ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಮನಸೋತ ಬಿಬಿಎಂ ಪದವೀಧರ

ಕೃಷಿ–ಖುಷಿ
Last Updated 1 ಮೇ 2014, 8:17 IST
ಅಕ್ಷರ ಗಾತ್ರ

ರಾಮನಾಥಪುರ: ಬಿಬಿಎಂ ಓದಿದ ಇವರಿಗೆ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಅರಸಿ ಬಂದರೂ ಇವರ ಚಿತ್ತ ಹರಿದದ್ದು ಕೃಷಿ ಕಡೆಗೆ. ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು’ ಎಂದು ಮಿಶ್ರ ಬೆಳೆಗಳನ್ನು ಬೆಳೆದು ಕೃಷಿಯಲ್ಲೇ ಸಾರ್ಥಕ ಬದುಕು ಕಟ್ಟಿಕೊಂಡ ರೈತರ ಯಶೋಗಾಥೆ ಇಲ್ಲಿದೆ.

ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿ ಹೊನಗಾನಹಳ್ಳಿಯ ರೈತ ಎಚ್.ಎ. ರವೀಂದ್ರಕುಮಾರ್ ಅವರೇ ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡವರು.

ಇವರ 25 ಎಕರೆ ಜಮೀನಿನ ತುಂಬ ಮಿಶ್ರ ಬೆಳೆಗಳು ರಾರಾಜಿಸುತ್ತಿವೆ. ಅಡಿಕೆ, ತೆಂಗು, ಹಲಸು, ಮಾವು, ನೆಲ್ಲಿ, ಅಂಟುವಾಳ, ಸಿಲ್ವರ್, ಅಕೇಶಿಯ, ಮೊಸಂಬಿ, ನಿಂಬೆ, ಕಿತ್ತಾಳೆ, ದಾಳಿಂಬೆ, ಪೇರಲ, ಕರಿಬೇವು, ಬಾಳೆ, ಕಾಫಿ. ಅಬ್ಬಾ.... ಒಂದೇ ಎರಡೇ..

ತಾಜಾ ತರಕಾರಿ: ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವಿಧಿಯಿಲ್ಲದೇ ನೂರಾರು ರೂಪಾಯಿ ಖರ್ಚು ಮಾಡಿ ಅದನ್ನು ಖರೀದಿಸಿದರೂ ತಾಜಾತನದ ಬಗ್ಗೆ ಖಾತ್ರಿ ಇರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಮನೆಯಲ್ಲಿಯೇ ಬೇಕಾದ ತರಕಾರಿ ಬೆಳೆದು, ತಾಜಾ  ತರಕಾರಿ ಸೇವಿಸಿದರೆ ಹಣ ಉಳಿತಾಯ ಮಾತ್ರವಲ್ಲದೆ ಆರೋಗ್ಯವನ್ನೂ ಕಾಪಾಡಬಹುದು ಎನ್ನುವುದು ಸಾವಯವ ಕೃಷಿಕ ಎಚ್.ಎ. ರವೀಂದ್ರಕುಮಾರ್ ಅಭಿಮತ.

ರವೀಂದ್ರಕುಮಾರ್‌ ಅವರು ಆಗಿನ ಕೃಷಿ ಸಚಿವ ಟಿ.ಬಿ. ಜಯಚಂದ್ರ ಅವರಿಂದ ವಿಧಾನಸೌಧದ ಬ್ಯಾಕ್ವೇಟ್ ಹಾಲ್‌ನಲ್ಲಿ 2001ರಲ್ಲಿ ನಡೆದ ಸಮಾರಂಭದಲ್ಲಿ ‘ಕೃಷಿ ಪ್ರಶಸ್ತಿ’ ಪಡೆದಿದ್ದರು.

‘ವಾರ್ಷಿಕ ಮತ್ತು ಬಹು ವಾರ್ಷಿಕ ಬೆಳೆಗಳನ್ನು ಸಹಜ ಹಾಗೂ ಸಾವಯವ ಕೃಷಿಯಿಂದ ಕಡಿಮೆ ಖರ್ಚಿನಲ್ಲಿ ಬೆಳೆದು ಹೆಚ್ಚು ಲಾಭ ಪಡೆಯಬಹುದು’ ಎನ್ನುವುದು ಅವರ ಅನುಭವದ ಮಾತು. ಸಮಗ್ರ ಹಾಗೂ ಬೆಳೆ ವೈವಿಧ್ಯದಿಂದ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳ ಬಹುದು. ಗುಣಮಟ್ಟದ ಉತ್ಪಾದನೆ ಹಾಗೂ ಹೆಚ್ಚಿನ ಲಾಭ ಗಳಿಸಬಹುದು ಎನ್ನುತ್ತಾರೆ.

ಸಾವಯವ ಗೊಬ್ಬರ: ಇವರ ಬಳಿ 10ರಿಂದ 15 ಹಸುಗಳಿವೆ. ಇದರಿಂದಾಗಿ ಅವರಿಗೆ ಗೊಬ್ಬರದ ಸಮಸ್ಯೆ ಬಾಧಿಸುತ್ತಿಲ್ಲ. ಅಷ್ಟೇ ಅಲ್ಲದೇ ಬೆಳೆಗಳಿಗೆ ಅವಶ್ಯವಿರುವ ಎರೆ ಗೊಬ್ಬರವನ್ನು ತಾವೇ ತಯಾರಿಸುತ್ತಾರೆ. ತೋಟದಲ್ಲಿರುವ ಗಿಡ ಮರಗಳಿಂದ ಬಿದ್ದ ಎಲೆಗಳನ್ನು ಸಂಗ್ರಹಿಸಿಯೂ ಗೊಬ್ಬರ ಮಾಡುತ್ತಾರೆ. ಹೀಗೆ ಸಾವಯವ ಹಾಗೂ ನೈಸರ್ಗಿಕವಾಗಿಯೇ ಇವರಿಗೆ ಏನಿಲ್ಲವೆಂದರೂ ಆರು ಟನ್ ಗೊಬ್ಬರ ಸಿಗುತ್ತದೆ.

ಜೋಳದ ಬೆಳೆ ಜೊತೆಯಲ್ಲಿಯೇ ತೆಂಗು, ಮಾವು ಗಿಡಗಳನ್ನು ಬೆಳೆಸಿದ್ದಾರೆ. ಭತ್ತದ ಬೆಳೆಯಿಂದ ಅತ್ಯಧಿಕ ಲಾಭ ಗಳಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ. ಹಿಂಗಾರು, ಮುಂಗಾರು ಹೀಗೆ ಕಾಲಕಾಲಕ್ಕೆ ತಕ್ಕಂತೆ ಆಯಾ ಬೆಳೆಗಳನ್ನು ಬೆಳೆದು ಅದರಲ್ಲಿ ಲಾಭ ಕಂಡುಕೊಳ್ಳುವುದು ಇವರ ಯಶಸ್ಸಿನ ಗುಟ್ಟಾಗಿದೆ.

ವಿದ್ಯಾವಂತರು ಕೃಷಿಯನ್ನು ಬಿಟ್ಟು ನಗರಗಳತ್ತ ಗುಳೆ ಹೋಗುತ್ತಿರುವುದು ದುಃಖದ ವಿಷಯ . ಕೃಷಿಯಲ್ಲಿ ಯುವಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎನ್ನುವುದು ರವೀಂದ್ರಕುಮಾರ್‌ ಅವರ ಕಳಕಳಿ.

ಮಿಶ್ರ ಬೆಳೆ ಬೆಳೆಯಲು ಪುತ್ರಿಯರಾದ ಮೇಘನಾ, ಮಾನಸಾ ಹಾಗೂ ಪತ್ನಿ ಕೆ.ಎಂ. ಪ್ರೇಮಕುಮಾರಿ ಸಹಕಾರ ನೀಡುತ್ತಿದ್ದಾರೆ. ರವೀಂದ್ರಕುಮಾರ್ ಅವರನ್ನು ದೂರವಾಣಿ 9448941028 ಮೂಲಕ ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT