಯ ಹೋಬಳಿ ಕಾರ್ಯಕರ್ತರ ಸಭೆ ನಡೆಸಿ, ಸಂಜೆ ಚನ್ನರಾಯಪಟ್ಟಣದಲ್ಲಿ ಸಭೆ ನಡೆಸುವರು ಎಂದು ಮಾಹಿತಿ ನೀಡಿದರು.
ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್ ಮಾತನಾಡಿ, ಮೇಕೆದಾಟು ಯೋಜನೆ ಜಾರಿಗೊಳಿಸಬೇಕೆಂಬ ಉದ್ದೇಶದಿಂದ ಪಕ್ಷದ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹೆಚ್ಚುವರಿ ನೀರು ಸಮುದ್ರಕ್ಕೆ ಹರಿದು ಹೋಗುವುದನ್ನು ತಡೆಯಲು ಮೇಕೆದಾಟು ಬಳಿ ಡ್ಯಾಂ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಡಿಪಿಆರ್ ಸಹ ಆಗಿತ್ತು. ಇದಕ್ಕಾಗಿ ಸಹಕಾರಿ ನೀಡಿ ಎಂದು ಹಾಸನ ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಬೆಂಗಳೂರು ಜಿಲ್ಲೆಗಳ ಪ್ರತಿಯೊಬ್ಬರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಖಂಡ ಎಚ್.ಕೆ.ಜವರೇಗೌಡ ಮಾತನಾಡಿ, 67 ಟಿಎಂಸಿ ಅಡಿ ನೀರು ಲಭ್ಯವಾಗುವ ಮೇಕೆದಾಟು ಯೋಜನೆ ಆಗಬೇಕು ಎಂಬುದು ಬಹುದಿನಗಳ ಕನಸಾಗಿದೆ. ವ್ಯರ್ಥವಾಗುವ ನೀರನ್ನು ಸಂಗ್ರಹ ಮಾಡಿ ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು ಎಂಬುದು ಯೋಜನೆ ಉದ್ದೇಶ. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ, ದೇವರಾಜೇಗೌಡ, ಬಿ.ಕೆ.ರಂಗಸ್ವಾಮಿ
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.