ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ | ರಸ್ತೆಯಲ್ಲಿ ಪ್ರವಾಹ; ಕಳಪೆ ಕಾಮಗಾರಿ ಆರೋಪಕ್ಕೆ ಪುಷ್ಟಿ

2ನೇ ಬಾರಿ ಪ್ರಾಯೋಗಿಕವಾಗಿ ಹರಿದ ನೀರು
Published 2 ಡಿಸೆಂಬರ್ 2023, 0:17 IST
Last Updated 2 ಡಿಸೆಂಬರ್ 2023, 0:17 IST
ಅಕ್ಷರ ಗಾತ್ರ

ಸಕಲೇಶಪುರ: ಐದು ದಿನಗಳ ನಂತರ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್‌ನಲ್ಲಿ ಶುಕ್ರವಾರ ಎರಡನೇ ಬಾರಿ ಪ್ರಾಯೋಗಿಕವಾಗಿ ನೀರು ಹರಿಸಿದ್ದು, ಮತ್ತೆ ಪೈಪ್‌ಲೈನ್‌ ಒಡೆದು, ಅಪಾರ ಪ್ರಮಾಣದ ನೀರು ಪೋಲಾಗಿದೆ. ರಸ್ತೆ, ಆಸ್ತಿಗಳಿಗೆ ಹಾನಿಯಾಗಿದೆ.

‘ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ’ ಎನ್ನುವ ಗ್ರಾಮಸ್ಥರ ಆರೋಪಕ್ಕೂ ಇದು ಪುಷ್ಟಿ ನೀಡಿದೆ. ಪೈಪ್‌ನಲ್ಲಿ ಸೋರಿಕೆ, ಪೈಪ್‌ಗಳಿಗೆ ಹಾಕಿರುವ ಕಾಂಕ್ರೀಟ್‌ ಕಿತ್ತು ಹೋಗಿರುವುದು ಕಾಣುತ್ತಿದೆ.  

‘ಪ್ರಾರಂಭದಿಂದಲೂ ಈ ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂದು ಹೇಳಿದರೂ ಗಮನ ಹರಿಸಿಲ್ಲ. ಪರೀಕ್ಷಾರ್ಥವಾಗಿ ನೀರು ಹರಿಸಿದ ನಂತರ ಕಾಮಗಾರಿಯ ಗುಣಮಟ್ಟ ಸ್ಪಷ್ಟವಾಗುತ್ತಿದೆ. ಪೈಪ್‌ಗಳು ತುಕ್ಕು ಹಿಡಿದಿವೆ. ಅಪಾರ ನೀರು ಪೋಲಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಾಡಮನೆ ಚೆಕ್‌ಡ್ಯಾಂ 4 ಮತ್ತು ಚೆಕ್‌ಡ್ಯಾಂ 5ರಿಂದ ಪರೀಕ್ಷಾರ್ಥವಾಗಿ ಎರಡನೇ ಬಾರಿ ನೀರು ಹರಿಸಿದ್ದು, ಪ್ರವಾಹದಂತೆ ನುಗ್ಗಿ, ರಸ್ತೆ ಹಾಗೂ ಕಾಫಿ ತೋಟಕ್ಕೆ ನಷ್ಟ ಉಂಟಾಗಿದೆ. ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.

ತಾಲ್ಲೂಕಿನ ಸಕಲೇಶಪುರ–ಮೂಡಿಗೆರೆ ರಾಜ್ಯ ಹೆದ್ದಾರಿ ಪಕ್ಕದ ಹಾರ್ಲೆ ಕೂಡಿಗೆ–ಕಾಡಮನೆ ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ, ಕಾಡಮನೆಯಿಂದ–ದೊಡ್ಡನಾಗರ ವರೆಗೆ 14 ಕಿ.ಮೀ. ಅಳವಡಿಸಿರುವ ಪೈಪ್‌ಲೈನ್‌ ಸೋರಿಕೆಯಾಗಿ ಅಪಾರ ನೀರು ರಸ್ತೆಯಲ್ಲಿ ಹರಿಯಿತು.

ನೀರು ಭೂಮಿಯೊಳಗೆ ಹರಿಯುವಾಗ ಮನೆ ಬಿದ್ದು ಹೋಗುವುದೋ ಎಂಬ ಭಯ ಶುರು ವಾಗಿದೆ. ಯಾರಿಗೋ ನೀರು ಕೊಡಲು ನಮ್ಮ ಬದುಕು ನಾಶ ಮಾಡುತ್ತಿದ್ದಾರೆ.
–ಶೇಖರ್, ರವಿ, ಬಾಲನ್ –ಹಾರ್ಲೆ ಕೂಡಿಗೆ ಗ್ರಾಮಸ್ಥರು

ಐದು ದಿನಗಳ ಹಿಂದೆ 6 ಕಿ.ಮೀ. ಹರಿಸಿದ ನೀರು, ಹಲವೆಡೆ ಸೋರಿಕೆಯಾಗಿ ರಸ್ತೆ, ಆಸ್ತಿಗೆ ಹಾನಿಯಾಗಿತ್ತು. ಜಲ ನಿಗಮದ ಅಧಿಕಾರಿಗಳು ತಕ್ಷಣ ನೀರು ನಿಲ್ಲಿಸಿ, ದುರಸ್ತಿ ಮಾಡಿದ್ದರು. ಶುಕ್ರವಾರ ಬೆಳಿಗ್ಗೆ ಅಲ್ಲಿಂದ ದೊಡ್ಡನಾಗರದವರೆಗೂ 2 ಸಾವಿರ ಎಚ್‌ಪಿ ಸಾಮರ್ಥ್ಯದ ಪ‍ಂಪ್‌ನಿಂದ ನೀರು ಹರಿಸಲಾಯಿತು.

ಹಾರ್ಲೆ ಕೂಡಿಗೆ ಬಳಿ ರಸ್ತೆ ಬದಿಯಲ್ಲಿಯೇ ಅಳವಡಿಸಿದ್ದ ಪೈಪ್‌ನಿಂದ ಕೆಲವೇ ನಿಮಿಷಗಳಲ್ಲಿ ಸುಮಾರು 40 ಅಡಿ ಎತ್ತರಕ್ಕೆ ನೀರು ಚಿಮ್ಮಲು ಶುರುವಾಯಿತು. ಅದನ್ನು ನೋಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಹಾಗೂ ಗ್ರಾಮಸ್ಥರು ಬೆಚ್ಚಿ ಬಿದ್ದರು. ವಿಷಯ ತಿಳಿಯುತ್ತಿದ್ದಂತೆ ಎಂಜಿನಿಯರ್‌ಗಳು ನೀರು ಹರಿಸುವುದನ್ನು ನಿಲ್ಲಿಸಿದರು. ಆದರೆ, ಪಂಪ್‌ ಸ್ಥಗಿತಗೊಳಿಸಿ 2 ಗಂಟೆಯಾದರೂ ನೀರು ಹರಿಯುತ್ತಲೇ ಇತ್ತು.

ತುಕ್ಕು ಹಿಡಿದ ಪೈಪ್‌ಗಳು: ‘ಭೂಮಿಯೊಳಗೆ ಅಳವಡಿಸಿರುವ 10 ಅಡಿ ಸುತ್ತಳತೆಯ ಪೈಪ್‌ಗಳು ನೀರು ಮತ್ತು ಮಣ್ಣಿನಿಂದ ತುಕ್ಕು ಹಿಡಿಯದಂತೆ ಸುತ್ತಲು ಹಾಕಿರುವ ಸಿಮೆಂಟ್‌, ಬಹುತೇಕ ಕಡೆ ಕಿತ್ತು ಹೋಗಿದೆ. 4–5 ವರ್ಷಗಳ ಹಿಂದೆಯೇ ಭೂಮಿಯೊಳಗೆ ಹಾಕಿರುವ ಪೈಪ್‌ಗಳು ಈಗಾಗಲೇ ತುಕ್ಕು ಹಿಡಿದಿವೆ. ಮಳೆಗಾಲದಲ್ಲಿ 8 ಚೆಕ್‌ ಡ್ಯಾಂಗಳಿಂದ, ಐದು ಪೈಪ್‌ಲೈನ್‌ನಲ್ಲಿ 2 ಸಾವಿರ ಎಚ್‌.ಪಿ. ಪಂಪ್‌ಗಳಿಂದ ನೀರು ಹರಿಸಿದರೆ, ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ’ ಎಂದು ಗ್ರಾಮಸ್ಥರು ಹೇಳಿದ್ದಾರೆ.

ನೀರು ಹರಿಸಿ ರಸ್ತೆ, ಆಸ್ತಿ ಹಾನಿ ಮಾಡುತ್ತಿರುವುದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ವರದಿ ನೀಡುವಂತೆ ಕೇಳಿದ್ದೇನೆ.
–ಸಿಮೆಂಟ್ ಮಂಜು, ಶಾಸಕ

‘ನೀರು ಹರಿಸಿದಾಗಲೇ ಸೋರಿಕೆ ಪತ್ತೆ’

‘ಕಾಡಮನೆ ಚೆಕ್‌ಡ್ಯಾಂ 4 ಮತ್ತು 5ರಲ್ಲಿ ಮಾತ್ರ ಈಗ ನೀರಿನ ಲಭ್ಯತೆ ಇದೆ. ಅಲ್ಲಿಂದ ಪರೀಕ್ಷಾರ್ಥವಾಗಿ ನೀರು ಹರಿಸಲಾಗುತ್ತಿದೆ. ನೀರು ಹರಿಸುವುದರಿಂದ ಮಾತ್ರ ಎಲ್ಲೆಲ್ಲಿ ಸೋರಿಕೆ ಆಗುತ್ತಿದೆ ಎಂಬುದು ಗೊತ್ತಾಗುತ್ತದೆ’ ಎಂದು ವಿಶ್ವೇಶ್ವರಯ್ಯ ಜಲನಿಗಮದ ಎತ್ತಿನಹೊಳೆಯ ಯೋಜನೆ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್‌ ಹೇಳಿದ್ದಾರೆ.

‘ಐದು ದಿನಗಳ ಹಿಂದೆ 6 ಕಿ.ಮೀ. ನೀರು ಹರಿಸಿದಾಗ ನಾಲ್ಕೈದು ಕಡೆ ಸೋರಿಕೆ ಆಗಿತ್ತು. ತಕ್ಷಣವೇ ದುರಸ್ತಿ ಮಾಡಿದ್ದೇವೆ. ಅಲ್ಲಿಂದ ದೊಡ್ಡನಾಗರ ವರೆಗೆ 14 ಕಿ.ಮೀ. ಪರೀಕ್ಷೆ ನಡೆಸುತ್ತಿದ್ದು, ಹಾರ್ಲೆ ಕೂಡಿಗೆ ಬಳಿ ಸೋರಿಕೆ ಆಗಿದೆ. ಅದನ್ನೂ 24 ಗಂಟೆಯೊಳಗೆ ದುರಸ್ತಿ ಮಾಡುತ್ತೇವೆ. ಉಳಿದ 6 ಚೆಕ್‌ಡ್ಯಾಂಗಳಲ್ಲಿ ನೀರಿನ ಲಭ್ಯತೆ ಇಲ್ಲ. ಮುಂದಿನ ಮಳೆಗಾಲದಲ್ಲಿ ಪರೀಕ್ಷಾರ್ಥವಾಗಿ ನೀರು ಹರಿಸಲಾಗುವುದು’ ಎಂದು ಅವರು ಹೇಳಿದರು.

ನೆಲದಲ್ಲಿ ಪೈಪ್‌ಲೈನ್, ಮೇಲೆ ಹೈಟೆನ್ಷನ್‌ ವಿದ್ಯುತ್ ಮಾರ್ಗವಿದೆ. ಕೋಲಾರ, ಬೆಂಗಳೂರಿಗೆ ನೀರಂತೂ ಹರಿಯಲ್ಲ. ನಾವೆಲ್ಲಾ ಆತಂಕದಲ್ಲಿ ಬದುಕಬೇಕಾಗಿದೆ.
–ವಿಜಿತ್ ಕುಂಬರಡಿ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT